ಶ್ರೀನಗರ : ನಿನ್ನೆ ಗುರುವಾರ ಸಂಜೆ ಬೈಕ್‌ನಲ್ಲಿ ಬಂದಿದ್ದ ಉಗ್ರರ ಗುಂಡಿಗೆ ಬಲಿಯಾಗಿದ್ದ ರೈಸಿಂಗ್ ಕಾಶ್ಮೀರ್ ಪತ್ರಿಕೆಯ ಮುಖ್ಯ ಸಂಪಾದಕ ಶುಜಾತ್ ಬುಖಾರಿ ಅವರ ಭಾವಚಿತ್ರವನ್ನು ಇಂದು ಪ್ರಕಟಗೊಂಡಿರುವ ಪತ್ರಿಕೆಯ ಮುಖಪುಟದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಕಟಿಸುವ ಮೂಲಕ ಪತ್ರಿಕೆಯ ಅಗಲಿದ ಸಂಪಾದಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದೆ. ‘ಹೇಡಿಗಳ ಈ ಕೃತ್ಯದಿಂದ ನಾವು ಎದೆಗುಂದುವುದಿಲ್ಲ; ಎಷ್ಟೇ ಕಹಿಯಾದರೂ ಸತ್ಯ ಹೇಳುವುದನ್ನು ನಾವು ಮುಂದುವರಿಸುತ್ತೇವೆ’ ಎಂದು ತನ್ನ ಸಂಪಾದಕೀಯ ಬರಹದಲ್ಲಿ ಹೇಳಿದೆ.
ಸಂಪಾದಕ ಶುಜಾತ್ ಅವರನ್ನು ಉಗ್ರರು ನಿನ್ನೆ ಪ್ರಸ್ ಕಾಲನಿಯಲ್ಲಿನ ಅವರ ಕಾರ್ಯಾಲಯದ ಮುಂದೆಯೇ ಗುಂಡಿಕ್ಕಿ ಸಾಯಿಸಿದ್ದರು.
“ನೀವು ನಮ್ಮನ್ನು ಇದ್ದಕ್ಕಿದ್ದಂತೆಯೇ ಅಗಲಿದ್ದೀರಿ; ಆದರೂ ನೀವು ಸದಾ ನಮ್ಮ ದಾರಿ ದೀಪವಾಗಿ ಇರುವಿರಿ; ನಿಮ್ಮ ವೃತ್ತಿ ಬದ್ಧತೆ, ಧೈರ್ಯ, ಸಾಹಸ, ದಿಟ್ಟತನ ಎಲ್ಲವೂ ನಮಗೆ ಸ್ಫೂರ್ತಿಯ ಸೆಲೆಯಾಗಿದೆ. ನಮ್ಮಿಂದ ನಿಮ್ಮನ್ನು ಎಳೆದುಕೊಂಡಿರುವವರಿಗೆ ನಾವು ಹೆದರುವುದಿಲ್ಲ; ಎಷ್ಟೇ ಕಹಿಯಾದರೂ ಸತ್ಯ ಹೇಳುವ ತತ್ವವನ್ನು ನಾವು ಸದಾ ಎತ್ತಿಹಿಡಿಯುತ್ತೇವೆ; ನಿಮ್ಮ ಆತ್ಮಕ್ಕೆ ಚಿರಶಾಂತಿ ಲಭಿಸಲೆಂದು ಪ್ರಾರ್ಥಿಸುತ್ತೇವೆ’ ಎಂದು ಪತ್ರಿಕೆಯು ಹೇಳಿದೆ.
ಸಂಪಾದಕ ಶೂಜಾತ್ ಬುಖಾರಿ ಅವರ ಹತ್ಯೆ ನಡೆದ ಹೊರತಾಗಿಯೂ “ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಸಂಚಿಕೆಯನ್ನು ಎಂದಿನಂತೆ ಇಂದು ಕೂಡ ಹೊರತರಲಾಗಿರುವುದು ಅಗಲಿದ ಸಂಪಾದಕರಿಗೆ ಸಲ್ಲಿಸಲಾಗಿರುವ ಸರಿಯಾದ ಶ್ರದ್ಧಾಂಜಲಿಯಾಗಿದೆ ಎಂದು ಮಾಜಿ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ಹೇಳಿದ್ದಾರೆ.