ಆತ ಸೋಲರಿಯದ ಛಲಗಾರ. ಸಾವೇ ಎದುರಿಗೆ ಬಂದರೂ, ಹಿಮ್ಮೆಟ್ಟಿಸಿ, ಪುನರ್ ಜನ್ಮ ಪಡೆದು, ಯಾರೂ ಊಹಿಸಿರದ ರೀತಿಯಲ್ಲಿ ಚೇತರಿಸಿಕೊಂಡು, ಮತ್ತೆ ಕ್ರಿಕೆಟ್ ಅಂಗಳಕ್ಕಿಳಿದ ಅಪ್ರತಿಮ ಸಾಹಸಿ. ಹೌದು ಸಾವನ್ನೇ ಗೆದ್ದು ಬಂದು, ಮತ್ತೆ ಬ್ಯಾಟ್ ಹಿಡಿದು ಆಡಳಿಲಿದ ರಿಷಭ್ ಪಂತ್ ಈಗ ಎಲ್ಲರ ಮನಗೆದ್ದಿರುವ ಸಾಧನೆ ಮಾಡಿದ್ದಾರೆ. ಮಾತ್ರವಲ್ಲ ಬದುಕಿನ ಪಯಣದಲ್ಲಿ ಎದುರಾಗುವ ಅಡೆತಡೆಗಳು, ಅಡ್ಡಿ, ಅಪಘಾತಗಳನ್ನು ಧೈರ್ಯದಿಂದ ಎದುರಿಸಿದರೆ, ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ ಅನ್ನುವುದಕ್ಕೆ ರಿಷಭ್ ಪಂತ್ ಅವರೇ ದೊಡ್ಡ ಉದಾಹರಣೆಯಾಗಿದ್ದಾರೆ.
ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ಅವರು 2022ರ ಡಿ. 29ರಂದು ಹೊಸದಿಲ್ಲಿಯಿಂದ ತನ್ನ ಊರಾದ ಉತ್ತರಾಖಂಡದ ರೂಕಿಗೆ ತೆರಳುತ್ತಿದ್ದ ವೇಳೆ ದಿಲ್ಲಿ- ಡೆಹರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು, ಪಲ್ಟಿಯಾಗಿ, ಬೆಂಕಿ ಹೊತ್ತಿಕೊಂಡಿತ್ತು. ಈ ಅಪಘಾತದಲ್ಲಿ ರಿಷಭ್ ಪಂತ್ ಅವರು ಗಂಭೀರ ಗಾಯಗೊಂಡು, ಪವಾಡ ಸದೃಶ ರೀತಿಯಲ್ಲಿ ಹೋರಾಡಿ ಪಾರಾಗಿದ್ದರು. ಆದರೆ ಬಲ ಮೊಣಕಾಲಿಗೆ ಗಂಭೀರ ಭಾರೀ ಏಟು ಬಿದ್ದಿದ್ದರಿಂದ ನಡೆದಾಡಲು ಸಹ ಕಷ್ಟಕರವಾಗಿತ್ತು. ಹಲವು ತಿಂಗಳುಗಳ ಕಾಲ ಊರುಗೋಲು ಹಿಡಿದುಕೊಂಡೇ ನಡೆಯುತ್ತಿದ್ದರು.
ನಾನು ಮತ್ತೆ ಕ್ರಿಕೆಟ್ ಆಡಲು ಇಳಿಯಬೇಕಾದರೆ ಎಷ್ಟು ಸಮಯ ಬೇಕಾಗುತ್ತದೆ ಎಂದು ರಿಷಭ್ ವೈದ್ಯರಲ್ಲಿ ಕೇಳಿದಾಗ ಕನಿಷ್ಠ 16 ರಿಂದ 18 ತಿಂಗಳು ಬೇಕಾಗಬಹುದು ಎಂದಿದ್ದರು. ಆದರೆ ರಿಷಭ್ ಅವರು ಎಂತಹ ಛಲಗಾರ ಎಂದರೆ ವೈದ್ಯರು ಹೇಳಿದ್ದಕ್ಕಿಂತ 6 ತಿಂಗಳು ಮೊದಲೇ ಗುಣಮುಖರಾಗಿ ತರಬೇತಿಗಾಗಿ ಬೆಂಗಳೂರಿನ ಎನ್‌ಸಿಎಯ ಅಂಗಳಕ್ಕಿಳಿದಿದ್ದರು.
ಐಪಿಎಲ್ ಪಂದ್ಯಾವಳಿಯಲ್ಲಿ ಡೆಲ್ಲಿ ತಂಡದ ಚುಕ್ಕಾಣಿಯನ್ನು ಹಿಡಿದಿರುವ ರಿಷಭ್ ಪಂತ್ ಅವರು ಉತ್ತಮ ರೀತಿಯಲ್ಲಿಯೇ ಆಡುತ್ತಿದ್ದು, ಕೀಪಿಂಗ್‌ನಲ್ಲಿಯೂ ಹಿಂದಿಗಿಂತ ಹೆಚ್ಚಿನ ಚುರುಕುತನ ಕಾಣಿಸುತ್ತಿದೆ. ಇದು ಭಾರತೀಯ ಕ್ರಿಕೆಟ್ ದೃಷ್ಟಿಯಿಂದಲೂ, ಕ್ರಿಕೆಟ್ ಅಭಿಮಾನಿಗಳಿಗೂ ಸಿಹಿ ಸುದ್ದಿ ಎನ್ನಲಡ್ಡಿಯಿಲ್ಲ.
ಒಮ್ಮೆ ಸೋತರೆ, ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡರೆ, ಪ್ರೀತಿಯಲ್ಲಿ ಸೋತರೆ, ಉದ್ಯಮದಲ್ಲಿ ನಷ್ಟ ಅನುಭವಿಸಿದರೆ ಬದುಕೇ ಮುಗಿಯಿತು, ಇನ್ನು ನನ್ನಿಂದ ಏನೂ ಸಾಧಿಸಲು ಆಗಲ್ಲ ಅನ್ನುವ ಯುವಕರಿಗೆ ರಿಷಭ್ ಪಂತ್ ಅವರ ಈ ಯಶೋಗಾಥೆಯೇ ಸ್ಫೂರ್ತಿದಾಯಕ.
453 ದಿನಗಳ ಪರಿಶ್ರಮ
ಭೀಕರ ಕಾರು ಅಪಘಾತಕ್ಕೆ ತುತ್ತಾಗಿ ಸಾವಿನ ಕದ ತಟ್ಟಿ ಬದುಕಿ ಬಂದ ರಿಷಭ್ ಪಂತ್ ಅವರು ಬರೋಬ್ಬರಿ 453 ದಿನಗಳ ಬಳಿಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಇಳಿದು, ಐಪಿಎಲ್ ಪಂದ್ಯವನ್ನು ಆಡುವ ಮೂಲಕ ಮತ್ತೂಮ್ಮೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಈ 453 ದಿನಗಳಲ್ಲಿ ಅವರು ಪಟ್ಟಿರುವ ಯಾತನೆ, ನೋವು, ಮಾನಸಿಕ ತೋಳಲಾಟ, ಹಿಂಸೆ, ಪರಿಶ್ರಮ, ದೈಹಿಕ ಕ್ಷಮತೆ ಹೆಚ್ಚಿಸಲು ಪಟ್ಟಿರುವ ಪ್ರಯತ್ನ ನಿಜಕ್ಕೂ ಎಲ್ಲರಿಗೂ ಪ್ರೇರಣೆ.
ಅಸಾಧಾರಣ ಪ್ರತಿಭೆ
ಮಹೇಂದ್ರ ಸಿಂಗ್ ಧೋನಿ ಅವರ ಅನಂತರ ಭಾರತ ತಂಡ ಹಲವಾರು ವಿಕೆಟ್ ಕೀಪರ್‌ಗಳನ್ನು ಪ್ರಯೋಗ ನಡೆಸಿತು. ಈ ಪೈಕಿ ಆಡಿದ ಅತ್ಯಲ್ಪ ಅವಧಿಯಲ್ಲೇ ಭರವಸೆ ಮೂಡಿಸಿರುವವರ ಪೈಕಿ ರಿಷಭ್ ಪಂತ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಅಪಘಾತಕ್ಕೆ ಈಡಾಗುವವರೆಗೂ ರಿಷಭ್ ಪಂತ್ ಅವರೇ ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಮೊದಲ ಪ್ರಾಶಸ್ತ್ಯದ ವಿಕೆಟ್ ಕೀಪರ್ ಆಗಿದ್ದರು. ಅದಕ್ಕೆ ಕಾರಣವೂ ಇತ್ತು. ತನ್ನ ಭದ್ರಕೋಟೆ “ಗಬ್ಟಾ’ ಅಂಗಳದಲ್ಲಿಯೇ ಬಲಾಡ್ಯ ಆಸ್ಟ್ರೇಲಿಯನ್ನರ ವಿರುದ್ಧ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ಭಾರತ ಟೆಸ್ಟ್ ಸರಣಿ ಗೆಲ್ಲುವಲ್ಲಿ, ಆಂಗ್ಲರ ಊರಲ್ಲಿ ನಂಬಲಾರ್ಹವಾದ ರೀತಿಯಲ್ಲಿ ತನ್ನ ಬ್ಯಾಟಿಂಗ್ ಸಾಹಸದಿಂದ ಟೆಸ್ಟ್ ಗೆಲುವನ್ನು ತಂದಿತ್ತ ಅಪ್ರತಿಮ ವೀರ ಪಂತ್.
-ಪ್ರಶಾಂತ್ ಪಾದೆ