Advertisement

ಮದ್ಯ ನಿಷೇಧಕ್ಕೆ ನದಿ ಸ್ವಚ್ಛತೆ ಹೋರಾಟ

04:37 PM Jan 31, 2020 | Suhan S |

ಬಾಗಲಕೋಟೆ: ರಾಜ್ಯಾದ್ಯಂತ ಮದ್ಯ ನಿಷೇಧಿಸುವಂತೆ ಒತ್ತಾಯಿಸಿ ನೂರಾರು ಮಹಿಳೆಯರು ಜಿಲ್ಲೆಯ ಕೂಡಲಸಂಗಮದಲ್ಲಿ ವಿನೂತನ ಪ್ರತಿಭಟನೆ ನಡೆಸುತ್ತಿದ್ದು, ಗುರುವಾರ ನದಿ ಸ್ವಚ್ಛತೆಯ ಶ್ರಮದಾನ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

Advertisement

ರಾಜ್ಯದ 16 ಜಿಲ್ಲೆಗಳ ಸುಮಾರು 800ಕ್ಕೂ ಹೆಚ್ಚು ಮಹಿಳೆಯರು, ಕಳೆದ ನಾಲ್ಕು ದಿನಗಳಿಂದ ಕೂಡಲಸಂಗಮದಲ್ಲಿ ವಿವಿಧ ರೀತಿಯ ಹೋರಾಟ ನಡೆಸಿದ್ದು, ಜಲ ಸತ್ಯಾಗ್ರಹ ನಡೆಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು. ಗುರುವಾರ ಬೆಳಗ್ಗೆ ನೂರಾರು ಮಹಿಳೆಯರು, ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ತ್ರಿವೇಣಿ ಸಂಗಮವಾದ ಕೃಷ್ಣಾ ನದಿ ಸ್ವಚ್ಛಗೊಳಿಸಿದರು. ತ್ರಿವೇಣಿ ಸಂಗಮವಾದ ಕೂಡಲಸಂಗಮಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಿದ್ದು, ಭಕ್ತರು ಸ್ನಾನ ಮಾಡಿ, ನದಿಗೆ ಎಸೆದ ಬಟ್ಟೆ, ಪ್ಲಾಸ್ಟಿಕ್‌ ಸಹಿತ ವಿವಿಧ ತ್ಯಾಜ್ಯ ಸ್ವಚ್ಛಗೊಳಿಸಿದರು.

ಅಲ್ಲದೇ ಬಸವಣ್ಣನವರ ಐಕ್ಯ ಸ್ಥಳ, ಸಂಗಮೇಶ್ವರ ದೇವಾಲಯ ಮೂಲಕ ಗಮನ ಸೆಳೆಯುವ ಕೂಡಲಸಂಗಮ ಕ್ಷೇತ್ರದ ಬಸ್‌ ನಿಲ್ದಾಣ, ಪ್ರಮುಖ ರಸ್ತೆಗಳನ್ನೂ ಸ್ವಚ್ಛಗೊಳಿಸಿದರು. ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಂಚಾಲಕಿ ಸ್ವರ್ಣಾ ಭಟ್‌, ಎಂ. ಅಭಯ, ಶಂಕರ, ಮಹಾಂತೇಶ ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next