ಗುಡಿಬಂಡೆ: ತಾಲೂಕಾದ್ಯಂತ ಗುರುವಾರ ರಾತ್ರಿಯೂ ಭಾರೀ ಪ್ರಮಾಣದಲ್ಲಿ ಮಳೆ ಆದ ಕಾರಣ ವಿವಿಧ ಭಾಗಗಳ ರಸ್ತೆಗಳಲ್ಲಿನ ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ಸಿಗ್ಬತುಲ್ಲಾ, ವೃತ್ತ ನಿರೀಕ್ಷಕ ಲಿಂಗರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅವುಲಬೆಟ್ಟ ವ್ಯಾಪ್ತಿ, ತಾಲೂಕಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗುತ್ತಿರುವ ಕಾರಣ ಕುಶಾವತಿ ನದಿ ಹಿಂದೆಂದೂ ಕಂಡು ಕೇಳಿ ಹರಿಯದಂತೆ ತುಂಬಿ ಹರಿಯುತ್ತಿದೆ. ಇದರಿಂದ ರಾಮಪಟ್ಟಣ- ಮಂಡಿ ಕಲ್ಲು ಮಾರ್ಗ, ಗುಡಿಬಂಡೆ ಅಮಾನಿಬೈರಸಾಗರ ಕೆರೆ ಕಟ್ಟೆ ಮೇಲೆ, ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ಲಕ್ಕೇನಹಳ್ಳಿ ಗ್ರಾಮದ ಬಳಿ ಹಾಗೂ ಹಂಪಸಂದ್ರ ಗ್ರಾಮದ ಬಳಿಯ ರಸ್ತೆಗಳ ಮೇಲೆ ನೀರಿನ ಒಳ, ಹೊರ ಹರಿವು ಜಾಸ್ತಿ ಇರುವ ಕಾರಣ ದ್ವಿಚಕ್ರ, ಆಟೋ, ಕಾರು, ಇತರೆ ವಾಹನಗಳು ಸಂಚರಿಸಲು ತೊಂದರೆ ಆಗಿದೆ.
ಇದನ್ನೂ ಓದಿ:- ವಿಶ್ವ ಪರ್ಯಟನೆ ಖ್ಯಾತಿಯ ಕೇರಳದ ಕಾಫಿ ಶಾಪ್ ಮಾಲೀಕ ಇನ್ನಿಲ್ಲ
ಗುರುವಾರ ರಾತ್ರಿ, ಶುಕ್ರವಾರ ಭಾರೀ ವಾಹನ ಸೇರಿ ದ್ವಿಚಕ್ರ, ನಾಲ್ಕು ಚಕ್ರಗಳ ವಾಹನ ಸಂಚಾರವನ್ನು ತಹಶೀಲ್ದಾರ್, ವೃತ್ತ ನಿರೀಕ್ಷಕ ಲಿಂಗರಾಜು ತಾತ್ಕಾಲಿಕವಾಗಿ ನಿಷೇಧಿಸಿದ್ದಾರೆ. ಅತಿ ಅವಶ್ಯಕತೆ ಇದ್ದರೆ, ಆರೋಗ್ಯ ದೃಷ್ಟಿಯಿಂದ ಮಾತ್ರ ವಾಹನಗಳು ಸಂಚರಿಸಲು ಅವಕಾಶವಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಸಹಕರಿಸಲು ಕೋರಿದ್ದು, ಬೇರೆ ಊರುಗಳಿಗೆ ಕೆಲಸಕ್ಕೆ ಹೋಗುವವರು ಬಸ್ ಗಳಲ್ಲಿ ಸಾಧ್ಯವಾದ ಮಟ್ಟಿಗೆ ಸಂಚರಿಸಲು ಕೋರಿದ್ದಾರೆ. ಒಳ ಮತ್ತು ಹೊರ ಹರಿವು ಹೆಚ್ಚಾಗುತ್ತಿದ್ದಂತೆ, ಮಾಹಿತಿ ಪಡೆದ ತಹಶೀಲ್ದಾರ್ ಅಮಾನಿಬೈರ ಸಾಗರ ಕೆರೆ ಮತ್ತು ಇತರೆ ಸ್ಥಳಗಳಿಗೆ ಖುದ್ದು ಭೇಟಿ ವಾಹನ ಸವಾರರೊಡನೆ ಚರ್ಚಿಸಿ, ಅವಶ್ಯವಿದ್ದಲ್ಲಿ ಮಾತ್ರ ಸಂಚರಿಸುವಂತೆ ಮನವಿ ಮಾಡಿದರು.