Advertisement

ಆರ್‌ಟಿಐ ದುರ್ಬಲಗೊಳಿಸಿದರೆ ಅಪಾಯ

12:23 AM Jul 26, 2019 | Team Udayavani |

ವಿರೋಧವನ್ನು ಬರೀ ರಾಜಕೀಯ ವಿರೋಧ ಎಂಬ ದೃಷ್ಟಿಯಲ್ಲಿ ನೋಡದೆ ಅದರಲ್ಲಿರುವ ನೈಜ ಕಾಳಜಿಯನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ.

Advertisement

ಮಾಹಿತಿ ಹಕ್ಕು ಕಾಯಿದೆ(ಆರ್‌ಟಿಐ)ಗೆ ಸರಕಾರ ಮಾಡಲು ದ್ದೇಶಿಸಿದ ತಿದ್ದುಪಡಿ ವಿವಾದಕ್ಕೀಡಾಗಿದೆ. ಲೋಕಸಭೆಯಲ್ಲಿ ಮಂಡಿಸಲಾದ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲೂ ಅಂಗೀಕಾರ ಸಿಕ್ಕರೆ ಜಾರಿಗೆ ಬರಲಿದೆ. ಎನ್‌ಡಿಎ ಸರಕಾರ ಹಿಂದಿನ ಅವಧಿಯಲ್ಲೇ ತಿದ್ದುಪಡಿಗೆ ಮುಂದಾದರೂ ವಿಪಕ್ಷಗಳ ತೀವ್ರ ವಿರೋಧದಿಂದಾಗಿ ಕೈಬಿಟ್ಟಿತ್ತು. ಇದೀಗ ನಿಚ್ಚಳ ಬಹುಮತದೊಂ ದಿಗೆ ಎರಡನೇ ಅವಧಿಗೆ ಅಧಿಕಾರಕ್ಕೇರಿರುವ ಮೋದಿ ಸರಕಾರ ಉದ್ದೇಶಿತ ತಿದ್ದುಪಡಿಯನ್ನು ಆದ್ಯತೆಯಲ್ಲಿ ಪರಿಗಣಿಸಿರುವುದು ಅದರ ಉದ್ದೇಶದ ಬಗ್ಗೆ ಕೊಂಚ ಸಂದೇಹ ಮೂಡಿಸಿದೆ.

ಕಾಂಗ್ರೆಸ್‌, ಡಿಎಂಕೆ, ಟಿಎಂಸಿ ಮತ್ತಿತರ ವಿಪಕ್ಷಗಳು ಈ ತಿದ್ದುಪಡಿ ಯನ್ನು ತೀವ್ರವಾಗಿ ವಿರೋಧಿಸಿವೆ. ಮಸೂದೆ ಅಂಗೀಕಾರದ ಸಂದರ್ಭದಲ್ಲಿ ಕಾಂಗ್ರೆಸ್‌ ಸಭಾತ್ಯಾಗ ಮಾಡಿದೆ. ಈ ವಿರೋಧವನ್ನು ಬರೀ ರಾಜಕೀಯ ದೃಷ್ಟಿಯಲ್ಲಿ ನೋಡದೆ ಅದರಲ್ಲಿರುವ ನೈಜ ಕಾಳಜಿಯ ಅಂಶವನ್ನೂ ಪರಿಶೀಲಿಸುವ ಅಗತ್ಯವಿದೆ.

2005ರಲ್ಲಿ ಅಂದಿನ ಯುಪಿಎ ಸರಕಾರ ಜಾರಿಗೆ ತಂದ ಆರ್‌ಟಿಐ ಕಾಯಿದೆ ಜನಸಾಮಾನ್ಯರ ಕೈಗೆ ಸಿಕ್ಕ ಬಲವಾದ ಅಸ್ತ್ರ ಎಂಬುದು ಸ್ಪಷ್ಟ. ಬರೀ 10 ರೂ.ನ ಅರ್ಜಿಗೆ ಕೋಟಿಗಟ್ಟಲೆ ರೂ.ಗಳ ಹಗರಣವನ್ನು ಬಯಲಿಗೆ ತರಲು, ಸರಕಾರಿ ಇಲಾಖೆಗಳ ನಿದ್ದೆಗೆಡಿಸಲು ಸಾಧ್ಯವಾದದ್ದು ಈ ಕಾಯಿದೆಯಿಂದಲೇ. ಆಡಳಿತ, ನಿರ್ದಿಷ್ಟ ಸಾರ್ವಜನಿಕ ಸೇವೆಗಳನ್ನು ಇನ್ನಷ್ಟು ಸಶಕ್ತಗೊಳಿಸುವ ಮತ್ತು ಸರಕಾರಿ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಜನರಿಗೆ ಸಿಕ್ಕ ಸುಲಭ ಸೌಲಭ್ಯವಿದು. ಹೀಗಾಗಿ ಆರ್‌ಟಿಐ ಬಳಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಜನರಿಗೆ ತಮ್ಮ ನಿರೀಕ್ಷೆ ಈಡೇರೀತೆಂಬ ಭರವಸೆ ನೀಡುವ ಹಾಗೂ ವ್ಯವಸ್ಥೆಗೆ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸು ವಂತೆ ಎಚ್ಚರಿಕೆ ನೀಡುವಂಥ ಕಾಯಿದೆಯನ್ನು ಯಾವುದೇ ಸರಕಾರ ವಾಗಲಿ ತನ್ನ ಮರ್ಜಿಗೆ ತಕ್ಕಂತೆ ಬದಲಾಯಿಸಿಕೊಳ್ಳಬಾರದು.

ತಿದ್ದುಪಡಿ ಮಸೂದೆಯಲ್ಲಿರುವ ಮೂರು ಅಂಶಗಳಿಗೆ ವಿಪಕ್ಷಗಳು ಮತ್ತು ಆರ್‌ಟಿಐ ಕಾರ್ಯಕರ್ತರ ತೀವ್ರ ವಿರೋಧ ಇದೆ. ಮುಖ್ಯ ಮಾಹಿತಿ ಆಯುಕ್ತರು ಮತ್ತು ಇತರ ಮಾಹಿತಿ ಆಯುಕ್ತರಿಗಿರುವ ಐದು ವರ್ಷದ ಸ್ಥಿರ ಕಾಲಾವಧಿಯ ಬದಲಾವಣೆ, ವೇತನವನ್ನು ಚುನಾವಣಾ ಆಯುಕ್ತರ ವೇತನಕ್ಕೆ ಸಮಾನಗೊಳಿಸುವುದು ಮತ್ತು ಈ ಬದಲಾವಣೆಗೆ ಸಂಬಂಧಿಸಿದಂತೆ ಸರಕಾರವೇ ಅಧಿಸೂಚನೆ ಹೊರಡಿಸುವುದು ವಿವಾದಿತ ಅಂಶಗಳು.

Advertisement

ಈ ತಿದ್ದುಪಡಿಯ ಪ್ರಕಾರ ಸರಕಾರ ತನ್ನ ಮೂಗಿನ ನೇರಕ್ಕೆ ನಡೆದು ಕೊಳ್ಳದ ಮುಖ್ಯ ಮಾಹಿತಿ ಆಯುಕ್ತರಿಗೆ ಪದಚ್ಯುತಿಯ ಬೆದರಿಕೆಯನ್ನೊಡ್ಡಬಹುದು ಇಲ್ಲವೇ ಅಧಿಕಾರಾವಧಿ ವಿಸ್ತರಣೆಯ ಆಮಿಷ ಒಡ್ಡಬಹುದು. ಅಂತೆಯೇ ವೇತನ ಏರಿಸುವ ಪ್ರಲೋಭನೆ ಯನ್ನೂ ಒಡ್ಡಬಹುದು. ಈ ರಾಜಕೀಯ ಕಾರಣಗಳಿಗಾಗಿ ತಿದ್ದು ಪಡಿಯ ಹಿಂದಿನ ನೈಜ ಉದ್ದೇಶ ಪ್ರಶ್ನೆಗೀಡಾಗಿದೆ. ಹಿಂದಿನ ಅವಧಿ ಯಲ್ಲಿ ಎನ್‌ಡಿಎ ಸರಕಾರ ಆರ್‌ಟಿಐಯಿಂದಾಗಿ ಕೆಲವು ಮುಜು ಗರದ ಸನ್ನಿವೇಶಗಳನ್ನು ಎದುರಿಸಿತ್ತು. ಹೀಗಾಗಿ ಕಾಯಿದೆಯನ್ನು ಹಲ್ಲಿಲ್ಲದ ಹಾವನ್ನಾಗಿಸಲಾಗುತ್ತಿದೆ ಎನ್ನುವುದು ವಿಪಕ್ಷಗಳ ಟೀಕೆ.

2005ರಲ್ಲಿ ಆರ್‌ಟಿಐ ಕಾಯಿದೆಯನ್ನು ಅವಸರದಲ್ಲಿ ಅನುಮೋದನೆ ಪಡೆಯಲಾಗಿತ್ತು. ಆರ್‌ಟಿಐ ಆಯುಕ್ತರಿಗೆ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ಸ್ಥಾನಮಾನವನ್ನು ನೀಡಿದ್ದರೂ ಅವರ ತೀರ್ಪನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಬಹುದಿತ್ತು. ಅಂತೆಯೇ ಕಾಯಿದೆ ಸರಕಾರಕ್ಕೆ ಕಾನೂನು ರಚಿಸುವ ಅಧಿಕಾರ ವನ್ನು ಕೊಟ್ಟಿರಲಿಲ್ಲ. ಈ ವಿರೋಧಾಭಾಸಗಳನ್ನು ಸರಿಪಡಿಸಲಾ ಗುತ್ತಿದೆ ಅಷ್ಟೇ ಎಂಬುದು ಸರಕಾರದ ವಿವರಣೆ.

ಯಾವುದೇ ಕಾಯಿದೆ ಅಥವಾ ಕಾನೂನನ್ನು ಕಾಲಕಾಲಕ್ಕೆ ಪರಿಷ್ಕರಿಸಬೇಕು ಎನ್ನುವುದು ನಿಜ. ಆರ್‌ಟಿಐ ಕಾಯಿದೆ ಜಾರಿಗೆ ಬಂದು 15 ವರ್ಷಗಳಾಗುತ್ತಿದ್ದು, ಲೋಪದೋಷಗಳನ್ನು ಸರಿಪಡಿ ಸಲು ಇದು ಪಕ್ವವಾದ ಸಮಯ. ಆದರೆ ಇಂಥ ತಿದ್ದುಪಡಿ ಕಾಯಿದೆಯ ಮೂಲ ಆಶಯಕ್ಕೆ ಭಂಗ ತರಬಾರದೆಂಬ ಎಚ್ಚರಿಕೆ ಆಳುವವರಲ್ಲಿ ಇರಬೇಕಾದದ್ದು ಅವಶ್ಯ. ಆರ್‌ಟಿಐ ಆಯುಕ್ತರ ಸ್ಥಾನಮಾನ, ಅಧಿಕಾರ, ವೇತನ ಮತ್ತು ಸ್ವಾಯತ್ತೆಯನ್ನು ದುರ್ಬಲಗೊಳಿಸುವ ಪ್ರಯತ್ನ ಬರೀ ಆ ಸಂಸ್ಥೆಯ ಮೇಲೆ ಮಾತ್ರವಲ್ಲದೆ ಒಟ್ಟಾರೆಯಾಗಿ ಇಡೀ ಸಾಂವಿಧಾನಿಕ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುವ ಅಪಾಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next