ಯುನೈಟೆಡ್ ಕಿಂಗ್ ಡಮ್: ಯುದ್ಧಗ್ರಸ್ತ ಪ್ಯಾಲೇಸ್ತೇನ್ ಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಬ್ರಿಟನ್ ಆಂತರಿಕ (ಗೃಹ) ಸಚಿವೆ ಸುಯೆಲ್ಲಾ ಬ್ರೇವರ್ಮನ್ ಅವರನ್ನು ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅವರು ಸಂಪುಟದಿಂದ ಸೋಮವಾರ (ನವೆಂಬರ್ 13) ವಜಾಗೊಳಿಸಿದ್ದಾರೆ.
ಇದನ್ನೂ ಓದಿ:Tiger 3: ಥಿಯೇಟರ್ ಒಳಗೆ ಪಟಾಕಿ ಸಿಡಿಸಿದ ಅಭಿಮಾನಿಗಳು… ದಿಕ್ಕಾಪಾಲಾಗಿ ಓಡಿದ ಪ್ರೇಕ್ಷಕರು
ಬ್ರಿಟನ್ ನಲ್ಲಿ ಪ್ಯಾಲೇಸ್ತೇನ್ ಪರ ಮೆರವಣಿಗೆ ಸಂದರ್ಭದಲ್ಲಿ ಪೊಲೀಸರ ಕ್ರಮದ ಬಗ್ಗೆ ಸುನಾಕ್ ಸಂಪುಟದ ಹಿರಿಯ ಸಚಿವೆ ಸುಯೆಲ್ಲಾ ಟೀಕೆ ವ್ಯಕ್ತಪಡಿಸಿದ್ದರು. ಇದು ರಾಜಕೀಯವಾಗಿ ವಿವಾದಕ್ಕೆ ಎಡೆ ಮಾಡಿಕೊಟ್ಟ ಬೆನ್ನಲ್ಲೇ ಸುಯೆಲ್ಲಾಗೆ ರಾಜೀನಾಮೆ ನೀಡುವಂತೆ ಪ್ರಧಾನಿ ರಿಷಿ ಸುನಾಕ್ ಸಂದೇಶ ರವಾನಿಸಿದ್ದರು ಎಂದು ವರದಿ ತಿಳಿಸಿದೆ.
“ಬ್ರಿಟನ್ ನ ಗೃಹ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವ ದೊಡ್ಡ ಅವಕಾಶ ನನ್ನ ಜೀವನದಲ್ಲಿ ದೊರಕಿತ್ತು” ಎಂದು ಸುಯೆಲ್ಲಾ ತಮ್ಮನ್ನು ಸಂಪುಟದಿಂದ ವಜಾಗೊಳಿಸಿದ ನಂತರ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬ್ರಿಟನ್ ನಲ್ಲಿ ಪ್ಯಾಲೇಸ್ತೇನ್ ಪರ ಮೆರವಣಿಗೆ, ಪ್ರತಿಭಟನೆಯನ್ನು ಹತ್ತಿಕ್ಕಿರುವ ಬಗ್ಗೆ ಸುಯೆಲ್ಲಾ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನಿ ಸುನಾಕ್ ಅವರ ಅನುಮತಿ ಇಲ್ಲದೇ ಲೇಖನಗಳನ್ನು ಪ್ರಕಟಿಸಿದ್ದರು. ಇದರಿಂದಾಗಿ ಸುಯೆಲ್ಲಾ ಭಾರೀ ಟೀಕೆಗೆ ಒಳಗಾಗುವಂತಾಗಿತ್ತು ಎಂದು ವರದಿ ವಿವರಿಸಿದೆ.
ಗೃಹ ಕಾರ್ಯದರ್ಶಿ ಹುದ್ದೆಗೆ ಕೆಲವೇ ದಿನಗಳಲ್ಲಿ ಹೊಸ ಹೆಸರನ್ನು ಘೋಷಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. 2022ರ ಸೆಪ್ಟೆಂಬರ್ ನಲ್ಲಿ ಸುಯೆಲ್ಲಾ ಅವರನ್ನು ಗೃಹ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು.