Advertisement

2 ಗ್ರಾಮಸ್ಥರಿಂದ ಪರಸ್ಪರ ಬಡಿದಾಟ

06:37 PM Oct 24, 2021 | Team Udayavani |

ನಾಗಮಂಗಲ: ಸರ್ಕಾರಿ ಗೋಕಟ್ಟೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗ್ರಾಮದವರು ಪರಸ್ಪರ ದೊಣ್ಣೆಯಿಂದ ಬಡಿದಾಡಿಕೊಂಡಿರುವ ಘಟನೆ ತಾಲೂಕಿನ ಕಸಬಾ ಹೋಬಳಿಯ ಹೊನ್ನುಡಿಕೆಹಳ್ಳಿ ಗ್ರಾಮದಲ್ಲಿ ಸಂಭವಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಹೊನ್ನುಡಿಕೆ ಗ್ರಾಮಕ್ಕೆ ಹೊಂದಿಕೊಂಡಂತಿರುವ ಅರೆಹಳ್ಳಿ ಸರ್ವೆ ನಂ.5ರಲ್ಲಿ ಸರ್ಕಾರಿ ಗೋಕಟ್ಟೆಯಿದ್ದು, ಅರೆಹಳ್ಳಿ ಗ್ರಾಮದ ಕೆಲ ಪ್ರಭಾವಿಗಳು ಈ ಗೋಕಟ್ಟೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆಂಬ ಆರೋಪವಿದ್ದು, ಹಿಟಾಚಿ ಯಂತ್ರ ಮತ್ತು ಟ್ರ್ಯಾಕ್ಟರ್‌ ಬಳಸಿ ಮುಚ್ಚುವ ಕೆಲಸ ಮಾಡಿದ್ದಾರೆ. ಈ ವೇಳೆ ಇದನ್ನು ತಡೆಯಲು ಮುಂದಾದ ಹೊನ್ನುಡಿಕೆಹಳ್ಳಿ ಗ್ರಾಮಸ್ಥರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.

 ಮಾತಿನ ಚಕಮಕಿ: ಜಾನುವಾರುಗಳ ಅನುಕೂಲ ಕ್ಕಾಗಿ ಇರುವ ಸರ್ಕಾರಿ ಗೋಕಟ್ಟೆಯನ್ನು ಅರೆಹಳ್ಳಿಯ ಕೆಲ ಮಂದಿ ಪ್ರಭಾವಿಗಳು ಒತ್ತುವರಿ ಮಾಡಿ ಮುಚ್ಚಿರುವುದಲ್ಲದೇ ಈ ಜಾಗವನ್ನು ಉಳುಮೆ ಮಾಡಲು ಮುಂದಾಗಿರುವುದನ್ನು ವಿರೋಧಿಸಿದ್ದರಿಂದ ಒತ್ತುವರಿದಾರರು ಮತ್ತು ಹೊನ್ನುಡಿಕೆಹಳ್ಳಿ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿ ತಳ್ಳಾಟ ನೂಕಾಟದ ನಂತರ ಒಬ್ಬರಿ ಗೊಬ್ಬರು ದೊಣ್ಣೆಯಿಂದ ಬಡಿದಾಡಿಕೊಂಡಿದ್ದಾರೆ.

ದೂರು ದಾಖಲಾಗಿಲ್ಲ: ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಿಂಡಿಗನವಿಲೆ ಪೊಲೀಸ್‌ ಠಾಣೆ ಪಿಎಸ್‌ಐ ಪ್ರಕಾಶ್‌ಯತ್ತಿನಮನೆ, ಎರಡೂ ಬಣಗಳ ನಡುವೆ ಮಾತುಕತೆ ನಡೆಸಿ, ವಿವಾದಿತ ಜಾಗಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ತಹಶೀಲ್ದಾರ್‌ ಮೂಲಕ ಸೌಹಾರ್ದತೆಯಿಂದ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ತಿಳಿಸಿ ಹೋಗಿದ್ದಾರೆ. ಆದರೆ ಈ ಘಟನೆ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ಇದನ್ನೂ ಓದಿ:- ನಿಖಿಲಣ್ಣ ಶಾಸಕರಾಗುವುದು ಬೇಡ, ಸುಮಲತಾ ವಿರುದ್ಧ ಗೆಲ್ಲಲೇಬೇಕು

Advertisement

 ಸರ್ಕಾರಿ ಗೋಕಟ್ಟೆ ಉಳಿಸುವಂತೆ ಮನವಿ: ಅರೆ ಹಳ್ಳಿ ಸರ್ವೆ ನಂ.5ರಲ್ಲಿರುವ ಸರ್ಕಾರಿ ಗೋಕಟ್ಟೆಯು ಹೊನ್ನುಡಿಕೆಹಳ್ಳಿಗೆ ಹೊಂದಿಕೊಂಡಿದ್ದು, ಎರಡೂ ಗ್ರಾಮಗಳ ಜಾನುವಾರುಗಳಿಗೆ ಅನುಕೂಲವಾಗ ಲಿದೆ. ಆದರೆ ಈ ಕಟ್ಟೆಯನ್ನು ಅರೆಹಳ್ಳಿ ಗ್ರಾಮದ ಕೆಲ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರು ವುದರಿಂದ ಜನ ಜಾನುವಾರುಗಳಿಗೆ ತೊಂದರೆ ಯಾಗಲಿದ್ದು, ಈ ಸರ್ಕಾರಿ ಗೋಕಟ್ಟೆಯನ್ನು ಉಳಿಸಿ ಕೊಡುವಂತೆ ಹೊನ್ನುಡಿಕೆಹಳ್ಳಿ ಗ್ರಾಮಸ್ಥರು ತಹಶೀಲ್ದಾರ್‌ ಅವರಿಗೆ ಮನವಿ ನೀಡಿದ್ದಾರೆ.

ಸರ್ಕಾರಿ ಗೋಕಟ್ಟೆಯನ್ನು ಅರೆಹಳ್ಳಿ ಗ್ರಾಮದ ಎಂಟುಮಂದಿ ಒತ್ತುವರಿ ಮಾಡಿಕೊಂಡಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಹೊನ್ನುಡಿಕೆಹಳ್ಳಿ ಗ್ರಾಮಸ್ಥರು ನೀಡಿರುವ ಮನವಿ ಮೇರೆಗೆ ಅ.25ರ ಸೋಮವಾರ ಸರ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಖುದ್ದು ಭೇಟಿ ಕೊಟ್ಟು ಪರಿಶೀಲಿಸಿ ಆ ಜಾಗವನ್ನು ಅಳತೆ ಮಾಡಿಸಲಾಗುವುದು. ಭೂದಾಖಲೆಗಳ ಪ್ರಕಾರ ಒತ್ತುವರಿಯಾಗಿರುವ ಜಾಗ ಸರ್ಕಾರಿ ಗೋಕಟ್ಟೆಯಾಗಿದ್ದರೆ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮ ವಹಿಸಲಾಗುವುದು.                       – ಕುಂಞ ಅಹಮ್ಮದ್‌, ನಾಗಮಂಗಲ ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next