ಹೊಸದಿಲ್ಲಿ: ಸಿಬಿಐನ ನೂತನ ನಿರ್ದೇಶಕರಾಗಿ ರಿಷಿ ಕುಮಾರ್ ಶುಕ್ಲಾ ಅವರನ್ನು ಕೇಂದ್ರ ಸರಕಾರ ಶನಿವಾರ ನೇಮಕ ಮಾಡಿದೆ. 1983 ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಶುಕ್ಲಾ ಅವರು ಮಧ್ಯ ಪ್ರದೇಶದ ಡಿಜಿಪಿ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ಹಾಲಿ ಮಧ್ಯ ಪ್ರದೇಶದ ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ ಅಧ್ಯಕ್ಷರಾಗಿದ್ದಾರೆ.
ಮುಂದಿನ 2 ವರ್ಷಗಳ ಅವಧಿಗೆ ಶುಕ್ಲಾ ಅವರು ಸಿಬಿಐ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಜನವರಿ 10 ರಂದು ಅಲೋಕ್ ಕುಮಾರ್ ವರ್ಮಾ ಅವರನ್ನು ಹುದ್ದೆಯಿಂದ ವಜಾಗೊಳಿಸಿದ ಬಳಿಕ ಸಿಬಿಐ ನಿರ್ದೇಶಕ ಹುದ್ದೆ ಖಾಲಿ ಉಳಿದಿತ್ತು.
ಈ ಮೊದಲು ಸಭೆಯಲ್ಲಿ ಪ್ರಸ್ತಾವಿಸಲ್ಪಟ್ಟಿದ್ದ ಹೆಸರುಗಳಾದ ಜಾವೀದ್ ಅಹ್ಮದ್, ರಜನಿ ಕಾಂತ್ ಮಿಶ್ರಾ ಮತ್ತು ಎಸ್ ಎಸ್ ದೇಶವಾಲ್ ಅವರ ಹೆಸರನ್ನು ಕಾಂಗ್ರೆಸ್ ಆಕ್ಷೇಪ ವ್ಯಕ್ತ ಪಡಿಸಿತ್ತು. ಸಭೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದರು.
ಸಿಬಿಐ ನಿರ್ದೇಶಕರನ್ನು ನೇಮಿಸುವ ಮೂವರು ಸದಸ್ಯರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಮಂಡಳಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಓರ್ವ ಸದಸ್ಯರಾಗಿದ್ದಾರೆ.