ರಾಮನಗರ: ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನ ಮೂಲಗಳಾದ ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಬಫರ್ ಜೋನ್ ಅನ್ನು 1 ಕಿ.ಮೀ. ನಿಂದ 500 ಮೀಟರ್‌ಗೆ ಮತ್ತು 2 ಕಿ.ಮೀ ನಿಂದ 1 ಕಿ.ಮೀಗೆ ಕಡಿತಗೊಳಿಸುವ ಜೆಡಿಎಸ್-ಕಾಂಗ್ರೆಸ್ ಸರ್ಕಾರ ತನ್ನ ಅಸ್ತಿತ್ವ ಕಳೆದುಕೊಳ್ಳುವ ಕಲವೇ ದಿನಗಳ ಮುನ್ನ ನಿರ್ಣಯ ಕೈಗೊಂಡಿದ್ದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಡಿಸಿಎಂ ನೇತೃತ್ವದ ಸಭೆ: ದುರದ್ದೇಶ ಪೂರಿತ ನಿರ್ಣಯ!: ವಲಯ 4ರಲ್ಲಿ ಶೈಕ್ಷಣಿಕ, ವೈದ್ಯಕೀಯ, ಆಸ್ಪತ್ರೆ, ಹಾಸ್ಟೆಲ್ ಉದ್ದೇಶಗಳನ್ನು ಹೊರತುಪಡಿಸಿ ಇನ್ನಾವುದೇ ಚಟುವಟಿಕೆಗಳಿಗೆ ವಿನಾಯಿತಿ ಇಲ್ಲ ಎಂಬುದಾಗಿ ಜು.20 ರಂದು ಉಪಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸರ್ಕಾರದ ನಡಾವಳಿಗಳು ದೃಢಪಡಿಸಿವೆ!
ಹೀಗೆ ಬಫರ್ ಜೋನ್ ಪುನರ್ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕೆಲವು ಪ್ರಭಾವಿಗಳಿಗೆ ಅನುಕೂಲ ಮಾಡಿಕೊಡುವ ದುರದ್ದೇಶವಿದೆ ಎಂದು ನಾಗರಿಕವಲಯದಲ್ಲಿ ಟೀಕೆಗಳು ವ್ಯಕ್ತವಾಗಿವೆ.
ಈ ಹಿಂದೆ ಇದ್ದ ನಿಯಮಗಳೇನು? ; 18 ನವೆಂಬರ್ 2013ರಲ್ಲಿ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯು ಪರಿಸರ (ನಿಯಂತ್ರಣ) ಕಾಯ್ದೆ 1986ರ ಕಲಂ 5ರಡಿಯಲ್ಲಿ ಅರ್ಕಾವತಿ ಮತ್ತು ಕುಮುದ್ವತಿ ನದಿಗಳನ್ನು ರಕ್ಷಿಸಿ, ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶವನ್ನು ವಲಯ 1, 2, 3 ಮತ್ತು 4 ಹೀಗೆ ನಾಲ್ಕು ವಲಯಗಳನ್ನಾಗಿ ವಿಂಗಿಡಸಲಾಗಿತ್ತು.
Advertisement
ತಿಪ್ಪಗೊಂಡನಹಳ್ಳಿ ಜಲಾಶಯವನ್ನು ನಾಲ್ಕು ವಲಯಗಳನ್ನಾಗಿ ವಿಂಗಡಿಸಲಾಗಿದೆ. ವಲಯ 1 ಮತ್ತು 2ರಲ್ಲಿನ ಬಫರ್ ಜೋನ್‌ನಲ್ಲಿ ಮೈತ್ರಿ ಸರ್ಕಾರ ಯಾವ ಬದಲಾವಣೆ ಮಾಡಿಲ್ಲ. ಆದರೆ ವಲಯ 3 ಮತ್ತು 4ರಲ್ಲಿ ಬಫರ್ ಜೋನ್ ಪುನರ್ ನಿಗದಿಪಡಿಸಿದೆ.
Related Articles
Advertisement
ವಲಯ 1 ತಿಪ್ಪಗೊಂಡನಹಳ್ಳೀ ಜಲಾಶಯ ಮತ್ತು ಅದರ ಜಲಾನಯನ ಪ್ರದೇಶ ಒಳಗೊಂಡಿದೆ. ಈ ಜಲಾನಯನ ಪ್ರದೇಶದಲ್ಲಿ ಯಾವ ರೀತಿಯ ಚಟುವಟಿಕೆಗಳಿಗೂ ಅವಕಾಶವಿಲ್ಲ. ವಲಯ 2 ಜಲಾಶಯದ ಜಲಾನಯನ ಪ್ರದೇಶದ 2 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಇಲ್ಲಿ ಕೃಷಿ ಚಟುವಟಿಕೆಗಳಿಗೆ ಮಾತ್ರ ಅವಕಾಶ. ವಲಯ 3 ಅರ್ಕಾವತಿ (ಹೆಸರಘಟ್ಟ ಕೆರೆವರೆಗೆ) ಮತ್ತು ಕುಮುದ್ವತಿ ನದಿಗಳ ಅಕ್ಕಪಕ್ಕ 1 ಕಿ.ಮೀ ವರೆಗೆ ಕೃಷಿ ಚಟುವಟಿಕೆಗಳಿಗೆ ಮಾತ್ರ ಅವಕಾಶ. ವಲಯ 4 ಅರ್ಕವತಿ ಮತ್ತು ಕುಮುದ್ವತಿ ನದಿಗಳ ಅಕ್ಕಪಕ್ಕ ನಿಗದಿಯಾಗಿರುವ ಬಫರ್ ಜೋನ್ 1 ರಿಂದ 2ನೇ ಕಿ.ಮೀವರೆಗೆ ಹಸಿರು ವಲಯದಲ್ಲಿ ವರ್ಗೀಕರಣವಾಗಿರುವ ಮತ್ತು ರಾಜ್ಯ ಮಾಲಿನ್ಯ ನಿಯಂತ್ರ ಮಂಡಳಿಯ ನಿರ್ದೇಶನದಂತೆ ಮಳೆ ನೀರು ಕೊಯ್ಲು ಮತ್ತು ನೀರು ಸಂಸ್ಕರಣಾ ಘಟಕಗಳನ್ನು ಹೊಂದಿರುವ ಕೈಗಾರಿಕೆಗಳಿಗೆ ಮಾತ್ರ ಅವಕಾಶ. ನೆಲಮಹಡಿ ಇರುವ ಕಟ್ಟಡಗಳ ನಿರ್ಮಾಣಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು.
ಪುನರ್ ನಿಗದಿಗೆ ಸರ್ಕಾರದ ವಾದವೇನು?: 18 ನವೆಂಬರ್ 2013ರಲ್ಲಿ ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶವನ್ನು 4 ವಲಯಗಳನ್ನಾಗಿ ಮತ್ತು ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಬಫರ್ ಜೋನ್ ಅನ್ನು 2 ಕಿ.ಮೀವರೆಗೆ ನಿಗದಿ ಪಡಿಸಲಾಗಿತ್ತು. ಆದರೆ ಸದರಿ ಪ್ರದೇಶದ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಸರ್ಕಾರದ ವಾದ.
ಮೇಲಾಗಿ ಕುಡಿಯುವ ನೀರಿನ ಜಲಾಶಯ ಮತ್ತು ಅದಕ್ಕೆ ನೀರೊದಗಿಸುವ ನದಿ ಮೂಲಗಳ ಸಂರಕ್ಷಣೆಗೆ ಸಂಬಂಧಿ ಸಿದಂತೆ ನಿರ್ದಿಷ್ಟವಾಗಿ ಒದಗಿಸಬೇಕಾಗ ಬಫರ್ ಜೋನ್ ಬಗ್ಗೆ ಯಾವುದೇ ನಿಖರ ವೈಜ್ಞಾನಿಕ ಮಾರ್ಗ ಸೂಚಿಗಳು ಇಲ್ಲ. ಮೇಲಾಗಿ ದೇಶದ ಪ್ರಮುಖ ನದಿಯಾಗ ಗಂಗಾನದಿಗೆ ಸಂಬಂಧಿಸದಿಂತೆ 100 ಮೀಟರ್‌ವರೆಗೆ ಬಫರ್ ಅನ್ನು ನಿಗದಿಪಡಿಸಲಾಗಿದ್ದು, ಇತರ ಯಾವುದೇ ರಾಜ್ಯಗಳ ನದಿ ಪಾತ್ರಗಳಲ್ಲಿಯೂ ಈ ರೀತಿಯ ನಿರ್ಬಂದವನ್ನು ಹೇರಲಾಗಿಲ್ಲ. ರಾಜ್ಯದ ಇನ್ನಾವುದೇ ನದಿಗಳ ವ್ಯಾಪ್ತಿಯಲ್ಲಿ ಇಷ್ಟು ಅಂತರದವರೆಗೆ ಬಫರ್ ಜೋನ್ ನಿಗದಿಯಾಗಿಲ್ಲ ಎಂಬ ಅಧ್ಯಯನದ ಅಂಶವನ್ನು ಮೈತ್ರಿ ಸರ್ಕಾರ ಪರಿಗಣಿಸಿದೆ.
ತಡೆಯಾಜ್ಞೆ ನೀಡಿದ್ದ ಸರ್ಕಾರ: ಅಭಿವೃದ್ಧಿಗೆ ಮಾರಕವಾಗಲಿದೆ ಎಂಬ ನೆಪವನ್ನು ಇಟ್ಟುಕೊಂಡು 24 ಜುಲೈ 2014ರಲ್ಲಿ ಅಂದಿನ ಸರ್ಕಾರ ಮೇಲ್ಕಂಡ ಅಧಿಸೂಚನೆಯನ್ನು (18 ನವೆಂಬರ್ 2003ರ ಅಧಿಸೂಚನೆಯನ್ನು ) ಹಿಂಪಡೆದು ಕೊಂಡು ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದಲ್ಲಿ ಯಾವುದೇ ಹೊಸ ಅನಧಿಕೃತ ಕಟ್ಟಡಗಳು ಮತ್ತು ಕೃಷಿಯೇತರ ಚಟುವಟಿಕೆಗಳಿ ಅವಕಾಶ ನೀಡಬಾರದು ಎಂದು ಮತ್ತೂಂದು ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ ಉಚ್ಚ ನ್ಯಾಯಾಲಯ ರಿಟ್ ಸಂಖ್ಯೆ 38218/2013, ದಿನಾಂಕ 28 ಜುಲೈ 2014, ತಡೆಯಾಜ್ಞೆ ನೀಡಿ, ಸರ್ಕಾರದ ನಿಲುವನ್ನು ತಿಳಿಸುವಂತೆ ಆದೇಶಿಸಿತ್ತು.
ಸೂಕ್ತ ನಿರ್ಧಾರಕ್ಕೆ ಸೂಚನೆ: ಸರ್ಕಾರದ ನಿಲುವನ್ನು ತಿಳಿಸುವಂತೆ ಉಚ್ಚ ನ್ಯಾಯಾಲಯಕ್ಕೆ ತಿಳಿಸುವ ಸಂಬಂಧ 28 ಜೂನ್ 2019ರಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ವಿಷಯ ಚರ್ಚೆಯಾಗಿ ಬಫರ್ ಜೋನ್ ವಿಚಾರದಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ನಗರಾಭಿವೃದ್ಧಿ ಇಲಾಖೆಗೆ ಸೂಚಿಸಲಾಗಿತ್ತು.
ಪರಿಸರವಾದಿ ಅಸಮಾಧಾನ: ನಂದಿ ಬೆಟ್ಟದಲ್ಲಿ ಹುಟ್ಟಿ ಹರಿಯುವ ಅರ್ಕಾವತಿ ನದಿ ನೀರಿಗೆ ಈಗಾಗಲೆ ತ್ಯಾಜ್ಯ ಸೇರುತ್ತಿದ್ದು ಮಲೀನವಾಗುತ್ತಿದೆ. ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಮಂಚನಬೆಲೆ ಜಲಾಶಯಕ್ಕೆ ಮಲೀನ ನೀರು ಶೇಖರಣೆಯಾಗುತ್ತಿದೆ. ಸರ್ಕಾರದ (ಮೈತ್ರಿ ಸರ್ಕಾರ) ಈ ನಿರ್ಧಾರದಿಂದ ನದಿ ನೀರು ಇನ್ನಷ್ಟು ಕಲುಷಿತವಾಗಲಿದೆ ಎಂದು ನಾಗರಿಕರು ಮತ್ತು ಪರಿಸರವಾದಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಬಫರ್ ಜೋನ್ ಅಂತರವನ್ನು ಇಳಿಸಲು ನಿರ್ಣಯ:
ಇದಾದ ನಂತರ 6 ಜುಲೈ 2019 ಮತ್ತು 18 ಜುಲೈ 2019ರಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಶಭಿವೃದ್ಧಿ ಇಲಾಖೆ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆದು ಚರ್ಚೆಗಳಾಗಿದ್ದವು. ಅಂತಿಮವಾಗಿ 20.7.2019ರಲ್ಲಿ ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಲಯ 3 ಮತ್ತು ವಲಯ 4ರಲ್ಲಿ ಅರ್ಕಾವತಿ ಮತ್ತು ಕುಮುದ್ವತಿ ನದಿಗಳ ಬಫರ್ ಜೋನ್ ಅಂತರವನ್ನು ಇಳಿಸಲು ನಿರ್ಣಯಕೈಗೊಳ್ಳಲಾಗಿದೆ.
● ಬಿ.ವಿ.ಸೂರ್ಯ ಪ್ರಕಾಶ್