ಕುಂದಾಪುರ: ಉಡುಪಿ ಧರ್ಮ ಪ್ರಾಂತದಲ್ಲೇ ಅತ್ಯಂತ ಪುರಾತನವಾದ, ಪವಿತ್ರ ರೋಜರಿ ಮಾತೆಗೆ ಸಮರ್ಪಿಸಲ್ಪಟ್ಟ ಕುಂದಾಪುರದ ಇಗರ್ಜಿಯಲ್ಲಿ ಈ ವರ್ಷದ ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನಡೆಯುವ ಕೊಂಪ್ರಿ ಆಯ್ತಾರ್ ಭ್ರಾತೃ ಬಾಂಧವ್ಯ ದಿನವನ್ನು ಪ್ರಭು ಏಸುವಿನ ದಯೆ ನಮಗೆಲ್ಲರಿಗೂ ಪ್ರೇರಣೆ ಎಂಬ ಧ್ಯೇಯದೊಂದಿಗೆ ಪರಮ ಪ್ರಸಾದದ ಆರಾಧನೆ ರವಿವಾರ ನಡೆಯಿತು.
ಪವಿತ್ರ ರೋಜರಿ ಮಾತಾ ದೇವಾಲಯದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದ ತರುವಾಯ ಅಪಾರ ಭಕ್ತರು, ಮತ್ತು ಅನೇಕ ಧರ್ಮ ಭಗಿನಿಯರೊಡನೆ ಬೆಳಗಿಸಿದ ಬಣ್ಣದ ಮೇಣದ ಬತ್ತಿಗಳನ್ನು ಹಿಡಿದುಕೊಂಡು ಭಕ್ತಿ ಗಾಯನ, ಸಂಗೀತ, ಬ್ಯಾಂಡ್, ಬಣ್ಣ ಬಣ್ಣದ ಕೊಡೆಗಳೊಡನೆ, ಗಾಯನ ಮಂಡಳಿಯೊಡನೆ ವಿದ್ಯುತ್ ದೀಪಗಳ ಅಲಂಕೃತದೊಂದಿಗೆ ಪರಮ ಪ್ರಸಾದದ ಪುರಮೆರವಣಿಗೆಯನ್ನು ಕುಂದಾಪುರದ ಮುಖ್ಯ ರಸ್ತೆಗಳಲ್ಲಿ ವೈಭವದೊಂದಿಗೆ ಭಕ್ತಿ ಮತ್ತು ಶಿಸ್ತಿನಿಂದ ನಡೆಸಲಾಯಿತು. ಅನಂತರ ಸಂತ ಮೇರಿಸ್ ವಿದ್ಯಾ ಸಂಸ್ಥೆಯ ಮೈದಾನದಲ್ಲಿ ಪರಮ ಪ್ರಸಾದದ ಆರಾಧನೆ ಕನ್ನಡದಲ್ಲಿ ನಡೆಯಿತು.
ಧಾರ್ಮಿಕ ವಿಧಿಯನ್ನು ನಡೆಸಿದ ಗಂಗೊಳ್ಳಿ ಚರ್ಚ್‌ನ ಧರ್ಮಗುರು ಫಾ| ಆಲ್ಬರ್ಟ್ ಕ್ರಾಸ್ತಾ, ನನಗೆ ಯಜ್ಞ ಬಲಿಯಲ್ಲ, ನನಗೆ ಬೇಕು ದಯೆ, ಕ್ಷಮೆ, ಇತರರು ಕಷ್ಟದಲ್ಲಿರುವಾಗ ನೆರವಾಗುವುದು, ಉಪವಾಸ ಇದ್ದವರಿಗೆ ಉಣ್ಣಲು ಕೊಡುವುದು, ಬಟ್ಟೆ ಇಲ್ಲದಿದವರಿಗೆ ಬಟ್ಟೆ ಕೊಡುವುದು, ರೋಗಿಗಳನ್ನು, ಪಾಪಿಗಳನ್ನು ಪ್ರೀತಿಸುವುದು ನಮಗೆ ಯೇಸು ಹೇಳಿಕೊಟ್ಟ ಬೋಧನೆಗಳು. ಇದನ್ನೆಲ್ಲ ಪಾಲಿಸುವ ಇತರರನ್ನು ಪ್ರೀತಿಸುವ ಈ ಜಗತ್ತಿನಲ್ಲಿರುವ ನಾವು ಎಲ್ಲರೂ ಒಟ್ಟುಗೂಡಿ ಬಾಳ್ಳೋಣ ಎಂದು ಅವರು ಸಂದೇಶ ನೀಡಿ ಪರಮ ಪ್ರಸಾದದ ರೂಪದಲ್ಲಿರುವ ಏಸುವಿನ ಆಶೀರ್ವಾದವನ್ನು ನೀಡಿದರು.
ಈ ಧಾರ್ಮಿಕ ವಿಧಿಯ ನೆರವೇರಿಕೆಯಲ್ಲಿ ಕುಂದಾಪುರ ರೋಜರಿ ಮಾತೆ ಇಗರ್ಜಿಯ ಪ್ರಧಾನ ಧರ್ಮಗುರು ಫಾ|ಸ್ಟ್ಯಾನಿ ತಾವ್ರೊ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡು ವಂದಿಸಿದರು. ಸಹಾಯಕ ಧರ್ಮಗುರು ಫಾ| ರೋಯ್ ಲೋಬೊ ಇದೇ ದಿನ ಜಗತ್ತಿನೆಲ್ಲೆಡೆ ಕ್ರೈಸ್ತ ರಾಜಾರ ಹಬ್ಬವನ್ನು ಆಚರಿಸುವ ದಿನದ ಮಹತ್ವವನ್ನು ತಿಳಿಸಿದರು. ಸಂತ ಮೇರಿಸ್ ಜೂ. ಕಾಲೇಜಿನ ಪ್ರಾಂಶುಪಾಲ ಧರ್ಮಗುರು ಫಾ| ಪ್ರವೀಣ್ ಅಮೃತ್ ಮಾರ್ಟಿಸ್ ಕಾರ್ಯ ಕ್ರಮಕ್ಕೆ ಸಹಕರಿಸಿದರು. ಕಾರ್ಯಕ್ರಮದ ಪೋಷಕಿ ಕ್ಲೊಟಿಲ್ಡಾ ಡಿ’ಸಿಲ್ವ ಪ್ರಸ್ತುತಪಡಿಸಿದರು.