ಜೋಯಿಡಾ: ಸೂಪಾ ಜಲಾಶಯ ನಿರ್ಮಾಣಗೊಂಡು ನಾಲ್ಕು ದಶಕಗಳು ಕಳೆದರೂ ಜೋಯಿಡಾ ತಾಲೂಕಿನ ಪ್ರಮುಖ ಗ್ರಾಪಂ ಕೇಂದ್ರವಾದ ನಾಗೋಡಾಕ್ಕೆ ಇನ್ನೂ ನೂತನ ಸೇತುವೆ ಭಾಗ್ಯವಿಲ್ಲದೆ ತುಂಬಿದ ಸೂಪಾ ಹಿನ್ನೀರಿನಿಂದಾಗಿ ವಿದ್ಯಾರ್ಥಿಗಳು ದಿನನಿತ್ಯ ಬೋಟ್ ಮೂಲಕ ಸಂಚರಿಸುವಂತಾಗಿದೆ.
ಸೂಪಾ ತಾಲೂಕು ಕೇಂದ್ರವಿದ್ದಾಗಲೇ ನಾಗೋಡಾ ಪ್ರಮುಖ ಗ್ರಾಮವಾಗಿತ್ತು. ಇಲ್ಲಿನ ನಾಗೋಡಾ ದೇಸಾಯಿ ಎಂಬಾತ ಸೂಪಾ ತಾಲೂಕಿನ ಅಂದಿನ ಪ್ರಮುಖ ಜನನಾಯಕನಾಗಿದ್ದು, ಅಂದೇ ಡಾಂಬರಿಕರಣ ರಸ್ತೆಗಳನ್ನು ಹೊಂದಿ ನಿತ್ಯ ಬಸ್ ಸಂಚಾರ ವ್ಯವಸ್ತೆ ಇರುವ ಪ್ರಮುಖ ಕೇಂದ್ರವಾಗಿತ್ತು. ಸೂಪಾ ಮುಳುಗಡೆಯಾದ ಮೇಲೆ ಜೋಯಿಡಾ ತಾಲೂಕು ಕೇಂದ್ರವಾಗಲು ಇವರೇ ಕಾರಣರಾಗಿದ್ದರು. ಆದರೆ ಅವರಿಲ್ಲದ ನಾಗೋಡಾಡಕ್ಕೆ ಈಗ ಸೇತುವೆ ಭಾಗ್ಯವೂ ಇಲ್ಲದೆ, ಸರ್ವಋತು ರಸ್ತೆಗಳೂ ಇಲ್ಲದೆ ಕೊರಗುವಂತಾಗಿದೆ.
ನಾಗೋಡಾ ತಾಲೂಕು ಕೇಂದ್ರದಿಂದ ಅನತಿ ದೂರದಲ್ಲಿದ್ದರೂ ಇದರ ಮುಖ್ಯ ರಸ್ತೆ ಪ್ರತಿವರ್ಷ ಹಿನ್ನೀರಿನಿಂದ ಮುಳುಗಡೆ ಹೊಂದುತ್ತಿದ್ದು, ಗ್ರಾಮಸ್ಥರಿಗೆ, ನಿತ್ಯ ಸಂಚರಿಸುವ ಶಾಲಾ ವಿದ್ಯಾರ್ಥಿಗಳಿಗೆ ಜಲರಾಶಿಯ ಅಪಾಯವನ್ನೆದುರಿಸಿ ಬೋಟ್ ಮೂಲಕ ಸಾಗಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತಿದೆ. ಇಷ್ಟಕ್ಕೂ ಇಲ್ಲಿ ಸೇತುವೆ ನಿರ್ಮಾಣ ಅಸಾಧ್ಯವೇನು ಅಲ್ಲ. ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆ ಈ ಗ್ರಾಮವನ್ನು ನಿರ್ಲಕ್ಷಿಸುವಂತೆ ಮಾಡಿದೆ. ಈ ಗ್ರಾಮದಿಂದ ನಿತ್ಯ ಪ್ರಾಥಮಿಕ ಪ್ರೌಢಶಾಲೆ, ಕಾಲೇಜುಗಳಿಗೆ ಜೋಯಿಡಾ ಕೇಂದ್ರಕ್ಕೆ ಸುಮಾರು 25 ರಿಂದ 30 ವಿದ್ಯಾರ್ಥಿಗಳು ಹೋಗುತ್ತಾರೆ. ನಿತ್ಯ ಸಂಚರಿಸುವ ಇವರ ಬಗ್ಗೆ ಯಾವ ಜನನಾಯಕನ ಕನಿಕರೂ ಇಲ್ಲವೇ? ಎನ್ನುವಂತೆ ಭಾಸವಾಗುತ್ತಿದೆ.
ಇದು ಮಾಜಿ ಸಚಿವ ರಾಜ್ಯದ ಪ್ರಭಾವಿ ನಾಯಕ ಆರ್ .ವಿ.ದೇಶಪಾಂಡೆಯವರ ಕ್ಷೇತ್ರ. ತಾಲೂಕಿನ ಅಭಿವೃದ್ಧಿಗೆ ಈಗಾಗಲೇ ನೂರಾರು ಕೋಟಿ ಅಭಿವೃದ್ಧಿ ಕೆಲಸ ಮಾಡಿಸಿದ, ಮಾಡುತ್ತಾ ಬಂದ ಇವರಿಗೆ ಇವೆಲ್ಲಾ ದೊಡ್ಡದೇನಲ್ಲ. ಆದರೆ ಸ್ಥಳೀಯ ಅಧಿಕಾರಿಗಳು, ಜನನಾಯಕರ ನಿರ್ಲಕ್ಷ ಈ ಗ್ರಾಮಕ್ಕೆ ಹಿಂದೆ ಇದ್ದ ಗೌರವವನ್ನು ಕಡಿಮೆಗೊಳಿಸುವಂತೆ ಮಾಡಿದೆ. ಇದು ಜೋಯಿಡಾ ತಾಲೂಕಿನ ದುರ್ಭಾಗ್ಯದ ಸಂಗತಿ.
ನಾಗೋಡಾ ಗ್ರಾಮದ ವಿದ್ಯಾರ್ಥಿಗಳ, ಯುವಜನತೆ ಭವಿಷ್ಯದ ದೃಷ್ಟಿಯಿಂದಲಾದರೂ ಈ ಗ್ರಾಮಕ್ಕೆ ಸರ್ವಋತು ಸೇತುವೆ ಅಗತ್ಯವಿದ್ದು, ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಕ್ರಮಕೈಗೊಂಡು ಅನುಷ್ಠಾನಗೊಳಿಸಬೇಕಿದೆ.