Advertisement
ಸಗಟು ದರಉಡುಪಿ ಹಾಗೂ ಕುಂದಾಪುರದಲ್ಲಿ ಸಗಟು ಖರೀದಿಯಲ್ಲಿಯೇ ಈರುಳ್ಳಿ ದರ ನೂರರ ಗಡಿ ತಲುಪಿದೆ. ಇದನ್ನು ವ್ಯಾಪಾರಿಗಳು 130ರ ವರೆಗೆ ಮಾರಾಟ ಮಾಡಲಾರಂಭಿಸಿದ್ದಾರೆ. ಕಳೆದ 15 ದಿನಗಳಲ್ಲಿ 40-45 ರೂ.ಗಳಿಂದ 90ರೂ.ವರೆಗೆ ಈರುಳ್ಳಿ ದರ ಬಂದು ನಿಂತಿದೆ. ಮಹಾರಾಷ್ಟ್ರ, ಪೂನಾ ಮೊದಲಾದೆಡೆ ಲಾಕ್‌ಡೌನ್ ಮೊದಲಾದ ಕಾರಣಗಳಿಂದ ಈರುಳ್ಳಿ ಎಪಿಎಂಸಿ ಮೂಲಕ ಸರಬರಾಜು ಆಗುತ್ತಿಲ್ಲ. ಮಹಾರಾಷ್ಟ್ರದಲ್ಲೂ ಮಳೆ, ಈರುಳ್ಳಿ ಬೆಳೆಯುವ ಉತ್ತರ ಕರ್ನಾಟಕದಲ್ಲೂ ಮಳೆಯಾದ ಪರಿಣಾಮವಾಗಿ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಹಳೆ ಈರುಳ್ಳಿ ಖಾಲಿಯಾಗಿ ಹೊಸ ಈರುಳ್ಳಿ ಈ ಸಮಯದಲ್ಲಿ ಮಾರುಕಟ್ಟೆಗೆ ಬರಬೇಕಿತ್ತು. ಆದರೆ ಮಳೆ ಕಾರಣದಿಂದ ಹೊಸ ಈರುಳ್ಳಿ ಬೆಳೆಗೆ ಹಾನಿಯಾಗಿದ್ದು ಹೊಸದು ಬರುತ್ತಿಲ್ಲ, ಹಳೆಯದು ಸಾಲುತ್ತಿಲ್ಲ ಎನ್ನುವಂತಾಗಿದೆ.
ಒಂದೆಡೆ ಈರುಳ್ಳಿ ಬೆಲೆ ಏರಿದ್ದರೆ ಇನ್ನೊಂದೆಡೆ ಕ್ಯಾಬೇಜ್, ಬೀಟ್‌ರೂಟ್ ಮೊದಲಾದ ತರಕಾರಿಗಳ ಬೆಲೆಯೂ ದುಪ್ಪಟ್ಟಾಗಿದೆ. ಹೀಗೆ ಬೆಲೆ ಎರಡುಪಟ್ಟಾದ ಉದಾಹರಣೆಯೇ ಕಡಿಮೆ ಎನ್ನುತ್ತಾರೆ ವ್ಯಾಪಾರಿಗಳು. ತರಕಾರಿ ಅಂಗಡಿಗೆ ಆಗಮಿಸುವಾಗಲೇ ದೂರದಲ್ಲೇ ಈರುಳ್ಳಿ ಹಾಗೂ ಟೊಮೆಟೊ ದರ ಕೇಳಿ ಮುಂದಿನ ಖರೀದಿ ಕುರಿತು ತೀರ್ಮಾನಿಸುತ್ತಿದ್ದಾರೆ. ಒಟ್ಟು ತರಕಾರಿ ಖರೀದಿಯಲ್ಲಿ ಅರ್ಧಕ್ಕಿಂತ ಹೆಚ್ಚು ಮೊತ್ತ ಈರುಳ್ಳಿಗೇ ಆಗುವ ಅಪಾಯ ಇದೆ ಎಂದು ಈರುಳ್ಳಿ ಖರೀದಿಸದೆ ಅನೇಕರು ಇತರ ತರಕಾರಿ ಮಾತ್ರ ಖರೀದಿಸುತ್ತಿದ್ದಾರೆ ಎನ್ನುವುದು ಮಾರುಕಟ್ಟೆಯಲ್ಲಿ ಕಂಡು ಬಂತು. ದುಪ್ಪಟ್ಟು ಬೆಲೆ
ಕ್ಯಾಬೇಜ್ ದರ 30 ರೂ. ಇದ್ದುದು 65 ರೂ. ಆಗಿದೆ. ಬೀಟ್‌ರೂಟ್ 30-35 ರೂ. ಇದ್ದುದು 60 ರೂ. ಆಗಿದೆ. ಬೀನ್ಸ್ ಬೆಲೆ 80ರಿಂದ 70 ರೂ.ಗೆ ಇಳಿದಿದೆ. ನುಗ್ಗೆ 100ರ ದರದಲ್ಲಿದ್ದರೆ ಟೊಮೆಟೊ ಕೂಡ 40ರ ಆಸುಪಾಸಿನಲ್ಲಿಯೇ ಇದೆ. ಬೆಂಡೆಕಾಯಿ ಊರಿನದ್ದು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಊರ ತೊಂಡೆಕಾಯಿ ಇನ್ನು 15 ದಿನಗಳಲ್ಲಿ ಮಾರುಕಟ್ಟೆಗೆ ಆಗಮಿಸುವ ಸಾಧ್ಯತೆಯಿದ್ದು ಆರಂಭದಲ್ಲೇ 100 ರೂ. ದರ ಇರಲಿದೆ. ಅನಂತರದ 15 ದಿನಗಳಲ್ಲಿ ದರ ಕಡಿಮೆಯಾಗಿ 60-50 ರೂ.ಗೆ ನಿಲ್ಲಲಿದೆ. ಕಳೆದ ವರ್ಷದ ಸೀಸನ್ ಅನಂತರ ಈಗ ತಾನೆ ಸಾಣೆಕಲ್ಲು ಸಾಂಬ್ರಾಣಿಗಡ್ಡೆ ಮಾರುಕಟ್ಟೆಗೆ ಬರಲಾರಂಭಿಸಿದ್ದು 150-160 ರೂ. ದರ ಇದೆ. ಒಟ್ಟಿನಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಖರೀದಿಗೆ ಹೋದಾಗ ಎಚ್ಚರದಿಂದ ಖರೀದಿ ಮಾಡಬೇಕಾದ ಸ್ಥಿತಿ ಬಂದಿದೆ.
Related Articles
ಹೊಸ ಬೆಳೆ ಬಂದರೂ ಗದ್ದೆಯಲ್ಲಿ ಸಾಕಷ್ಟು ಬಿಸಿಲು ಬಿದ್ದು ಒಣಗದ ಕಾರಣ ಕೊಳೆಯುತ್ತಿದೆ. ಇದರಿಂದ ಅಂಗಡಿಯವರು ಸಗಟು ಖರೀದಿಸಿ ಸ್ಟಾಕ್ ಇಟ್ಟುಕೊಳ್ಳುತ್ತಿಲ್ಲ. ಗ್ರಾಹಕರಿಗೆ ಮನೆಗೆ ಒಯ್ದರೆ 4-5 ದಿನಗಳ ಮಟ್ಟಿಗಷ್ಟೇ ಇಟ್ಟುಕೊಳ್ಳುವಂತೆ ಹೊಸ ಈರುಳ್ಳಿ ಬಾಳಿಕೆ ಬರುತ್ತಿದ್ದು ಕೊಳೆಯದ ಈರುಳ್ಳಿ ದೊರೆಯದೇ ವ್ಯಾಪಾರಿಗಳಿಗೂ ತೆಗೆದಿರಿಸಿಕೊಳ್ಳಲಾಗದೇ ಬೆಲೆ ಸ್ಥಿರತೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಇದೇ ವೇಳೆ 180 ರೂ.ವರೆಗೆ ಹೋದ ಈರುಳ್ಳಿ ಈಗಲೇ 130 ಆಗುವ ಸಾಧ್ಯತೆಯಿದ್ದು ಇನ್ನೂ ಬೆಲೆ ಏರಬಹುದು ಎಂಬ ನಿರೀಕ್ಷೆ ಇದೆ.
Advertisement
ದರ ಏರುತ್ತಿದೆಈರುಳ್ಳಿ, ಕ್ಯಾಬೇಜ್, ಬೀಟ್ ರೂಟ್ ಮೊದಲಾದ ತರಕಾರಿಗಳ ದರ ಏರುತ್ತಿದ್ದು ಬೇಡಿಕೆಯಷ್ಟು ಲಭ್ಯವಾಗುತ್ತಿಲ್ಲ. ಸಂಗ್ರಹಕ್ಕೂ ಗುಣಮಟ್ಟದ ಬೆಳೆ ದೊರೆಯುತ್ತಿಲ್ಲ. ಸ್ವಲ್ಪ ಸಮಯದಲ್ಲಿ ಸರಿಹೋಗಬಹುದು, ಬೆಲೆ ಸ್ಥಿರವಾಗಬಹುದು.
-ಗಣೇಶ್ ತರಕಾರಿ ವ್ಯಾಪಾರಿ, ಕುಂದಾಪುರ