ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ ʼಕಾಂತಾರʼದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ರಿಷಬ್ ಈಗ ಎಲ್ಲಿ ಹೋದರೂ ಸುದ್ದಿಯಾಗುತ್ತಾರೆ. ಅವರ ʼಕಾಂತಾರʼ ಸಿನಿಮಾವನ್ನು ರಾಜಕೀಯ ಮುಖಂಡರು, ಕಲಾವಿದರು, ಗಣ್ಯರು ಸೇರಿದಂತೆ ವಿವಿಧ ಕ್ಷೇತ್ರದ ಜನರು ಮೆಚ್ಚಿಕೊಂಡಿದ್ದಾರೆ.
ʼಕಾಂತಾರʼ ಹಿಟ್ ಬಳಿಕ ರಿಷಬ್ ಅವರಿಗೆ ರಾಜಕೀಯ ಮುಖಂಡರು ಕೂಡ ಅಭಿನಂದಿಸಿದ್ದಾರೆ. ಕೆಲ ಮಾಧ್ಯಮಗಳಲ್ಲಿ ರಾಜಕೀಯ ಕುರಿತ ಪ್ರಶ್ನೆಗೂ ಅವರು ಉತ್ತರಿಸಿದ್ದು ವೈರಲ್ ಆಗಿತ್ತು. ಇದೀಗ ಇಂಥದ್ದೇ ರಾಜಕೀಯ ಕುರಿತ ಟ್ವೀಟ್ ವೊಂದಕ್ಕೆ ರಿಷಬ್ ಅವರು ಪ್ರತಿಕ್ರಿಯೆ ನೀಡಿದ್ದು ವೈರಲ್ ಆಗಿದೆ.
ಸಿನಿಮಾ ಪತ್ರಕರ್ತೆಯೊಬ್ಬರು “ರಿಷಬ್ ರಾಜಕೀಯ ಎಂಟ್ರಿ ಇವತ್ತಿನ ಸುದ್ದಿಯೆಂದು” ಪೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಟ್ವೀಟ್ ಸ್ವತಃ ನಟ ರಿಷಬ್ ಶೆಟ್ಟಿ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಸುಮ್ನನೆ ಇರಿ ಮರ್ರೆ ಸುಳ್ಳು ಸುದ್ದಿ, #April1st ಹೀಗೆ ಹೇಳಿ… ಮೊದಲೇ ಕೆಲವರು ನನ್ನ ಒಂದು ಪಕ್ಷಕ್ಕೆ ಸೇರಿಸಿದ್ದಾರೆ. ನಾನು ರಾಜಕೀಯಕ್ಕೆ ಎಂದು ಹೋಗುವುದಿಲ್ಲ ಎಂದು ಟ್ವೀಟ್ ಗೆ ತಮಾಷೆಯಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಈ ಟ್ವೀಟ್ ಗೆ ಮತ್ತೊಬ್ಬ ಬಳಕೆದಾರ ನೀವು ರಾಜಕೀಯಕ್ಕೆ ಬಂದರೆ ನಮ್ಮ ಸಂಪೂರ್ಣ ಬೆಂಬಲ ನಿಮಗೆ ಇರುತ್ತದೆ ಎಂದಿದ್ದಾರೆ. ರಿಷಬ್ ಈ ಟ್ವೀಟ್ ಗೂ ರೀಟ್ವೀಟ್ ಮಾಡಿ “ಬೇಡ ದೇವ್ರು, ನನ್ನ ಸಿನಿಮಾಗೆ ನಿಮ್ಮ ಸಪೋರ್ಟ್ ಇದ್ರೆ ಸಾಕು” ಎಂದಿದ್ದಾರೆ.
ಸದ್ಯ ರಿಷಬ್ ಅವರ ಪ್ರತಿಕ್ರಿಯೆಗಳು ವೈರಲ್ ಆಗಿದೆ. ʼಕಾಂತಾರ-2ʼ ಸಿನಿಮಾದಲ್ಲಿ ರಿಷಬ್ ಬ್ಯುಸಿಯಾಗಿದ್ದಾರೆ. ಬಹು ನಿರೀಕ್ಷಿತ ಸಿನಿಮಾ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆಯಿದೆ.