Advertisement

ಅಧಿಕಾರಕ್ಕಾಗಿ ಕಂಗೆಟ್ಟು ಕುಳಿತ್ತಿದ್ದ ಸದಸ್ಯರ ಪೈಪೋಟಿ

09:51 PM Mar 13, 2020 | Lakshmi GovindaRaj |

ಕೊಳ್ಳೇಗಾಲ: ಕಳೆದ ಒಂದುವರೆ ವರ್ಷಗಳ ಹಿಂದೆ ನಗರಸಭೆಗೆ ಚುನಾವಣೆ ನಡೆದು ಸದಸ್ಯರು ಆಯ್ಕೆಗೊಂಡಿದ್ದರೂ, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಗುದ್ದಾಟದಿಂದ ನ್ಯಾಯಾಲಯದ ಮೆಟ್ಟಿಲು ಏರಿದ್ದ ಹಿನ್ನೆಲೆಯಲ್ಲಿ ಈಗ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಹೊರ ಬೀಳುತ್ತಿದ್ದಂತೆ, ಕಂಗೆಟ್ಟು ಕುಳಿತ್ತಿದ್ದ ಸದಸ್ಯರ ಪೈಪೋಟಿ ಆರಂಭಗೊಂಡಿದೆ.

Advertisement

ಈ ಹಿಂದೆ ನಗರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ-ಬಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆಂದು ಪ್ರಕಟವಾಗಿತ್ತು. ಮೀಸಲಾತಿ ಬದಲಾಯಿಸಿಕೊಡುವಂತೆ ನ್ಯಾಯಾಲಯದ ಮೆಟ್ಟಿಲು ಏರುತ್ತಿದ್ದಂತೆ ಪ್ರಕರಣಗಳು ಇತ್ಯರ್ಥವಾಗದೆ, ಕಳೆದ ಒಂದುವರೆ ವರ್ಷದಿಂದ ನೆನೆಗುದಿಗೆ ಬಿದ್ದಿತ್ತು.

ಎಲ್ಲೆಡೆ ರಾಜಕೀಯ ಚರ್ಚೆ: ಈಗ ಸರ್ಕಾರ ಮೀಸಲಾತಿ ಪಟ್ಟಿ ತಯಾರಿಸಿ, ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾದ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಮೀಸಲಾಗಿದೆ. ಕಾಂಗ್ರೆಸ್‌, ಬಿಜೆಪಿ, ಬಿಎಸ್‌ಪಿ ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮುಂದು, ತಾಮುಂದೆ ಎಂದು ಪೈಪೋಟಿ ನಡೆಸುತ್ತಿರುವುದು ಎಲ್ಲೆಡೆ ಚರ್ಚೆ ನಡೆಯುತ್ತಿದೆ.

ಅಲ್ಲಲ್ಲಿ ಮನವರಿಕೆ ಪ್ರಯತ್ನ: ನಗರಸಭೆಯಲ್ಲಿ ಒಟ್ಟು 31 ಸದಸ್ಯರಲ್ಲಿ ಬಿಜೆಪಿ- 7, ಕಾಂಗ್ರೆಸ್‌- 11, ಬಿಎಸ್‌ಪಿ- 9, ಪಕ್ಷೇತರ- 4 ಸ್ಥಾನ ಪಡೆದುಕೊಂಡಿದೆ. ಇದರಲ್ಲಿ ಬಿಜೆಪಿ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಅವರ ಒಂದು ಮತ ಮತ್ತು ಬಿಎಸ್‌ಪಿಯಿಂದ ಉಚ್ಚಾಟಿತ ಶಾಸಕ ಎನ್‌.ಮಹೇಶ್‌ ಅವರ ಒಂದು ಮತ ಸೇರಿದಂತೆ ಒಟ್ಟು 33 ಸ್ಥಾನಗಳ ಪೈಕಿ ಅಧ್ಯಕ್ಷರಾಗಲು 17 ಮತಗಳು ಬೇಕು.

ಆದರೆ, 3 ಪಕ್ಷಗಳಿಗೆ ಬಹುಮತವಿಲ್ಲದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಕುದುರೆ ವ್ಯಾಪಾರ ಮತ್ತು ಮನವರಿಕೆ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿದೆ. ಕಾಂಗ್ರೆಸ್‌ 11 ಸದಸ್ಯರನ್ನು ಹೊಂದಿರುವುದರ ಜೊತೆಗೆ ಪಕ್ಷೇತರ 4 ಸದಸ್ಯರಿದ್ದಾರೆ, ಇನ್ನೂ ಎರಡು ಸ್ಥಾನಗಳು ಬಹುಮತಕ್ಕೆ ಬೇಕಾಗಿದ್ದು, ಯಾವ ಪಕ್ಷದ ಸದಸ್ಯರನ್ನು ಮನವೊಲಿಸುವ ಪ್ರಯತ್ನ ಮಾಡುತ್ತಾರೋ ಕಾದು ನೋಡಬೇಕಾಗಿದೆ.

Advertisement

ಯಾರಿಗೂ ಬಹುಮತ ಇಲ್ಲ: ಬಿಜೆಪಿಯಲ್ಲಿ 7 ಸ್ಥಾನ ಪಡೆದುಕೊಂಡಿದ್ದು, ಶಾಸಕ ಎನ್‌.ಮಹೇಶ್‌ ಅವರಿಗೆ ಮುಖ್ಯಮಂತ್ರಿಗಳೊಂದಿಗೆ ಬಾಂಧವ್ಯವಿದೆ. ಬಿಎಸ್‌ಪಿ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡ ಪಕ್ಷದಲ್ಲಿ 16, ಬಿಜೆಪಿ ಸಂಸದರು ಒಂದು, ಶಾಸಕ ಎನ್‌.ಮಹೇಶ್‌ ಅವರು ಸೇರಿದರೆ 18 ಆಗಲಿದೆ. ಆದರೆ, ಶಾಸಕರು ಬಿಎಸ್‌ಪಿಯಿಂದ ಉಚ್ಚಾಟನೆಗೊಂಡ ವೇಳೆ ಬಿಎಸ್‌ಪಿಯ 9 ಸದಸ್ಯರಲ್ಲಿ ಏಳು ಮಂಡಿ ಬಿಎಸ್‌ಪಿ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಬ್ಬರು ಬಿಎಸ್‌ಪಿಯಲ್ಲಿ ಉಳಿದುಕೊಂಡಿದ್ದು, ಪಕ್ಷದಲ್ಲಿ ಅಂತರಿಕತೆ ಎದ್ದು ಕಾಣುತ್ತಿದ್ದು, ಯಾರಿಗೂ ಬಹುಮತ ಇಲ್ಲದಂತೆ ಆಗಿದೆ.

ಪೈಪೋಟಿಯಲ್ಲಿರುವ ಸದಸ್ಯರು: ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಮಾಜಿ ಅಧ್ಯಕ್ಷ ಶಾಂತರಾಜು, ಮಾಜಿ ಉಪಾಧ್ಯಕ್ಷ ಎ.ಪಿ.ಶಂಕರ್‌, ಉಪಾಧ್ಯಕ್ಷ ಸ್ಥಾನಕ್ಕೆ ರೇಖಾ ರಮೇಶ್‌, ಪುಷ್ಪ ಲತಾ ಶಾಂತರಾಜು, ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಜಿ.ಪಿ.ಶಿವಕುಮಾರ್‌, ಚಿಂತು ಪರಮೇಶ್‌, ಬಿಎಸ್‌ಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ನಾಸೀರ್‌ ಷರೀಪ್‌, ಉಪಾಧ್ಯಕ್ಷ ಸ್ಥಾನಕ್ಕೆ ಗಂಗಮ್ಮ, ನಾಗಸುಂದ್ರಮ್ಮ ಪೈಪೋಟಿ ನಡೆಸುತ್ತಿದ್ದಾರೆ.

ನಗರಸಭೆಯ ಕಾಂಗ್ರೆಸ್‌ ಸದಸ್ಯರು ಮತ್ತು ನಾಲ್ಕು ಪಕ್ಷೇತರ ಅಭ್ಯರ್ಥಿಗಳೊಂದಿಗೆ ಚರ್ಚೆ ನಡೆಸಿ, ನಗರಸಭೆ ಗದ್ದುಗೆ ಹಿಡಿಯುವ ಪ್ರಯತ್ನ ಮಾಡಲಾಗುವುದು.
-ಎಸ್‌.ಜಯಣ್ಣ, ಮಾಜಿ ಶಾಸಕ

ಸರ್ಕಾರ ಮೀಸಲಾತಿ ಪಟ್ಟಿ ಹೊರಡಿಸಿದ್ದು, ಇದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ನಂತರ ಗೆಜೆಟ್‌ ನೋಟಿಪೀಕೇಷನ್‌ ಆದ ಬಳಿಕ ಅಧಿಕೃತವಾಗಲಿದೆ. ಆದರೂ ಸಹ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಗದ್ದುಗೆಯನ್ನು ಬಿಜೆಪಿ ನೂರಕ್ಕೆ ನೂರರಷ್ಟು ಹಿಡಿಯಲಿದೆ.
-ಜಿ.ಎನ್‌.ನಂಜುಂಡಸ್ವಾಮಿ, ಮಾಜಿ ಶಾಸಕ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ

* ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next