Advertisement

ಅಕ್ರಮ ಗಮನ ಸೆಳೆಯಲು ಪಾದಯಾತ್ರೆ: ಶರಣಪ್ರಕಾಶ

06:56 PM Jul 15, 2021 | Team Udayavani |

ಚಿಂಚೋಳಿ: ಸೇಡಂ ಮತ್ತು ಚಿಂಚೋಳಿ ತಾಲೂಕಿನ ರೈತರ ಜೀವನಾಡಿ ಆಗಿರುವ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಮುಖ್ಯಕಾಲುವೆ ಮತ್ತು ಜಲಾಶಯ ಆಧುನೀಕರಣ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮ, ಭ್ರಷ್ಟಾಚಾರ ಕುರಿತು ಸರ್ಕಾರದ ಗಮನ ಸೆಳೆಯಲು ಮುಲ್ಲಾಮಾರಿ ಜಲಾಶಯದಿಂದ (ನಾಗರಾಳ ಗ್ರಾಮದಿಂದ) ಕರ್ಚಖೇಡ ಗ್ರಾಮದವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಮಾಜಿ ಸಚಿವ ಡಾ|ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ಸುಲೇಪೇಟ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಅಧಿ ಕಾರದಲ್ಲಿದ್ದಾಗ ಕಲ್ಯಾಣ ಕರ್ನಾಟಕದ ಬೆಣ್ಣೆತೊರೆ, ಗಂಡೋರಿ ನಾಲಾ, ಅಮರ್ಜಾ, ಕಾರಂಜಾ, ಕೆಳದಂಡೆ ಮುಲ್ಲಾಮಾರಿ, ನೀರಾವರಿ ಯೋಜನೆಗಳನ್ನು ಪುನಶ್ಚೇತನಗೊಳಿಸಿ ರೈತರ ಹೊಲಗಳಿಗೆ ನೀರು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ 10 ಸಾವಿರ ಕೋಟಿ ರೂ. ನೀರಾವರಿ ಯೋಜನೆಗಳಿಗೆ ನೀಡಿತ್ತು. ಅದರಲ್ಲಿ ಚಿಂಚೋಳಿ ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯ 80 ಕಿ.ಮೀ ಮುಖ್ಯಕಾಲುವೆ ನವೀಕರಣ ಮಾಡುವುದಕ್ಕಾಗಿ ಮಧ್ಯಮ ನೀರಾವರಿ ಸಚಿವ ಎಂ.ಬಿ.ಪಾಟೀಲ ಜಲಾಶಯಕ್ಕೆ ಭೇಟಿ ನೀಡಿ ಕರ್ನಾಟಕ ನೀರಾವರಿ ನಿಗಮದಿಂದ 128   ಕೋಟಿ ರೂ. ಅನುದಾನ ನೀಡಿದ್ದೆವು. ಆದರೆ ಮುಖ್ಯಕಾಲುವೆ ಆಧುನೀಕರಣ ಕಾಮಗಾರಿ ಸಂಪೂರ್ಣವಾಗಿ ಕಳಪೆಮಟ್ಟದಿಂದ ಕೂಡಿದೆ ಎಂದು ಆಪಾದಿಸಿದರು.

ಚಿಮ್ಮನಚೋಡ, ಚಿಮ್ಮಾಇದಲಾಯಿ, ಸುಲೇಪೇಟ, ಬೆಡಕಪಳ್ಳಿ, ರಾಮತೀರ್ಥ, ಯಾಕಾಪುರ, ಗರಗಪಳ್ಳಿ, ಮೋತಕಪಳ್ಳಿ, ಚಿಮ್ಮಾಇದಲಾಯಿ, ದಸ್ತಾಪುರ, ದೋಟಿಕೊಳ, ಕನಕಪುರ, ಗೌಡನಹಳ್ಳಿ, ನಿಮಾಹೊಸಳ್ಳಿ, ಅಣವಾರ, ಪೆಂಚನಪಳ್ಳಿ, ಕೆರೋಳಿ ಮುಂತಾದ ಗ್ರಾಮಗಳಲ್ಲಿ ಕಾಲುವೆ ಕಾಮಗಾರಿ ಸಂಪೂರ್ಣ ಕಳಪೆಮಟ್ಟದಿಂದ ಕೂಡಿದೆ ಎಂದು ಹೇಳಿದರು.

ಜಲಾಶಯದ ಗೇಟಿನ ಕೆಳಭಾಗದಲ್ಲಿ 40ಕೋಟಿ ರೂ. ಅನುದಾನ ನೀಡಲಾಗಿದೆ. ಕೆಲಸ ಸಂಪೂರ್ಣ ಕಳಪೆಮಟ್ಟದಿಂದ ಕೂಡಿದ್ದರಿಂದ ಎಲ್ಲವೂ ನೀರಿನ ರಭಸಕ್ಕೆ ಕಿತ್ತುಕೊಂಡು ಹೋಗಿದೆ. ಯೋಜನೆಯ ಪುರ್ನವಸತಿ ಕೇಂದ್ರಗಳಲ್ಲಿ ವಾಸಿಸುವ ನಿರಾಶ್ರಿತರಿಗೆ ಮೂಲ ಸೌಕರ್ಯ ನೀಡಲು 18 ಕೋಟಿ ರೂ.ನೀಡಲಾಗಿದೆ. ಆದರೆ ಕೆಲಸಗಳೆಲ್ಲವೂ ಕಳಪೆಮಟ್ಟದಿಂದ ಮಾಡಲಾಗಿದೆ. ಈ ಕಾಮಗಾರಿಗಳನ್ನು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next