ಹೊಸದಿಲ್ಲಿ: ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ವಿವಿಧ ಆಚರಣೆಗಳು ದೇಶವನ್ನು ದಶಕಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಭಾನುವಾರ ಹೇಳಿದ್ದಾರೆ.
ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, “ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಆಧುನಿಕ ಭಾರತದ ಪರಿಕಲ್ಪನೆಯ ಬಗ್ಗೆ ಮಾತನಾಡುವುದಕ್ಕೂ ಮತ್ತು ಇಂದು ನವದೆಹಲಿಯ ಹೊಸ ಸಂಸತ್ ಭವನದಲ್ಲಿ ನಡೆಸಿದ ಆಚರಣೆಗಳ ಸರಣಿಗೂ ಅಜಗಜ ವ್ಯತ್ಯಾಸವಿದೆ. ನಾವು ನಮ್ಮ ದೇಶವನ್ನು ದಶಕಗಳಿಂದ ಹಿಂದಕ್ಕೆ ಕೊಂಡೊಯ್ಯುತ್ತಿದ್ದೇವೆ ಎಂದು ನಾನು ಹೆದರುತ್ತೇನೆ” ಎಂದರು.
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ವೈಜ್ಞಾನಿಕ ಮನೋಧರ್ಮವನ್ನು ಹೊಂದಿರುವ ಸಮಾಜವನ್ನು ಕಲ್ಪಿಸಿದ್ದರು, ಆದರೆ ಹೊಸ ಸಂಸತ್ತಿನ ಉದ್ಘಾಟನಾ ಸಮಾರಂಭದಲ್ಲಿ ನಡೆದದ್ದು ಅದಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.
ಲೋಕಸಭೆಯ ಸಭಾಂಗಣದಲ್ಲಿ ವಿಶೇಷ ಆವರಣದಲ್ಲಿ ಹವನ, ಬಹು ಧರ್ಮದ ಪ್ರಾರ್ಥನಾ ಸಮಾರಂಭ ಮತ್ತು ಸೆಂಗೋಲ್ ಅಳವಡಿಕೆಯನ್ನು ಒಳಗೊಂಡಿರುವ ಭವ್ಯ ಸಮಾರಂಭದಲ್ಲಿ ಪ್ರಧಾನಿ ಮೋದಿ ಹೊಸ ಕಟ್ಟಡವನ್ನು ಉದ್ಘಾಟಿಸಿದರು.