Advertisement

ಅಮೇದಿಕಲ್ಲು ಬೆಟ್ಟದಲ್ಲಿ ಭಾರೀ ಸ್ಫೋಟ !

02:25 AM Dec 29, 2019 | mahesh |

ಬೆಳ್ತಂಗಡಿ/ನೆಲ್ಯಾಡಿ: ಚಾರಣಿಗರ ಮೆಚ್ಚಿನ ಪಶ್ಚಿಮ ಘಟ್ಟ ಶ್ರೇಣಿ ಕಳೆದೆರಡು ವರ್ಷಗಳಿಂದ ಭೂ ಕುಸಿತಗಳಿಂದ ಸುದ್ದಿಯಾಗುತ್ತಿದೆ. ಇದೀಗ ಶಿಶಿಲ ಗ್ರಾಮದ ಗೇನೋಡಿ ಹಳ್ಳಿಯ ಪೂರ್ವ ಭಾಗದಲ್ಲಿರುವ ಅಮೇದಿಕಲ್ಲು ಪ್ರದೇಶದಲ್ಲಿ ವಾರಗಳ ಹಿಂದೆ ಬೃಹದಾಕಾರದ ಕಲ್ಲು ಬಂಡೆ ಉರುಳಿರುವುದಾಗಿ ಪ್ರತ್ಯಕ್ಷದರ್ಶಿ ಗಳು ತಿಳಿಸಿದ್ದಾರೆ.

Advertisement

ಪಶ್ಚಿಮ ಘಟ್ಟ ಶ್ರೇಣಿಯಲ್ಲಿರುವ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ದೇನೋಡಿ ಪರಿಸರವೇ ಜನವಸತಿಯ ಕೊನೆಯ ಸ್ಥಳ. ಅಲ್ಲಿಂದ 10.5 ಕಿ.ಮೀ. ದೂರದಲ್ಲಿ ಅಮೇದಿಕಲ್ಲು ಪರ್ವತ ಶ್ರೇಣಿ ಇದೆ. ಮಳೆಗಾಲದಲ್ಲಿ ಚಾರಣಕ್ಕೆ ಅನುಮತಿಯಿಲ್ಲವಾದ್ದರಿಂದ ಜನಸಂಚಾರ ಇಲ್ಲ. ಚಿಕ್ಕಮಗಳೂರು ಜಿಲ್ಲೆಯ ಗಡಿ ಪ್ರದೇಶದಲ್ಲಿರುವ ಅಮೇದಿಕಲ್ಲು ಬೆಟ್ಟದಲ್ಲಿ ಡಿ. 22ರಂದು ಮಧ್ಯಾಹ್ನ 2.30ಕ್ಕೆ ಭಯಾನಕ ಸ್ಫೋಟದ ಸದ್ದು ಕೇಳಿಸಿದೆ. ಅಕ್ಕಪಕ್ಕದ ಮನೆಮಂದಿ ಭಯದಿಂದ ಸೇರಿದಾಗಲೇ ಬೆಟ್ಟದಿಂದ ಬೃಹದಾಕಾರದ ಬಂಡೆ ಉರುಳಿ ಕಲ್ಲಿನ ಧೂಳು ಸುತ್ತಮುತ್ತ ಬೆಟ್ಟ ಆವರಿಸಿರುವುದನ್ನು ಕಂಡಿದ್ದರು.

ಗುರುವಾರ ಸಂಜೆ ವೇಳೆಗೆ ಬೆಟ್ಟದಿಂದ ಮತ್ತೆ ಭಾರೀ ಶಬ್ದ ಬಂದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆತಂಕ ಮನೆಮಾಡಿದೆ. ಹಗಲಿನಲ್ಲಿ ಅಮೇದಿಕಲ್ಲಿನ ಎಡಭಾಗದಲ್ಲಿ ಹೊಗೆ ಅಥವಾ ಧೂಳಿನಂತೆ ಅಸ್ಫಷ‌r ಚಿತ್ರಣ ಕಾಣುತ್ತಿದ್ದು ಬೆಟ್ಟದ ಎಡಭಾಗದಲ್ಲಿ ಭೂಕುಸಿತವಾಗಿ ಕಲ್ಲು ಬಂಡೆಗಳು ಉರುಳಿರುವ ಸಾಧ್ಯತೆಗಳಿವೆ ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.

ಅರಣ್ಯ ಇಲಾಖೆ ಪರಿಶೀಲನೆ
ಈ ಬಗ್ಗೆ ಉದಯವಾಣಿಗೆ ಮಾಹಿತಿ ನೀಡಿದ ಕಳೆಂಜ ಫಾರೆಸ್ಟರ್‌ ಪ್ರಶಾಂತ್‌ ಅವರು ಭಾರೀ ಶಬ್ದ ಕೇಳಿಬಂದಿರುವ ಮಾಹಿತಿ ತಡವಾಗಿ ಸಿಕ್ಕಿದ್ದು ದೇನೋಡಿ-ಕೊಂಬಾರು ಭಾಗದಲ್ಲಿ ಪರಿಶೀಲನೆ ನಡೆಸಲಾಗಿದೆ. ಭೂಕುಸಿತದಂತಹ ಚಿತ್ರಣಗಳು ಇದುವರೆಗೆ ಕಂಡುಬಂದಿಲ್ಲ. ರವಿವಾರ ಮತ್ತೆ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ಬಾರಿ ಗಡಾಯಿಕಲ್ಲು
ತಾಲೂಕಿನ ಇನ್ನೊಂದು ಪ್ರವಾಸಿ ತಾಣ ಗಡಾಯಿಕಲ್ಲು,ಇದರ ಪೂರ್ವ ಹಾಗೂ ದಕ್ಷಿಣ ದಿಕ್ಕಿನ ಮಧ್ಯ ಭಾಗವಾದ ಬೇಲಾಜೆಯಲ್ಲಿ ಜು. 23ರಂದು ಬೆಳಗ್ಗೆ ಒಂದು ಭಾಗದ ಕಲ್ಲಿನ ಸೆಲೆ ಜರಿದು ಬಿದ್ದಿತ್ತು. ಅದಾದ ಎರಡೇ ತಿಂಗಳಲ್ಲಿ ಆ. 9ರಂದು ಪಶ್ಚಿಮಘಟ್ಟ ಚಾರ್ಮಾಡಿ ಸೇರಿದಂತೆ ಭೂಕುಸಿತ ಸಂಭವಿಸಿತ್ತು.

Advertisement

ಕಳೆದ ಬಾರಿಯೂ ಕುಸಿದಿತ್ತು
ಕಳೆದ ವರ್ಷ ಜೂನ್‌ನಲ್ಲಿ ಮೇದಿಕಲ್ಲು ಬೆಟ್ಟದ ಒಂದು ಪಾರ್ಶ್ವ ಕುಸಿದಿತ್ತು. ಸುಮಾರು 15 ದಿನಗಳ ಕಾಲ ಬೆಟ್ಟದಿಂದ ಕೆಂಪನೆ ನೀರು ಹರಿಯುತ್ತಿತ್ತು. ಈ ಬಾರಿ ಅದೇ ಬೆಟ್ಟದ ತುದಿಯಿಂದ ಕಲ್ಲು ಉರುಳುವ ಭಾರೀ ಸದ್ದು ಸುಮಾರು ಶಿಶಿಲ ಆಸುಪಾಸಿನ 6 ಕಿ.ಮೀ. ದೂರದ ವರೆಗೆ ಕೇಳಿಸಿದೆ.
– ಲಿಂಗಪ್ಪ ಪೂಜಾರಿ, ಗೇನೋಡಿ ನಿವಾಸಿ, ಪ್ರತ್ಯಕ್ಷದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next