ಬರ್ಮಿಂಗ್ ಹ್ಯಾಂ: ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭರ್ಜರಿ ಶತಕ ಬಾರಿಸಿದ ರಿಷಭ್ ಪಂತ್ ಅವರು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ 17 ವರ್ಷ ಹಿಂದಿನ ದಾಖಲೆಯೊಂದನ್ನು ಮುರಿದಿದ್ದಾರೆ.
98 ರನ್ ಗೆ ಐದು ವಿಕೆಟ್ ಕಳೆದುಕೊಂಡಿದ್ದ ವೇಳೆ ರವೀಂದ್ರ ಜಡೇಜಾ ಜತೆ ಇನ್ನಿಂಗ್ಸ್ ಕಟ್ಟಿದ ಪಂತ್ ಆರನೇ ವಿಕೆಟ್ ಗೆ 222 ರನ್ ಒಟ್ಟುಗೂಡಿಸಿದರು. 111 ಎಸೆತ ಎದುರಿಸಿದ ಪಂತ್ 146 ರನ್ ಬಾರಿಸಿದರು.
ರಿಷಭ್ ಪಂತ್ ಕೇವಲ 89 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತೀಯ ವಿಕೆಟ್ ಕೀಪರ್ ಓರ್ವ ಬಾರಿಸಿದ ಅತಿ ವೇಗದ ಶತಕ. 2005ರಲ್ಲಿ ಫೈಸಲಾಬಾದ್ ನಲ್ಲಿ ಪಾಕಿಸ್ತಾನದ ವಿರುದ್ಧ 93 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಎಂಎಸ್ ಧೋನಿ ದಾಖಲೆಯನ್ನು ಹೊಂದಿದ್ದರು. ಪಂತ್ ಈ ದಾಖಲೆಯನ್ನು ಮುರಿದರು.
ಅಲ್ಲದೆ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆಯನ್ನೂ ಪಂತ್ ಬರೆದರು. ಈ ಹಿಂದೆ ಇದು ಕೆವಿನ್ ಪೀಟರ್ಸನ್ ಅವರ ಹೆಸರಲ್ಲಿತ್ತು.
ಇದನ್ನೂ ಓದಿ:ಹಾಡಲ್ಲಿ ‘ಕಾಶಿ’ ದರ್ಶನ; ಝೈದ್ ಖಾನ್ ನಟನೆಯ ‘ಬನಾರಸ್’ ಚಿತ್ರದ ಸಾಂಗ್ ರಿಲೀಸ್
ಪಂತ್ ಒಟ್ಟಾರೆ ಐದನೇ ಟೆಸ್ಟ್ ಶತಕ ಬಾರಿಸಿದರು. ಅದರಲ್ಲೂ ಅವರ ಎಲ್ಲಾ ಶತಕಗಳು ಸರಣಿಯ ಅಂತಿಮ ಪಂದ್ಯದಲ್ಲಿಯೇ ಬಂದಿರುವುದು ವಿಶೇಷ. ಐದು ಶತಕಗಳಲ್ಲಿ ಮೂರು ಶತಕ ಇಂಗ್ಲೆಂಡ್ ವಿರುದ್ಧವೇ ಬಾರಿಸಿದ್ದಾರೆ.
ಇದೇ ವೇಳೆ ಟೆಸ್ಟ್‌ನಲ್ಲಿ 2,000 ರನ್ ಗಳಿಸಿದ ಅತ್ಯಂತ ಕಿರಿಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ರಿಷಬ್ ಪಂತ್ ಪಾತ್ರರಾದರು.