ಹಾವೇರಿ: ರೈತರಿಗೆ ಮಾರಕವಾಗಿರುವ ಕೃಷಿ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆಗಳ ಕುರಿತು ರೈತರಿಗೆ ಜಾಗೃತಿ ಮೂಡಿಸಲು ಮಾ. 21ರಂದು ನಗರದಲ್ಲಿ ಬೃಹತ್ ರೈತ ಸಮಾವೇಶ ಆಯೋಜಿಸಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ರಾಜ್ಯ ಮುಖಂಡ ಕೆ.ಟಿ. ಗಂಗಾಧರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.20ರಂದು ಶಿವಮೊಗ್ಗದಲ್ಲಿಸಮಾವೇಶ ನಡೆಸಲಾಗುವುದು. ಈ ಸಮಾವೇಶದಲ್ಲಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಅಧ್ಯಕ್ಷ ರಾಕೇಶ ಟಿಕಾಯತ್ ಸೇರಿದಂತೆ ರಾಜ್ಯದ ರೈತ ಮುಖಂಡರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಕೃಷಿ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿಗಳು ರೈತರಿಗೆ ಮಾರಕವಾಗಿವೆ. ಆದರೆ, ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಹಿತ ಕಾಪಾಡುವ ಉದ್ದೇಶದಿಂದ ಈ ಕಾಯ್ದೆಗಳನ್ನು ಸಂಸತ್‌ನಲ್ಲಿ ಯಾವುದೇ ಚರ್ಚೆಯಿಲ್ಲದೇ ಸುಗ್ರೀವಾಜ್ಞೆಮೂಲಕ ಜಾರಿಗೊಳಿಸಿ ರೈತರನ್ನು ಬೀದಿಗೆ ತರುವ ಪ್ರಯತ್ನಕ್ಕೆ ಮುಂದಾಗಿದೆ. ಈ ಕಾಯ್ದೆಗಳ ಜಾರಿಯಿಂದ ಕೇವಲ ರೈತರಿಗೆ ಅನ್ಯಾಯವಾಗುವುದಿಲ್ಲ. ಅನ್ನ ತಿನ್ನುವ ಎಲ್ಲರ ತಟ್ಟೆಗೆ ಮುಂದಿನ ದಿನಗಳಲ್ಲಿ ಬಂಡವಾಳಶಾಹಿಗಳು ಕೈ ಹಾಕಲಿದ್ದಾರೆ. ನಮ್ಮ ಆಹಾರ ಸಾರ್ವಭೌಮತ್ವ ಬಂಡವಾಳಶಾಹಿಗಳ ಕೈಗೆ ಹೋಗಲಿದೆ. ಇದರ ವಿರುದ್ಧ ಈಗಲೇ ಎಲ್ಲರೂ ಜಾಗೃತರಾಗಬೇಕು. ಅದಕ್ಕಾಗಿ ಜಾಗೃತಿ ಮೂಡಿಸಲು ಸಮಾವೇಶ ಆಯೋಜಿಸಲಾಗುತ್ತಿದೆ ಎಂದರು.
ದೇಶದಲ್ಲಿ ಸದ್ಯ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದವರನ್ನು ಬಂಧಿ ಸುವ ಪ್ರಕ್ರಿಯೆ ನಡೆಯುತ್ತಿದೆ. ರೈತ ಚಳವಳಿಗಳನ್ನು ವ್ಯವಸ್ಥಿತವಾಗಿ ಮುರಿಯುವ ಯತ್ನ ನಡೆಯುತ್ತಿದೆ. ಈ ಹೋರಾಟಬರೀ ಉತ್ತರ ಭಾರತದ ಒಂದೆರಡು ರಾಜ್ಯಗಳರೈತರದ್ದು ಮಾತ್ರ ಎಂದು ದಾರಿ ತಪ್ಪಿಸುವ ಕೆಲಸವನ್ನುಸರ್ಕಾರದ ಪ್ರತಿನಿಧಿಗಳು ಮಾಡುತ್ತಿದ್ದಾರೆ. ಇದೀಗದಕ್ಷಿಣ ಕರ್ನಾಟಕದಲ್ಲೂ ಸಮಾವೇಶದ ಮೂಲಕ ದೇಶಾದ್ಯಂತ ವಿರೋಧವಿದೆ ಎಂದು ತೋರಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದರು.
ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರವೂ ರೈತರನ್ನು ಭೂರಹಿತರನ್ನಾಗಿ ಮಾಡುವ ಮಾರಕ ಕಾಯ್ದೆ ಜಾರಿಗೊಳಿಸಿದೆ. ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಬಂಡವಾಳಶಾಹಿಗಳು ಈ ಹಿಂದಿಗಿಂತ 10ಪಟ್ಟು ಹೆಚ್ಚುಭೂಮಿ ಖರೀದಿ ಮಾಡಲು ಅವಕಾಶ ಮಾಡಿಕೊಟ್ಟಿದೆ.ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದೆ.ಇದೆಲ್ಲದರ ಕುರಿತು ಸಮಾವೇಶದಲ್ಲಿ ರೈತರಿಗೆ ಜಾಗೃತಿಮೂಡಿಸಲಾಗುವುದು ಎಂದರು. ಸಂಘದ ಜಿಲ್ಲಾಧ್ಯಕ್ಷರಾಮಣ್ಣ ಕೆಂಚಳ್ಳೇರ ಮಾತನಾಡಿ, ನಗರದ ಮುನ್ಸಿಪಲ್‌ಮೈದಾನದಲ್ಲಿ ಸಮಾವೇಶ ಆಯೋಜಿಸಲಾಗುವುದು. ಅಂದಾಜು 10 ಸಾವಿರ ರೈತರು ಪಾಲ್ಗೊಳ್ಳುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ನಾಗಣ್ಣ, ಜಿಲ್ಲಾ ಮುಖಂಡರಾದ ಶಿವಬಸಪ್ಪ ಬೋವಿ, ದೀಪಕ್ ಗಂಟೇರ, ಮಲ್ಲಿಕಾರ್ಜುನ ಬಳ್ಳಾರಿ ಇತರರು ಇದ್ದರು.