ವಿಜಯಪುರ: ಹಿಂದೆಲ್ಲ ದೇಶ ಭಕ್ತಿಗೀತೆ, ನಾಡಗೀತೆಗಳ ಸಂಭ್ರಮಾಚರಣೆ ಎಲ್ಲರ ಹೆಮ್ಮೆಗೆ ಪಾತ್ರವಾಗಿದ್ದವು. ನಾಟಕ, ನಮ್ಮ ಗ್ರಾಮೀಣ ಪಾರಂಪರಿಕ ತಲೆಮಾರಿನ ನಾಟಕ ರಂಗಭೂಮಿ ಜಾನಪದ ಕಲೆಗಳು ಇಂದಿನ ಆಧುನಿಕ ಯುಗದ ಸಿನಿಮಾ, ಧಾರಾವಾಹಿಗಳ ವೇಗದಲ್ಲಿ ನಶಿಸಿ ಹೋಗುತ್ತಿವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ವಿಷಾದಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಾಹಿತ್ಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗೀತ ಗಾಯನ ಹಾಗೂ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶ ಉತ್ತಮ ಸಾಧನೆಯತ್ತ ಸಾಗುವಲ್ಲಿ ಭವಿಷ್ಯದ ಪೀಳಿಗೆಗೆ ಉತ್ತಮ ಸಂಸ್ಕಾರ ನೀಡುವ ಅಗತ್ಯವಿದೆ. ಇಂದಿನ ಪ್ರಜೆಗಳನ್ನು ಮುಂದಿನ ಸತøಜೆಗಳಾಗಿ ರೂಪಿಸುವ ಹೊಣೆ ಎಲ್ಲ ಪಾಲಕರ ಮೇಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶ್ರಾಂತ ಸಹಾಯಕ ನಿರ್ದೇಶಕ ಡಾ| ಸೋಮಶೇಖರ ವಾಲಿ ಮಾತನಾಡಿ, ದೇಶ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ನಮ್ಮ ಅನೇಕ ನಾಯಕರು ತಮ್ಮ ಮನೆ, ಮಠ ಆಸ್ತಿಯನ್ನೆಲ್ಲ ಕಳೆದುಕೊಂಡು ದೇಶದ ಸ್ವಾತಂತ್ರ್ಯಕ್ಕೆ ಕಂಕಣ ತೊಟ್ಟಿದ್ದರು ಎಂಬುದನ್ನು ಯಾರೂ ಮರೆಯಬಾರದು. ಕಾರಣ ಅಂದು ನಮಗೆ ಎಲ್ಲ ಕ್ಷೇತ್ರಗಳಲ್ಲಿ ನಿರ್ಬಂಧವಿತ್ತು. ಜನಸಾಮಾನ್ಯರ ನಡುವಳಿಕೆ ಮೇಲೆ ನಿರ್ಬಂಧವಿತ್ತು. ಗುಲಾಮಗಿರಿಯಲ್ಲಿ ನಮ್ಮ ಬದುಕು ಸಾಗಿತ್ತು. ಆದರೆ ನಮ್ಮ ಹೆಮ್ಮೆ ನಾಯಕರ ತ್ಯಾಗ ಮತ್ತು ಬಲಿದಾನದಿಂದ ಇಂದು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಮುಕ್ತ ಅವಕಾಶ ದೊರೆತಿದ್ದು ನಮ್ಮೆಲ್ಲರ ಭಾಗ್ಯ ಎಂದರು.
ಕನ್ನಡ ನಾಡು ನುಡಿಗಾಗಿ ಸಮಾಜದ ಹಲವಾರು ಸಂಘ ಸಂಸ್ಥೆಗಳು ದುಡಿಯುತ್ತಿದ್ದು, ಕನ್ನಡ ನಾಡು ನುಡಿ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಗಳ ಸಂರಕ್ಷಣೆ ಸಮಾಜದ ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಚುಸಾಪ ಅಧ್ಯಕ್ಷ ಬಂಡೆಪ್ಪ ತೇಲಿ ಹೇಳಿದರು.
ನಗರದ ಹಾಸ್ಯ ಟಿವಿ ಕಲಾವಿದ ಪ್ರಶಾಂತ ಚೌಧರಿ ಸಮಾರಂಭಕ್ಕೆ ಚಾಲನೆ ನೀಡಿದರು. ವಿವೇಕ್ ಹುಂಡೇಕಾರ, ಫಯಾಜ್ ಕಲಾದಗಿ, ಮಂಜುಳಾ ಹಿಪ್ಪರಗಿ, ಎಸ್.ಎಸ್. ಖಾದ್ರಿ ಇನಾಮದಾರ, ರಂಗನಾಥ ಅಕ್ಕಲಕೋಟ, ಎಸ್.ವೈ. ನಡುವಿನಕೇರಿ, ಭರತೇಶ ಕಲಗೊಂಡ, ರವಿ ಕಿತ್ತೂರ, ಡಾ| ಎಸ್.ಎಸ್. ಅನಂತಪುರ, ಉಮೇಶ ಕಲಗೊಂಡ, ಸುಭಾಷ್ ಯಾದವಾಡ, ಬಿ.ಎಸ್. ಸಜ್ಜನ, ಆರ್.ವಿ. ಪಾಟೀಲ, ಸುಮಂಗಲಾ ಪೂಜಾರಿ, ಎಂ.ಆರ್. ಕಬಾಡೆ, ರಾಜಶೇಖರ ಉಮರಾಣಿ, ವಿದ್ಯಾ ಕೊಟೆನ್ನವರ, ಎಲ್.ಎಲ್. ತೊರವಿ, ಮುಗಳೊಳ್ಳಿ, ಹುಸೇನಬಾಶಾ ಶೇಖ್, ರಾವಜಿ ದಸ್ತಗೀರ ಸಾಲೋಟಗಿ, ಎಸ್.ಎಸ್. ಕಿಣಗಿ ಇದ್ದರು.
ವೀರೇಶ ವಾಲಿ, ಅಕ್ಕ ಮಹಾದೇವಿ ವಿಜಯದಾರ, ಹಯ್ನಾತ ರೋಜಿನದಾರ, ಸೋಮಶೇಖರ ಕುರ್ಲೆ, ಸಿದ್ದು ಮೇಲಿನಮನಿ, ತುಕಾರಾಮ ರಾಠೊಡ, ಶ್ರೀಗಿರಿ, ರಾಘವೇಂದ್ರ, ಪ್ರಜ್ಞಾ ಮೇತ್ರಿ, ಶಿವಶಂಕರ ಅಂಬಿಗೇರ, ವಿನೋದ ಕಟಗೇರಿ ಗೀತ ಗಾಯನ ನಡೆಸಿಕೊಟ್ಟರು.
ಲಿಂ| ಎಸ್.ಎಂ. ಹುಂಡೇಕಾರ ಲಿಂ| ಎಂ.ಎಂ. ಹುಂಡೇಕಾರ ಹಾಗೂ ಲಿಂ| ರಾಜೇಶ್ವರಿ ಹುಂಡೇಕಾರ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ನಡೆಯಿತು. ಬಸವರಾಜ ಕುಂಬಾರ ಸ್ವಾಗತಿಸಿದರು. ದಾಕ್ಷಾಯಣಿ ಬಿರಾದಾರ ನಿರೂಪಿಸಿದರು. ಸುಭಾಷ್ ಕನ್ನೂರ ವಂದಿಸಿದರು.