Advertisement

ರಿಷಿ ಸುನಕ್‌ ಏರಲಿರುವುದು ಸವಾಲಿನ ಎವರೆಸ್ಟ್‌

06:19 PM Oct 25, 2022 | Team Udayavani |

ಭಾರತೀಯ ಮೂಲದ ರಿಷಿ ಸುನಕ್‌ ಏರಲು ಹೊರಟಿರುವುದು ಸವಾಲಿನ ಪರ್ವತ. ಗ್ರೇಟ್‌ ಬ್ರಿಟನ್‌ ಮತ್ತು ಅಲ್ಲಿಯ ರಾಜಕೀಯ ಪರಿಸರವನ್ನು ಲೆಕ್ಕ ಹಾಕಿದರೆ ಅದು ಮೌಂಟ್‌ ಎವರೆಸ್ಟ್‌. ಈಗಿನ ಸ್ಥಿತಿಯಲ್ಲಿ ಈ ಪರ್ವತಾರೋಹಣ ಅಂದುಕೊಂಡಷ್ಟು ಸುಲಭವಲ್ಲ. ಆದರೂ ಇವು ಗಳನ್ನು ಸಮಸ್ಯೆಯೆಂದು ತಿಳಿಯದೆ ಸವಾಲೆಂದು ಧನಾತ್ಮಕವಾಗಿ ಸ್ವೀಕರಿಸಿರುವ ರಿಷಿ ಸುನಕ್‌ರಿಗೆ ಭಾರತೀಯರ ಅಭಿನಂದನೆ ಸಲ್ಲಲೇಬೇಕು.

Advertisement

ಈ ಹುದ್ದೆ ನಿಜಕ್ಕೂ ಸಿಕ್ಕಿರುವುದು ಅದೃಷ್ಟದಿಂದಲ್ಲ ಹಾಗೂ ಅನುಭವಿಸುವುದಕ್ಕಲ್ಲ. ದೇಶವನ್ನು ಸಂಕಷ್ಟದ ಸುಳಿಯಿಂದ ಪಾರು ಮಾಡಲು.

ರಿಷಿಗೆ ಮೊದಲನೇ ಸವಾಲೆಂದರೆ ಸ್ಥಿರತೆ. ತನ್ನ ಮನೆಯಾದ ಕನ್ಸವೇಟಿವ್‌ ಪಕ್ಷದಲ್ಲಿ ಮತ್ತು ದೇಶದಲ್ಲಿ. 2010ರ ಬಳಿಕ ಬ್ರಿಟನ್‌ ಅನ್ನು ಆಳುತ್ತಿರುವುದು ಕನ್ಸವೇಟಿವ್‌ ಪಕ್ಷದವರೇ. ಆದರೆ 12 ವರ್ಷಗಳಲ್ಲಿ ರಿಷಿ ಐದನೇ ಪ್ರಧಾನಿ. ಅದಕ್ಕೇ ಪ್ರಮುಖ ವಿಪಕ್ಷವಾದ ಲೇಬರ್‌ ಪಕ್ಷವು ರಿಷಿ ಸುನಕ್‌ ಆಯ್ಕೆ ಪ್ರಕಟವಾಗುತ್ತಿದ್ದಂತೆ “ಸಾರ್ವತ್ರಿಕ ಚುನಾವಣೆಗೆ ಕರೆ ಕೊಡುವ ಬದಲು ಕನ್ಸವೇಟಿವ್‌ ಪಕ್ಷ ತೆರಿಗೆ ಹಣದಲ್ಲಿ ಜನರ ಭವಿಷ್ಯವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ’ ಎಂಬ ಅರ್ಥದಲ್ಲಿ ಟೀಕೆ ಆರಂಭಿಸಿದೆ. ಈ ಮಾತಿಗೆ ಕಾರಣವಿದೆ. 2010ರ ಮೊದಲು ಹದಿನಾರು ವರ್ಷಗಳ ಕಾಲ ಲೇಬರ್‌ ಪಕ್ಷದ ಇಬ್ಬರು ಪ್ರಧಾನಿಗಳು ಆಳಿದ್ದರು.

ಡೇವಿಡ್‌ ಕೆಮರೂನ್‌, ಥೆರೆಸಾ ಮೆ, ಬೋರಿಸ್‌ ಜಾನ್ಸನ್‌ ಹಾಗೂ ಲಿಜ್‌ ಟ್ರಸ್‌ ಇದುವರೆಗೆ ಪ್ರಧಾನಿ ಹುದ್ದೆ ನಿಭಾಯಿಸಿದವರು. ಇವರಲ್ಲಿ ಕೆಮರೂನ್‌ ಮಾತ್ರ 6 ವರ್ಷ ಆಡಳಿತ ನಡೆಸಿದರೆ, ಅನಂತರದ ಥೆರೆಸಾ ಹಾಗೂ ಬೋರಿಸ್‌ ತಲಾ 3 ವರ್ಷ ಹುದ್ದೆ ನಿಭಾಯಿಸಿದ್ದಾರೆ.

ಲಿಜ್‌ ಟ್ರಸ್‌ 49 ದಿನಗಳಿಗೇ ಪಕ್ಷದೊಳಗಿನ ಆಂತರಿಕ ಟೀಕೆಗೆ ಗುರಿಯಾಗಿ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲೇ ರಿಷಿ ಸಹ ತಮ್ಮ ಹೆಸರು ಪ್ರಕಟವಾಗುತ್ತಿದ್ದಂತೆ ಕನ್ಸವೇಟಿವ್‌ ಸಂಸದರೊಂದಿಗೆ “ನಮ್ಮಲ್ಲಿ ಒಗ್ಗಟ್ಟು ಅಗತ್ಯ. ಇದೊಂದು ಮಾಡು ಇಲ್ಲವೇ ಮಡಿ ಎನ್ನುವ ಸಮಯ’ ಎಂದು ಹೇಳಿದ್ದು. ಈ ಮಾತು ಕನ್ಸವೇಟಿವ್‌ ಪಕ್ಷ ಹಾಗೂ ರಿಷಿ ಸುನಕ್‌ ಇಬ್ಬರಿಗೂ ಅನ್ವಯ. ಕನ್ಸವೇಟಿವ್‌ ಪಕ್ಷ ಕೂಡ ನಾಯಕತ್ವ ಪರ್ವಕಾಲದಲ್ಲಿದೆ. ಆ ಯಕ್ಷ ಪ್ರಶ್ನೆಗೆ ಉತ್ತರ ಒದಗಿಸಿಕೊಡಬೇಕು. ಜತೆಗೆ ದೇಶ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಈ ಮಾತನ್ನು ರಿಷಿ ಕೂಡ ಒಪ್ಪಿದ್ದಾರೆ. ಅವರ ಆಯ್ಕೆಯ ಬಳಿಕ ಟ್ವಿಟರ್‌ನಲ್ಲಿ ಕೇಂದ್ರೀಕರಿಸಿರುವುದೂ ಇದನ್ನೇ. “ನಮ್ಮ ಆರ್ಥಿಕತೆಯನ್ನು ಸರಿದಾರಿಗೆ ತರಬೇಕಿದೆ, ಹಾಗೆಯೇ ಪಕ್ಷವನ್ನೂ. ಪಕ್ಷದಲ್ಲಿ ಒಗ್ಗಟ್ಟು ಸ್ಥಾಪಿಸಿ ದೇಶವನ್ನು ಸಮರ್ಥವಾಗಿ ಮುನ್ನಡೆಸಬೇಕಿದೆ’.

Advertisement

ಹಾಗೆ ನೋಡಿದರೆ ಬ್ರಿಟನ್‌ನಲ್ಲಿ ಭಾರತದ ಧ್ವಜವನ್ನು ಮೊದಲು ಹಾರಿಸಿದ್ದು ದಾದಾಭಾಯಿ ನವರೋಜಿ. ಲಿಬರಲ್‌ ಪಕ್ಷದಿಂದ 1892ರಲ್ಲಿ ಫಿನ್ಸ್‌ಬರಿ ಸೆಂಟ್ರಲ್‌ನಿಂದ ಮೊದಲ ಬ್ರಿಟಿಷ್‌ ಭಾರತೀಯ ಸಂಸದರಾಗಿ ಆಯ್ಕೆಯಾದವರು. ಆ ಪ್ರಯಾಣವೀಗ ರಿಷಿ ಸುನಕ್‌ವರೆಗೂ ಬಂದು ತಲುಪಿದೆ.

ರಿಷಿ ಸುನಕ್‌ ಒಳ್ಳೆಯ ರಾಜಕಾರಣಿ, ನೇತಾರ ಎನ್ನುವುದಕ್ಕಿಂತಲೂ ಸಮರ್ಥ ಆಡಳಿತಗಾರ ಎಂದು ಸಾಬೀತು ಪಡಿಸಬೇಕಿದೆ. ದೇಶದಲ್ಲಿನ ಆರ್ಥಿಕ ಹಿಂಜರಿತ, ಹಣದುಬ್ಬರದ ಮಧ್ಯೆ ಪ್ರಜೆಗಳು ಸಂಕಷ್ಟದಿಂದ ದಿನ ದೂಡುತ್ತಿದ್ದಾರೆ. ಎಲ್ಲಿ ಬದುಕು ದುರ್ಭರವಾಗುತ್ತದೋ ಎಂಬ ಆತಂಕದಲ್ಲಿದ್ದಾರೆ. ಹಾಗಾಗಿ ಸಮರ್ಥ ಆಡಳಿತಗಾರನ ಹುಡುಕಾಟದಲ್ಲಿದ್ದಾರೆ. ಸಾರ್ವಜನಿಕ ಆರ್ಥಿಕ ವ್ಯವಹಾರಗಳಲ್ಲಿ ಶಿಸ್ತು ತರುವುದು ಹಾಗೂ ರಾಜಕೀಯದಲ್ಲಿ ದೃಢತೆ ತರುವುದೇ ಪ್ರಮುಖ ಸವಾಲುಗಳು.

ಸದ್ಯವೇ ಈ ಸಾಲಿಗೆ ರಿಷಿ ಸುನಕ್‌ ಹೆಸರು
ಅಮೆರಿಕದಿಂದ ತೊಡಗಿ ಪೋರ್ಚುಗಲ್‌ ವರೆಗೆ ಜಗತ್ತಿನ ವಿವಿಧ ದೇಶಗಳ ರಾಜಕೀಯದಲ್ಲಿ ಭಾರತೀಯ ಮೂಲದವರು ಪ್ರಭಾವೀಹುದ್ದೆಗಳಲ್ಲಿದ್ದಾರೆ. ಬ್ರಿಟನಿನ ಪ್ರಧಾನಿಯಾಗಲಿ ರುವ ರಿಷಿ ಸುನಕ್‌ ಅವರ ಹೆಸರು ಕೂಡ ಸದ್ಯವೇ ಈ ಯಾದಿಗೆ ಸೇರ್ಪಡೆಗೊಳ್ಳಲಿದೆ.

ಕಮಲಾ ಹ್ಯಾರಿಸ್‌
ಅಮೆರಿಕದ ಉಪಾಧ್ಯಕ್ಷರಾಗಿರುವ ಕಮಲಾ ಹ್ಯಾರಿಸ್‌ ತಮಿಳುನಾಡು ಮೂಲದವರು. ಡೆಮಾಕ್ರಾಟಿಕ್‌ ಪಕ್ಷೀಯರಾಗಿರುವ ಕಮಲಾ ಅಮೆರಿಕದ ಉಪಾಧ್ಯಕ್ಷ ಹುದ್ದೆಗೇರಿದ ಮೊದಲ ಮಹಿಳೆಯೂ ಹೌದು.

ಪ್ರವಿಂದ್‌ ಜಗನಾಥ್‌
ಮಾರಿಶಸ್‌ನ ಸರಕಾರದಲ್ಲಿ ವಿವಿಧ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ ಬಳಿಕ ಪ್ರವಿಂದ್‌ ಜಗನಾಥ್‌ ಅಲ್ಲಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಆ್ಯಂಟೊನಿಯೊ ಕೊಸ್ಟಾ
ಆ್ಯಂಟೊನಿಯೊ ಕೊಸ್ಟಾ ಪೋರ್ಚುಗಲ್‌ನ ಹಾಲಿ ಪ್ರಧಾನಿ. ಪೋರ್ಚುಗಲ್‌ನಲ್ಲೇ ಜನಿಸಿದ್ದರೂ ಇವರ ತಂದೆ ಗೋವಾದವರು. ಭಗವದ್ಗೀತೆ ಹಿಡಿದು ಪ್ರಮಾಣ ರಿಷಿ ಸುನಕ್‌ ಈ ಹಿಂದೆ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ್ದರು. ಪ್ರಧಾನಿಯಾದ ಸಂದರ್ಭದಲ್ಲಿಯೂ ಅವರು ಇದೇ ಸಂಪ್ರದಾಯ ಅನುಸರಿಸಿದರೆ ಭಾರತ, ಭಾರತೀಯರಿಗೆ ಅದು ಹೆಮ್ಮೆಯ ಕ್ಷಣವಾಗಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next