ಶಿರಸಿ: ರಾಜ್ಯ ಸರ್ಕಾರ ಬೇಡ್ತಿ ವರದಾ ನದಿ ಜೋಡಣೆ ಯೋಜನೆ ವಿವರ ಯೋಜನಾ ವರದಿ ಸಿದ್ದಪಡಿಸಿ ಮುಂದಿನ ತಯಾರಿಗೆ ಹೆಜ್ಜೆ ಇಡಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಬೇಡ್ತಿ – ವರದಾ ಯೋಜನೆ ವಿರೋಧಿಸಿ ಜೂ.14 ರಂದು ಬೃಹತ್ ಜನ ಜಾಗೃತಿ ಸಭೆ ಆಯೋಜಿಸಿದೆ. ಸಮಿತಿಯ ಗೌರವಾಧ್ಯಕ್ಷ, ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನೇತೃತ್ವದಲ್ಲಿ ಈಗಾಗಲೇ ವ್ಯಾಪಕ ತಯಾರಿ ನಡೆದಿದೆ.
ಜಾಗತಿಕ ಪರಿಸರ ದಿನ ಜೂ.5 ರಂದು ಬೆಳಗ್ಗೆ 10:30ಕ್ಕೆ ಶಾಲ್ಮಲಾ ನದಿಯ ಸಹಸ್ರಲಿಂಗದಲ್ಲಿ ನದಿ ಪೂಜೆಯೊಂದಿಗೆ ಬೇಡ್ತಿ ಕಣಿವೆ ಸಂರಕ್ಷಣಾ ಅಭಿಯಾನ ಆರಂಭವಾಗಲಿದೆ. ಶಾಲ್ಮಲಾ ನದಿ ತೀರದ ಹಳ್ಳಿಗಳ ಜನರು ಆಗಮಿಸಿ ಹೋರಾಟದ ಸಂಕಲ್ಪ ಮಾಡಲಿದ್ದಾರೆ. ಜೂ.6 ರಂದು ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ವನವಾಸೀ ಬಂಧುಗಳ ಸಭೆಯಲ್ಲಿ ಪೂಜ್ಯ ಸ್ವರ್ಣವಲ್ಲೀ ಶ್ರೀಗಳು ಪರಿಸರ ಜಾಗೃತಿಗೆ ಕರೆ ನೀಡಲಿದ್ದಾರೆ.
7ರಂದು ಯಲ್ಲಾಪುರದಲ್ಲಿ ನಂದೊಳ್ಳಿ, ಚಂದಗುಳಿ ಮುಂತಾದ ಹಳ್ಳಿಗಳಲ್ಲಿ ಬೇಡ್ತಿ ಅಭಿಯಾನ ನಡೆಯಲಿದೆ. ಜೂ.8 ರಂದು ಬೇಡ್ತಿ ಸೇತುವೆ ಮೇಲ್ಭಾಗದ ಯಲ್ಲಾಪುರ ಮುಂಡಗೋಡ ತಾಲೂಕುಗಳಿಗೆ ಅಭಿಯಾನದ ಸಂದೇಶ ತಲುಪಲಿದೆ. ಜೂ.9 ರಂದು ಹಿತ್ಲಳ್ಳಿ, ಉಮ್ಮಚಗಿ ಕುಂದರಗಿ ಭಾಗದ ಹಳ್ಳಗಳಲ್ಲಿ ಬೇಡ್ತಿ ಅಭಿಯಾನ ನಡೆಯಲಿದೆ. ನಂತರ ಜೂ.14 ರ ವರೆಗೆ ಸಾಲ್ಕಣಿ, ವಾನಳ್ಳಿ ಹುಲೇಕಲ್ ಹಳ್ಳಿಗಳಲ್ಲಿ ಸದಾಶಿವಳ್ಳಿ ಬಿಸಲಕೊಪ್ಪ, ಇಸಳೂರು ಹಳ್ಳಿಗಳಲ್ಲಿ ಜಾಗೃತಿ ಅಭಿಯಾನ ನಡೆಯಲಿದೆ. ಸ್ವರ್ಣವಲ್ಲೀ ಶ್ರೀಗಳು ಭೈರುಂಬೆ, ಯಲ್ಲಾಪುರ, ಸಾಲ್ಕಣಿ ಗಳಲ್ಲಿ ಭಕ್ತರಿಗೆ ಜೂ.14 ರಂದು ಮಂಚಿಕೇರಿಗೆ ಬನ್ನಿ ಎಂಬ ಆಹ್ವಾನ ನೀಡಿದ್ದಾರೆ.
ಅಂದು ಮಧ್ಯಾಹ್ನ 3ಕ್ಕೆ ಮಂಚಿಕೇರಿ ಸಮಾಜ ಮಂದಿರದಲ್ಲಿ ಬೇಡ್ತಿ ಕಣಿವೆ ಸಂರಕ್ಷಣಾ ಸಭೆ ನಡೆಯಲಿದೆ. ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಈಗಾಗಲೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ, ಸಚಿವ ಶಿವರಾಮ ಹೆಬ್ಟಾರ್ ಅವರನ್ನು ಆಹ್ವಾನಿಸಲಾಗಿದೆ. ಪರಿಸರ ವಿಜ್ಞಾನಿಗಳು, ಸ್ಥಳೀಯ ಜನಪ್ರತಿನಿಧಿಗಳು, ಸಹಕಾರಿ ಕ್ಷೇತ್ರ, ಶಿಕ್ಷಣ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಮುಖಂಡರು ಆಗಮಿಸಲಿದ್ದಾರೆ. ಮಹಿಳೆಯರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಜಿಲ್ಲೆಯ ರೈತರು, ಪರಿಸರ ಆಸಕ್ತರು, ನಾಗರಿಕರು ಜೂ.14ರ ಬೇಡ್ತಿ ಶಾಲ್ಮಲಾ ಪಟ್ಟಣದ ಹೊಳೆ, ಕಣಿವೆ ಉಳಿಸಿ ಸಭೆಗೆ ಆಗಮಿಸಲು ಆಹ್ವಾನ ನೀಡಲಾಗಿದೆ ಎಂದು ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಅನಂತ ಹೆಗಡೆ ಅಶೀಸರ, ನಾರಾಯಣ ಹೆಗಡೆ ಗಡಿಕೈ, ಶ್ರೀಪಾದ ಹೆಗಡೆ ಶಿರನಾಲಾ, ನಾರಾಯಣ ಹೆಗಡೆ ಭಟ್ಟರ್‌ಕೇರಿ, ಗಣಪತಿ ಹೆಗಡೆ ಬಿಸ್ಲಕೊಪ್ಪ ಜಂಟಿಯಾಗಿ ತಿಳಿಸಿದ್ದಾರೆ.