Advertisement

‘ಎಚ್ಚರಿಕೆ ಮಾತು ನಿರ್ಲಕ್ಷಿಸಿದರೆ ಅಪಾಯ’

02:27 AM Jul 12, 2019 | Team Udayavani |

ಮಹಾನಗರ: ಹಿರಿಯರು, ಅನುಭವಿಗಳ ಮಾತನ್ನು ಗಾಳಿಗೆ ತೂರಿ ‘ನಮಗೆಲ್ಲವೂ ಗೊತ್ತಿದೆೆ; ಯಾರ ಉಪದೇಶ, ಎಚ್ಚರಿಕೆಯ ಮಾತುಗಳ ಅಗತ್ಯವಿಲ್ಲ’ ಎಂದುಕೊಂಡು ಮನಸ್ಸಿಗೆ ತೋಚಿದಂತೆ ವರ್ತಿಸುವುದರಿಂದ ಹೇಗೆ ಅಪಾಯವನ್ನು ಆಹ್ವಾನಿಸಬಹುದು ಎಂಬುದಕ್ಕೆ ಸಸಿಹಿತ್ಲು ಅಗ್ಗಿದ ಕಳಿಯದಲ್ಲಿ ರವಿವಾರ ಸಂಭವಿಸಿದ ದುರ್ಘ‌ಟನೆಯೇ ಸಾಕ್ಷಿ.

Advertisement

‘ನೀರಿಗಿಳಿಯಬೇಡಿ; ಅಪಾಯವಿದೆ ಎಂದರೂ ಆ ಯುವಕರು ಕಿವಿಗೊಡಲಿಲ್ಲ. ಮುಕ್ಕಾಲು ಗಂಟೆ ಸಮುದ್ರ ತೀರದಲ್ಲೇ ಕುಳಿತು ಅವರ ಮೇಲೆ ಕಣ್ಣಿಟ್ಟಿದ್ದೆ. ಗಂಟೆಯ ಬಳಿಕವೂ ಅವರು ಮೇಲೆ ಬರುವ ಲಕ್ಷಣ ಕಾಣಿಸದಿದ್ದಾಗ ಸಮೀಪದಲ್ಲೇ ಇರುವ ನನ್ನ ಮನೆಯತ್ತ ಒಮ್ಮೆ ಹೋಗಿ ಬರುತ್ತೇನೆಂದು ಹೊರಟಿದ್ದೆ. ಮನೆ ತಲುಪುವಷ್ಟರಲ್ಲಿ ಅವರು ಅಪಾಯಕ್ಕೆ ಸಿಲುಕಿದ್ದರು. ಬೊಬ್ಬೆ ಕೇಳಿ ಓಡೋಡಿ ಬಂದೆ; ನೋಡುತ್ತೇನೆ … ನಾಲ್ವರನ್ನೂ ಅಲೆಗಳು ಸೆಳೆದೊಯ್ದಿದ್ದವು. ಹರಸಾಹಸಪಟ್ಟು ಇಬ್ಬರನ್ನು ಹೇಗೋ ರಕ್ಷಿಸಿದೆ. ಮತ್ತಿಬ್ಬರನ್ನು ಉಳಿಸಿಕೊಳ್ಳಲು ನನ್ನಿಂದ ಆಗಲೇ ಇಲ್ಲ’ ಎಂದು ಕಣ್ಣೀರು ಹಾಕುತ್ತಾರೆ ಯುವಕರಿಬ್ಬರ ಪಾಲಿಗೆ ಆಪತ್ಬಾಂಧವನಾದ ಮೀನುಗಾರ ಗಂಗಾಧರ ಪುತ್ರನ್‌.

ಜೀವ ಕಸಿದ ನೀರಾಟ

ಬಾಕಿಮಾರು ಗದ್ದೆಯಲ್ಲಿ ನಡೆಯುತ್ತಿದ್ದ ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಭಾಗಿ ಯಾಗಲು ಬಂದಿದ್ದ ಯುವಕರ ತಂಡದ ಏಳು ಮಂದಿ ಮೊದಲ ಸುತ್ತಿನಲ್ಲಿಯೇ ಪರಾಭವಗೊಂಡಿದ್ದರಿಂದ ಈಜಾಡಲೆಂದು ಕಳಿಯದಲ್ಲಿರುವ ಸಮುದ್ರಕ್ಕೆ ಬಂದಿದ್ದರು. ಈ ಪೈಕಿ ಬಜಪೆಯ ಸುಜಿತ್‌, ಕಾವೂರಿನ ಗುರುಪ್ರಸಾದ್‌, ಬಜಪೆಯ ಸೃಜನ್‌ ಮತ್ತು ಕಾರ್ತಿಕ್‌ ನಾಲ್ವರು ಸಮುದ್ರಕ್ಕೆ ಇಳಿದಿದ್ದರು.

ಆಗ ಅಲ್ಲೇ ಬಲೆ ಹಾಕಿ ಮೀನು ಹಿಡಿಯುತ್ತಿದ್ದ ಗಂಗಾಧರ ಪುತ್ರನ್‌ ಅವರು ಇಲ್ಲಿ ಸಮುದ್ರ ಮೀನುಗಾರಿಕೆಗೂ ಕಷ್ಟವಾಗುವಷ್ಟು ಆಳವಿದೆ; ಈಜಬೇಡಿ ಎಂದು ಎಚ್ಚರಿಸಿದ್ದರು. ಅದನ್ನು ಲೆಕ್ಕಿಸದ ಯುವಕರು ‘ನಮಗೆ ಈಜಲು ಬರುತ್ತದೆ… ನಮ್ಮನ್ನು ಕೇಳಲು ನೀವು ಯಾರು’ ಎಂದೆಲ್ಲ ಮರುಪ್ರಶ್ನೆ ಹಾಕಿ ನೀರಿಗಿಳಿದು ಅಪಾಯಕ್ಕೆ ಸಿಲುಕಿದರು. ತತ್‌ಕ್ಷಣ ಧಾವಿಸಿ ಬಂದ ನಾನು ಸೃಜನ್‌, ಕಾರ್ತಿಕ್‌ ಅವರನ್ನು ಅಲ್ಲಿರುವ ಅವರ ಇತರ ಗೆಳೆಯರನ್ನು ಕರೆದು ರಕ್ಷಿಸುವ ಕೆಲಸ ಮಾಡಿದೆ. ಉಳಿದಿಬ್ಬರನ್ನು ರಕ್ಷಿಸಲು ಶಕ್ತಿಮೀರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮತ್ತೆ ಮನೆಗೆ ಓಡಿ ಹೋಗಿ ಬಲೆ ರೋಪ್‌ ಮತ್ತು ಟ್ಯೂಬ್‌ ತಂದು ಬದುಕಿಸಲು ಯತ್ನಿಸಿದೆ. ಆದರೂ ಆಗಲಿಲ್ಲ. ಬಾಕಿಮಾರಿನಲ್ಲಿ ಕ್ರೀಡೋತ್ಸವ ಇದ್ದ ಕಾರಣ ಅಕ್ಕಪಕ್ಕದವರೂ ಸಹಾಯಕ್ಕೆ ಸಿಗಲಿಲ್ಲ’ ಎಂದು ಕಣ್ಣೀರಿಡುತ್ತಾರೆ ಗಂಗಾಧರ್‌ ಅವರು.

Advertisement

ನೀರುಪಾಲಾಗಿದ್ದ ಸುಜಿತ್‌ ಮೃತದೇಹ ಸೋಮವಾರ ಹಾಗೂ ಗುರುಪ್ರಸಾದ್‌ ಮೃತದೇಹ ಮಂಗಳವಾರ ಪತ್ತೆಯಾಗಿತ್ತು.

ಏಳು ವರ್ಷಗಳ ಹಿಂದೆ ಇಲ್ಲಿ ಇದೇ ರೀತಿಯ ದುರ್ಘ‌ಟನೆ ಸಂಭವಿಸಿತ್ತು. ಮೀನು ಹಿಡಿಯಲೆಂದು ಬಂದಿದ್ದ ಯುವಕನೋರ್ವ ಸಮುದ್ರದ ಆಳಕ್ಕೆ ಇಳಿದು ಮೃತಪಟ್ಟಿದ್ದ.

ಸ್ಥಳೀಯರ ಸಲಹೆ ಪರಿಗಣಿಸಿ

ಯುವಕರು ಆಳಸಮುದ್ರಕ್ಕೆ ಇಳಿದು ಈಜಾಡುವ ಮುನ್ನ ಸ್ಥಳೀಯ ನಿವಾಸಿಗಳು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಈಜಾಡಲು ಗೊತ್ತಿದೆ ಎಂದು ದಯವಿಟ್ಟು ಹೋಗಿ ಜೀವಕ್ಕೇ ಸಂಚಕಾರ ತಂದುಕೊಳ್ಳಬೇಡಿ.
– ಗಂಗಾಧರ ಪುತ್ರನ್‌,ಈರ್ವರು ಯುವಕರನ್ನು ರಕ್ಷಿಸಿದವರು
– ಧನ್ಯಾ ಬಾಳೆಕಜೆ
Advertisement

Udayavani is now on Telegram. Click here to join our channel and stay updated with the latest news.

Next