Advertisement

ಪರಿಸರ ಮಾಲಿನ್ಯದಿಂದ ಜೀವಸಂಕುಲಕ್ಕೆ ಅಪಾಯ

03:48 PM Sep 17, 2019 | Team Udayavani |

ರಾಯಚೂರು: ಮನುಷ್ಯ ಮತ್ತು ಭೂಮಿ ಮೇಲಿನ ಜೀವಸಂಕುಲಗಳ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ನೈಸರ್ಗಿಕ ಸಂಪನ್ಮೂಲಗಳ ಬಳಕೆ ವಿಶ್ವದ ಮುಖ್ಯ ಗುರಿಯಾಗಬೇಕು ಎಂದು ಸಾಹಿತಿ ಆಂಜಿನಯ್ಯ ಜಾಲಿಬೆಂಚಿ ಅಭಿಪ್ರಾಯಪಟ್ಟರು.

Advertisement

ನಗರದ ಕನ್ನಡ ಭವನದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಅಯ್ಯನಗೌಡ ನಂದಿಹಳ್ಳಿ ಅವರ ‘ಗೆಳೆತನದ ಪ್ರೀತಿ ಬಡತನದಲ್ಲಿ ಕಂಡಾಗ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪರಿಸರ ಮಾಲಿನ್ಯದಿಂದ ಜಾಗತಿಕ ಹವಾಮಾನದಲ್ಲಿ ಆಗುತ್ತಿರುವ ವಿಪರೀತ ಏರಿಳಿತದಿಂದ ಮನುಷ್ಯ ಸಂಕುಲ ಮಾತ್ರವಲ್ಲದೇ ಜೀವರಾಶಿಯೇ ಸಂಕಷ್ಟಕ್ಕೆ ಸಿಲುಕಿದೆ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಅಪಾಯ ಖಚಿತ ಎಂದರು.

ಅಯ್ಯನಗೌಡ ನಂದಿಹಳ್ಳಿಯವರು ಸೇವಾ ನಿವೃತ್ತಿ ಹೊಂದಿದ್ದರೂ ಅವರೊಳಗಿನ ಪ್ರವೃತ್ತಿ ಇನ್ನೂ ಸಕ್ರಿಯವಾಗಿದೆ. ತಮ್ಮ ಜೀವನದ ಅನುಭವಾಧಾರಿತ ಈ ಕೃತಿ ಸಾಕಷ್ಟು ವಿಚಾರಗಳನ್ನು ತಿಳಿಸುತ್ತದೆ. 32ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಕಲಾ ಸೇವೆ ಮಾಡಿರುವ ಅಯ್ಯನಗೌಡರು, ಈಗ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿರುವುದು ವಿಶೇಷ ಎಂದರು.

ಗೆಳೆತನದ ಪ್ರೀತಿ ಬಡತನದಲ್ಲಿ ಕಂಡಾಗ ಎನ್ನುವ ಪುಸ್ತಕದಲ್ಲಿ ಐಶ್ವರ್ಯಕ್ಕಿಂತ ಆರೋಗ್ಯ ಮುಖ್ಯ. ಉಸಿರಿಗಾಗಿ ಹಸಿರು, ಕಲೆ, ರೈತಾಪಿ ಕೃಷಿ, ಸಂಗೀತ ಮತ್ತು ಗಾಯಕರು, ರಂಗ ಪ್ರಕಾರಗಳು ನಡೆದುಬಂದ ದಾರಿ ಮತ್ತು ರಾಜಕುಮಾರವರ ಸಂಕ್ಷಿಪ್ತ ಮಾಹಿತಿ ಪುಸ್ತಕ ಒಳಗೊಂಡಿದೆ ಎಂದು ವಿವರಿಸಿದರು. ಸಿದ್ದಪ್ಪ ಇತ್ಲಿ, ಚಂದ್ರಕಾಂತಗೌಡ, ಸಿ.ಎನ್‌.ಭಂಡಾರಿ, ಟಿ.ಪಿ.ಶಿವಯ್ಯ, ಎಸ್‌.ಎಚ್.ಗುಂಡಗುರತಿ, ತಾಯಣ್ಣ ಯರಗೇರಾ, ವಿರುಪನಗೌಡ, ಎಸ್‌.ಸಿದ್ದಪ್ಪ ಸಾಹುಕಾರ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next