ಲಂಡನ್: ಧೂಮಪಾನ ದೇಹಕ್ಕೆ ಒಳ್ಳೆಯದಲ್ಲ, ಅದು ಅಪಾಯಕಾರಿ, ಅದರಿಂದ ವಿಪರೀತ ಆರೋಗ್ಯ ಸಮಸ್ಯೆಗಳು, ವಿವಿಧ ಕಾಯಿಲೆಗಳೂ ಬರುತ್ತವೆ ಎನ್ನುವುದು ಗೊತ್ತೇ ಇದೆ. ಅ ಕೋವಿಡ್ ಸೋಂಕಿನ ವಿಚಾರದಲ್ಲೂ ಧೂಮಪಾನ ಅತಿ ಅಪಾಯಕಾರಿಯಾಗಿದ್ದು, ಸೋಂಕಿನಿಂದಾಗಿ ಜಗತ್ತಿನಲ್ಲಿ ಮೃತಪಟ್ಟವರ ಪ್ರಮಾಣ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ಹೀಗೆ ಹೇಳಲಾಗಿದೆ. ಧೂಮಪಾನಿ ಕೋವಿಡ್ ರೋಗಿಗಳಿಗೆ ಉಂಟಾಗುವ ಹಾನಿಯ ಬಗ್ಗೆ ಸುಮಾರು 34 ವೈಜ್ಞಾನಿಕ ಸಂಶೋಧನ ವರದಿಗಳನ್ನಾಧರಿಸಿದ ವಿಮರ್ಶೆಯಲ್ಲಿ ಹೀಗೆ ಹೇಳಲಾಗಿದೆ. ಕೋವಿಡ್ ತಗುಲಿದ ಧೂಮಪಾನಿಗಳಲ್ಲಿ ಆಸ್ಪತ್ರೆಗೆ ದಾಖಲಾದವರು, ಅತಿ ಹೆಚ್ಚು ವೈರಾಣು ಬಾಧೆಗೊಳಗಾದವರು ಮತ್ತು ಮೃತರಾದವರ ಸಂಖ್ಯೆಯೂ ಹೆಚ್ಚಿದೆ ಎಂದು ಹೇಳಲಾಗಿದೆ.
ಕೋವಿಡ್‌ನಿಂದಾಗಿ ಬೇಗನೆ ಆಸ್ಪತ್ರೆಗೆ ದಾಖಲಾಗುವವರಲ್ಲಿ ಶೇ.18ರಷ್ಟು ಮಂದಿ ಧೂಮಪಾನಿಗಳಾಗಿದ್ದಾರಂತೆ. ಅಲ್ಲದೇ ಅವರಲ್ಲಿ ಬಹು ವೇಗವಾಗಿ ಕೋವಿಡ್ ವೈರಾಣು ವೃದ್ಧಿಯಾಗುತ್ತಿರುವುದು ಸಂಶೋಧನೆಗಳಲ್ಲಿ ಕಂಡುಬಂದಿದೆ. ಕಳೆದ ಎಪ್ರಿಲ್‌ನಲ್ಲಿ ನಡೆದ ಇನ್ನೊಂದು ಸಂಶೋಧನೆಯಲ್ಲಿ ಧೂಮಪಾನಿಗಳಿಗೆ ಕೋವಿಡ್ ಅಪಾಯ ಕಡಿಮೆ ಎಂದು ಹೇಳಲಾಗಿತ್ತು. ಆದರೆ ಇದು ಸಣ್ಣ ಪ್ರಮಾಣದಲ್ಲಿ ನಡೆದ ಸಂಶೋಧನೆಯಾಗಿದ್ದು, ದತ್ತಾಂಶಗಳು ಸಮಗ್ರವಾಗಿರಲಿಲ್ಲ. ಜತೆಗೆ ದತ್ತಾಂಶದಲ್ಲಿ ಕೆಲವೊಂದು ವ್ಯತ್ಯಾಸಗಳು ಸಂಶೋಧನೆಯ ಸತ್ಯಾಸತ್ಯತೆಯ ಪ್ರಶ್ನೆಗೆ ಕಾರಣವಾಗಿದ್ದವು. ಇದರೊಂದಿಗೆ ಧೂಮಪಾನಿಗಳ ಶ್ವಾಸಕೋಶ ತಂಬಾಕಿನಿಂದಾಗಿ ಹೆಚ್ಚುವರಿ ಒತ್ತಡಕ್ಕೆ ಸಿಲುಕುವುದರಿಂದ ಕೋವಿಡ್ ಸೋಂಕು ತಗುಲಿದರೆ ಅಂತಹವರಿಗೆ ಹೆಚ್ಚು ಸಮಸ್ಯೆಯಾಗುತ್ತದೆ ಎಂದು ಹೇಳಲಾಗಿದೆ. ಇದರನ್ವಯ ಸದ್ಯ ಜಗತ್ತಿನ ಹೆಚ್ಚಿನ ಎಲ್ಲ ಸಂಶೋಧನೆಗಳಲ್ಲಿ ಧೂಮಪಾನದಿಂದಾಗಿ ಕೋವಿಡ್ ಅಪಾಯ ಹೆಚ್ಚಾಗಿದೆ ಎಂದೇ ತಿಳಿದುಬರುತ್ತದೆ. ಹಲವಾರು ಸಂಶೋಧನೆಗಳ ದತ್ತಾಂಶಗಳು ಇದನ್ನು ಸಮರ್ಥಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.