Advertisement
ಒಂದು ಮಗು ಹುಟ್ಟಿದಾಗಿನಿಂದ ಕೊನೆಯವರೆಗೂ ಜೀವನ ಒಂದು ರೀತಿಯ ಲೆಕ್ಕಾಚಾರದ ರಿಸ್ಕಾ. ನಾವು ಬಯಸುವುದೆಲ್ಲ ಜೀವನದಲ್ಲಿ ನಡೆಯುವುದಿಲ್ಲ ಅಂತ ನಮಗೆ ಗೊತ್ತಿದೆ. ಆದರೂ ಬಯಸಿದ್ದನ್ನು ಪಡೆದುಕೊಳ್ಳುವ ದಾರಿಯಲ್ಲಿ ನಾವು ಸಾಗುತ್ತೇವೆ. ಪ್ರತಿಯೊಂದು ಹಂತದಲ್ಲೂ ರಿಸ್ಕ್ ತೆಗೆದುಕೊಂಡೇ ಮುಂದುವರೆಯಬೇಕು. ಎಲ್ಲವೂ ಸರಾಗವಾಗಿ ನಡೆಯಬೇಕೆಂದು ಮನಸ್ಸಿನಲ್ಲಿ ಬಯಸಿದರೂ ಸಹ ಮತ್ತೂಂದೆಡೆ ಉಲ್ಟಾ ಆಗಬಹುದು ಎಂಬ ಲೆಕ್ಕಾಚಾರ ಸಹ ತಲೆಯಲ್ಲಿರುತ್ತದೆ.
ಮದುವೆ ಸಹ ಒಂದು ರಿಸ್ಕೇ. ಜಾತಕ ತೋರಿಸಿ ಈ ಹುಡುಗೀನ ಮದುವೆಯಾದ ಮೇಲೆ ನನ್ನ ಜೀವನ ಸುಖಮಯವಾಗಿರುತ್ತದೆ ಎಂಬ ಲೆಕ್ಕಾಚಾರದಲ್ಲಿ ಮದುವೆಯಾಗುತ್ತಾರೆ. ಅವರಲ್ಲಿ ಕೆಲವರ ಸಂಸಾರ ಸಂತೋಷವಾಗಿ ನಡೆಯಬಹುದು. ಇನ್ನು ಕೆಲವರ ಸಂಸಾರ ಒಡೆದೇ ಹೋಗಬಹುದು. ಹೆಂಡತಿ ಬಂದ ನಂತರ ತಂದೆ-ತಾಯಿಯನ್ನೇ ದೂರ ಮಾಡಬಹುದು. ಎಲ್ಲರೂ ಬೇರೆ ಬೇರೆಯಾಗಿದ್ದರೂ ಸಂತೋಷ ಸಿಗುತ್ತದೆ ಅನ್ನುವ ಗ್ಯಾರಂಟಿ ಏನೂ ಇಲ್ಲ. ಸಿಕ್ಕಿದರೆ ಸಿಗಬಹುದು ಇಲ್ಲದಿದ್ದರೆ ಇಲ್ಲ. ಇವೆಲ್ಲ ಗೊತ್ತಿದ್ದೂ ನಾವು ರಿಸ್ಕ್ ತೆಗೆದುಕೊಳ್ಳುವುದಕ್ಕೆ ಮುಂದಾಗಬೇಕು.
Related Articles
ವ್ಯವಹಾರ ಮಾಡುವವರಂತೂ ಪ್ರತಿನಿತ್ಯ ರಿಸ್ಕ್ ತೆಗೆದು ಕೊಳ್ಳುತ್ತಾರೆ. ಅವರ ಜೀವನ ಗೊಂದಲದಲ್ಲೇ ಸಾಗಬೇಕು. ಏಕೆಂದರೆ ಅವರವರ ಲೆಕ್ಕಾಚಾರದ ರಿಸ್ಕಿಗೆ ಅವರೇ ಜವಾಬ್ದಾರರು. ವ್ಯಾಪಾರದಲ್ಲಿ ಏರುಪೇರಾದರೆ, ಹೂಡಿದ ಬಂಡವಾಳ ಲಾಭ ತರದೇ ನಷ್ಟವುಂಟು ಮಾಡಿದರೆ ಬೇರೆಯವರನ್ನು ದೂಷಿಸಲು ಸಾಧ್ಯವಿಲ್ಲ. ಕೆಲವರಂತೂ ಅತಿ ಶ್ರೀಮಂತರಾಗಿದ್ದವರೂ ಸಹ ತಪ್ಪು ಲೆಕ್ಕಾ ಚಾರದ ರಿಸ್ಕ್ ತೆಗೆದುಕೊಂಡು ಒಂದೇ ತಿಂಗಳಲ್ಲಿ ಬಡಪಾಯಿ ಗಳಾಗಿದ್ದಾರೆ. ಯಾವುದೇ ಕೆಲಸಕ್ಕೆ ಕೈಹಾಕಿದರೂ ಹತ್ತು ಸಲ ಯೋಚಿಸಿ ಮುಂದುವರಿಯಬೇಕು. ಹಾಗೆಯೇ ನಷ್ಟವಾಗುತ್ತದೆ ಎಂಬ ಭಯದಿಂದ ಸುಮ್ಮನೆ ಕುಳಿತರೂ ನಾವು ಅಂದು ಕೊಂಡಿದ್ದನ್ನು ಪಡೆದುಕೊಳ್ಳಲಾಗುವುದಿಲ್ಲ.
Advertisement
ಪ್ರೀತಿಸುವಾಗಲೂ ಹಾಗೆ, ಹತ್ತು ಜನರನ್ನು ಕಣ್ಮುಂದೆ ಪ್ರತಿದಿನ ನೋಡುತ್ತಿದ್ದರೂ ಒಂದು ಲೆಕ್ಕಾಚಾರ ಹಾಕಿ, ಅವಳು ನನಗೆ ಸರಿಯಾದ ಜೋಡಿ ಅಂತ ಒಬ್ಬಳನ್ನೇ ಪ್ರೀತಿಸಲಾರಂಭಿಸುತ್ತಾರೆ. ಆ ಪ್ರೀತಿಯನ್ನು ಅವಳು ಒಪ್ಪಿಕೊಂಡು, ಇಬ್ಬರ ಮನೆಯ ಪರಿಸ್ಥಿತಿಗಳಿಗೆ ಇಬ್ಬರೂ ಅನುಸರಿಸಿಕೊಂಡು, ವಾರಕ್ಕೊಂದು ಸಲ ಜಗಳವಾದರೂ, ಬಾಯಿಗೆ ಬಂದಂತೆ ಒಬ್ಬರನ್ನೊಬ್ಬರು ಬೈದು ಕೊಂಡರೂ ಮತ್ತೆ ಮತ್ತೆ ಸಮಾಧಾನ ಮಾಡಿಕೊಂಡು ಪ್ರೇಮಿಗಳು ಒಂದಾಗುತ್ತಾರೆ. ಇದೂ ಒಂದು ರಿಸ್ಕ್. ಇದಾದ ಮೇಲೆ ಮನೆಯವರೆಲ್ಲಾ ಒಪ್ಪಿ ಮದುವೆಯಾಗೋವರೆಗೆ ಪ್ರೀತಿಸುವುದು ಸಹ ದೊಡ್ಡ ರಿಸ್ಕ್.
ಪ್ರೀತಿ ಮಾಡುವಾಗಲೂ ಯಾರಿಗೂ ಗೊತ್ತಾಗಬಾರದು ಅಂತ ಕದ್ದು ಮುಚ್ಚಿ ಓಡಾಡುತ್ತಿರುತ್ತಾರೆ. ಪ್ರೀತಿಸಿದವನು ಜೊತೆ ಸದಾ ಇರಬ್ಬೇಕು ಅನ್ನಿಸಿದರೂ, ಮನೆಯವರಿಗೆ ಗೊತ್ತಾದರೆ ನಮ್ಮನ್ನು ಬೇರೆ ಮಾಡಿಬಿಡುತ್ತಾರೆ ಅಂತ ಸುಳ್ಳು ಹೇಳಿಕೊಂಡು ಯಾರಿಗೂ ಗೊತ್ತಾಗದಂತೆ ಭೇಟಿ ಮಾಡುತ್ತಾರೆ. ಹೀಗೆ ಕದ್ದುಮುಚ್ಚಿ ಓಡಾಡುವುದು ಸಹ ರಿಸ್ಕೇ. ಬದುಕಿನ ಪ್ರತಿ ನಡೆಯಲ್ಲೂ ರಿಸ್ಕ್ ಇದೆ ಅಂತ ನಮಗೆಲ್ಲ ಗೊತ್ತಿದೆ. ಜೀವನವೇ ಒಂದು ಗೇಮ್. ಕೆಲವು ಸಲ ನಾವು ಗೆಲ್ಲುತ್ತೇವೆ, ಕೆಲವು ಸಲ ಬೇರೆಯವರು ಗೆಲ್ಲುತ್ತಾರೆ. ನಾವು ಸೋಲುತ್ತೇವೆ ಅನ್ನುವ ಭಯದಿಂದ ರಿಸ್ಕ್ ತೆಗೆದುಕೊಳ್ಳದಿದ್ದರೆ ನಮ್ಮ ಪೂರ್ತಿ ಜೀವನದ ಸೋಲಿಗೆ ನಾವೇ ಕಾರಣರು. ನಾವು ರಿಸ್ಕ್ ತೆಗೆದುಕೊಳ್ಳಲು ಮುಂದಾಗದಿದ್ದರೆ, ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವೇ ಇಲ್ಲ. ಪ್ರತಿಯೊಂದು ಹೊಸ ಯೋಜನೆಯಲ್ಲೂ ದೇವರ ಹೆಸರು ಹೇಳಿ ಅಥವಾ ನಮ್ಮ ಸಾಮರ್ಥ್ಯವನ್ನು ನಂಬಿ ಮುಂದೆ ನಡೆಯುತ್ತಲೇ ಇರಬೇಕು. ಯಾರಿಗೆ ಗೊತ್ತು? ನಾವು ಅಂದುಕೊಂಡಿದ್ದೆಲ್ಲಾ ಆದರೂ ಆಗಬಹುದೇನೋ! ಹಾಗಂತ ಇರುವುದನ್ನೆಲ್ಲ ಕಳೆದುಕೊಳ್ಳುವಂತಹ ರಿಸ್ಕ್ ತೆಗೆದುಕೊಳ್ಳಬಾರದು. ನಮ್ಮ ಮಿತಿಗಳು ನಮಗೆ ಗೊತ್ತಿರಬೇಕು.
ಹತ್ತು ಕೆಲಸಕ್ಕೆ ಕೈಹಾಕಿ ಪಶ್ಚಾತ್ತಾಪಕೆಲವೊಮ್ಮೆ ನಾವು ತೆಗೆದುಕೊಳ್ಳುವ ರಿಸ್ಕ್ ಹೇಗಿರುತ್ತದೆ ಅಂದರೆ, ಒಂದೇ ಸಲ ಹತ್ತು ಕೆಲಸಕ್ಕೆ ಕೈಹಾಕುತ್ತೇವೆ. ಕಡೆಗೆ ಒಂದೇ ಸಲ ಎಲ್ಲವನ್ನೂ ಕಳೆದುಕೊಳ್ಳಬಹುದು. ಅನೇಕ ಜನರು ತಮ್ಮ ಬುದ್ಧಿವಂತಿಕೆಯ ಮೇಲೆ ಅತಿಯಾದ ನಂಬಿಕೆಯಿಟ್ಟು ಕೊನೆಗೆ ಪಶ್ಚಾತ್ತಾಪಪಟ್ಟಿದ್ದಾರೆ. ಏನೇ ಆದರೂ ಜೀವನ ತುಂಬಾ ಸುಂದರವಾಗಿದೆ. ಎಲ್ಲಾ ಕೆಲಸಗಳಿಗೂ ರಿಸ್ಕ್ ತೆಗೆದುಕೊಳ್ಳಬೇಕಾದ ಕ್ರಿಯೆಯನ್ನು ಪ್ರಕೃತಿ ಬಹಳ ಅದ್ಭುತವಾಗಿ ಸೃಷ್ಟಿಮಾಡಿದೆ. ಒಂದೊಂದೇ ಹೆಜ್ಜೆ ಮುಂದೆ ನಡೆಯುತ್ತಿದ್ದಂತೆ ಎಲ್ಲಾ ರಿಸ್ಕ್ಗಳು ಮಜಾ ಕೊಡುತ್ತವೆ. ನಮ್ಮ ಬುದ್ಧಿ ಕೆಲಸ ಮಾಡುವಂತೆ ಮಾಡುತ್ತದೆ. ಮುಂದಾಲೋಚನೆ ನಮ್ಮನ್ನು ಚುರುಕು ಮಾಡುತ್ತದೆ. ನಾವು ಅಂದುಕೊಂಡಿದ್ದೆಲ್ಲ ಭ್ರಮೆ, ವಾಸ್ತವವೇ ಬೇರೆ ಎಂಬುದನ್ನು ತೋರಿಸಿಕೊಡುತ್ತದೆ. ಯಾವುದು ಭ್ರಮೆ, ಯಾವುದು ವಾಸ್ತವ?
ವಾಸ್ತವ ಯಾವುದು ಎನ್ನುವ ಪ್ರಶ್ನೆಯೇ ನಮಗೆ ಬಗೆಹರಿ ಯುವುದಿಲ್ಲ. ಭ್ರಮೆ ಯಾವುದು ಎನ್ನುವುದೂ ಬಗೆಹರಿಯು ವುದಿಲ್ಲ. ಹಲವು ಬಾರಿ ಭ್ರಮೆಗಳು ಅಂತ ಜಗತ್ತು ತಮಾಷೆ ಮಾಡಿಕೊಂಡಿದ್ದು ವಾಸ್ತವವಾಗಿದೆ. ಇನ್ನು ಕೆಲವು ಬಾರಿ ವಾಸ್ತವ ಅಂತ ಹೇಳಿದ್ದು ಭ್ರಮೆಗಳೆಂದು ಸಾಬೀತಾಗಿದೆ. ರೈಟ್ ಸಹೋ ದರರು ವಿಮಾನ ಕಂಡುಹಿಡಿಯಲು ಹೊರಟಾಗ, ಮಾರ್ಕೋನಿ ರೇಡಿಯೋ ಕಂಡುಹಿಡಿಯಲು ಹೊರಟಾಗ, ಜಗದೀಶ್‌ಚಂದ್ರ ಬೋಸ್ ಸಸ್ಯಗಳಿಗೂ ಜೀವವಿದೆ ಎಂದಾಗ ಅದನ್ನೆಲ್ಲ ಭ್ರಮೆ ಎನ್ನಲಾಗಿತ್ತು. ಕಾಲಕ್ರಮೇಣ ಅದೇ ವಾಸ್ತವವಾಯಿತು. ನಮ್ಮ ಬದುಕು ವಾಸ್ತವ, ನಮಗೆ ಜೀವವಿದೆಯೆನ್ನುವುದು ವಾಸ್ತವ, ನಮ್ಮ ಡ್ರೈವರ್ ಚೆನ್ನಾಗಿ ವಾಹನ ಚಲಾವಣೆ ಮಾಡು ತ್ತಾನೆನ್ನುವುದೂ ವಾಸ್ತವ. ಆದರೆ ದಿಢೀರನೆ ಆಗುವ ಅಪಘಾತ ಇಡೀ ಕುಟುಂಬವನ್ನೇ ಬಲಿತೆಗೆದುಕೊಳ್ಳಬಹುದು. ಅಲ್ಲಿಗೆ ನಮ್ಮ ವಾಸ್ತವವೇ ಭ್ರಮೆಯಾಗಿ ಬದಲಾಯಿತು. ಇಡೀ ಜಗತ್ತಿನ ಕೆಲಸಗಳನ್ನೆಲ್ಲ ವೇಗವಾಗಿ ಪೂರೈಸಲು ನೆರವಾಗುವ ವಿಮಾನವೇ ಅಪಘಾತವಾಗಿ ಎಲ್ಲವೂ ಸರ್ವನಾಶವಾಗಿಬಿಡಬಹದು. ಅದು ಕೂಡಾ ದುರಂತ ವಾಸ್ತವ. ಪ್ರೇಮಿಗಳಾಗಲೀ, ಸಾಧಕರಾಗಲೀ, ಸಾಮಾನ್ಯರಾಗಲೀ ವಾಸ್ತವ ಮತ್ತು ಭ್ರಮೆ ಅಂದರೇನೆಂದು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಯಾವ ಕಾಲಕ್ಕೆ ಏನು ಬೇಕಾದರೂ ಸಂಭವಿಸಬಹುದು-ಇದೇ ವಾಸ್ತವ. ಇದನ್ನೆಲ್ಲ ಮೀರಿ ಬದುಕನ್ನು ಕಟ್ಟಿಕೊಳ್ಳುವುದು, ಭ್ರಮೆಯನ್ನು ನಾಶಮಾಡುವುದು ನಾವು ತೆಗೆದುಕೊಳ್ಳಬೇಕಾದ ರಿಸ್ಕ್. ಪ್ರೀತಿ ಮಾಡುವಾಗ, ಅವಳ ಚೆಲವನ್ನು ಬೊಗಸೆಯಲ್ಲಿ ಹಿಡಿ ದುಕೊಳ್ಳುವಾಗ ಆಹಾ ಅಂತನ್ನಿಸುತ್ತದೆ. ಅದೇ ಇಬ್ಬರಿಗೂ ಮದುವೆಯಾಗಿ ಮಕ್ಕಳು ಹುಟ್ಟಿದಾಗ, ಬೊಗಸೆಯಲ್ಲಿ ಆಕೆಯ ಚೆಲುವಿರುವುದಿಲ್ಲ, ಆತಂಕವಿರುತ್ತದೆ. ಬೊಗಸೆಯಲ್ಲಿ ಸುಂದರವಾಗಿ ಕಾಣುವ ಅವಳ ಮುಖ ಭ್ರಮೆ, ಮಕ್ಕಳ ಹುಟ್ಟಿದಾಗ ಮುಂದೇನು ಎಂಬ ಆತಂಕ ವಾಸ್ತವ. ರಿಸ್ಕ್ ಶುರುವಾಗುವುದು ಇಲ್ಲಿಂದ. ಹೌದು, ಬದುಕು ರಿಸ್ಕ್ನಿಂದ ಹೊರತಾಗಿಲ್ಲ. ಇಲ್ಲಿ ಆರಾಮಾ ಗಿರುವುದಕ್ಕೆ ಸಾಧ್ಯವೇ ಇಲ್ಲ. ಒಂದು ವೇಳೆ ಯಾರಾದರೂ ಆರಾಮಾಗಿದ್ದಾರೆ ಎಂದರೆ ಒಂದೋ ಆತನಿಗೆ ಮನಃಸ್ವಾಸ್ಥ್ಯವಿಲ್ಲ, ಇಲ್ಲವೇ ಆತ ಬದುಕನ್ನೇ ತೊರೆದಿದ್ದಾನೆ ಎಂದರ್ಥ.