Advertisement

ರಂಜಾನ್‌ನಲ್ಲಿ ಸಮೋಸ, ಖರ್ಜೂರಕ್ಕೆ  ಬೇಡಿಕೆ ಹೆಚ್ಚಳ

12:58 PM Apr 17, 2022 | Team Udayavani |

ದೇವನಹಳ್ಳಿ: ರಂಜಾನ್‌ ಹಿನ್ನೆಲೆಯಲ್ಲಿ ಮುಸಲ್ಮಾನರು ಒಂದು ತಿಂಗಳ ಕಾಲ ಉಪವಾಸದಲ್ಲಿ ಇರುತ್ತಾರೆ. ಸಂಜೆ ಉಪವಾಸ ಬಿಡಲು ಖರ್ಜೂರ, ಬೋಂಡ, ಬಜ್ಜಿ ತಿನ್ನುವುದರಿಂದ ಸಮೋಸಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ.

Advertisement

ಪಟ್ಟಣದ ಮಸೀದಿ ರಸ್ತೆಯಲ್ಲಿ ಖರ್ಜೂರ ಸೇರಿದಂತೆ ವಿವಿಧ ರೀತಿಯ ಹಣ್ಣುಗಳು, ಖಾದ್ಯಗಳು ಗಮನ ಸೆಳೆಯುತ್ತಿದ್ದರೆ, ಸಂಜೆಯ ಉಪವಾಸ ಮುರಿಯುವ ವೇಳೆಗೆ ಸಮೋಸ ಸೇರಿ ತಿನಿಸುಗಳ ವಾಸನೆ ಎಲ್ಲರ ಬಾಯಿಯಲ್ಲಿ ನೀರುಣಿಸುತ್ತಿದೆ.

ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆ ಹೆಚ್ಚಾಗಿದ್ದರೂ ಸಹ, ಸಮೋಸ ವ್ಯಾಪಾರಿಗಳು ಸಮೋಸ ಮಾರಲು ಬಿಟ್ಟಿಲ್ಲ. ಅಡುಗೆ ಎಣ್ಣೆ 200 ರೂ. ಆಗಿದ್ದರೂ ಮೊದಲಿನಿಂದ ನಡೆಸಿಕೊಂಡು ಬಂದಿರುವ ಕಸುಬನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ ಒಂದು ಸಮೋಸ 10 ರೂ.ಗೆ ಮಾರಾಟ ಮಾಡಲಾಗುತ್ತದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.

ಒಂದು ತಿಂಗಳು ಉಪವಾಸ: ರಂಜಾನ್‌ ಮಾಸ ಆರಂಭವಾಗಿದೆ. ಹೀಗಾಗಿ ಸಮೋಸ, ಕರ್ಜೂರ ಜೊತೆಗೆ ಹಣ್ಣಿನ ವ್ಯಾಪಾರಿಗಳಿಗೆ ಬಿಡುವಿಲ್ಲದ ಕೆಲಸವಿದ್ದು, ಪರಂಗಿ, ಬಾಳೆಹಣ್ಣು, ಮೋಸಂಬಿಗೂ ಬೇಡಿಕೆ ಹೆಚ್ಚಾಗಿದೆ. ಮಸೀದಿ ರಸ್ತೆ ಉದ್ದಗಲಕ್ಕೂ ಇರುವ ಅಂಗಡಿಗಳಲ್ಲಿ ಸಮೋಸ ಹೆಚ್ಚಾಗಿ ಮಾರಾಟವಾಗುತ್ತಿರುವುದು ವಿಶೇಷವಾಗಿದೆ.

ಸಮೋಸ, ಬೋಂಡ, ವಡೆ ವಾಸನೆ ಗ್ರಾಹಕರಿಗೆ ಕೈಬೀಸಿ ಕರೆಯುವಂತೆ ಮಾಡುತ್ತಿದೆ. ಬೆಳಗ್ಗೆ 4.30ರ ವೇಳೆಗೆ ಸೂರ್ಯ ಹುಟ್ಟುವ ಮುನ್ನಾ ಒಂದಿಷ್ಟು ಆಹಾರ ಸೇವನೆ ಮಾಡಿ ಮುಗಿಸಿರುತ್ತಾರೆ. ನಂತರ ಸುಮಾರು ಸಂಜೆ 6.30ರ ನಂತರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಉಪವಾಸ ಮುರಿದು ಆಹಾರ ಸೇವನೆ ಮಾಡುತ್ತಾರೆ.

Advertisement

ಹಬ್ಬಕ್ಕೆ ಭರ್ಜರಿ ಸಿದ್ಧತೆ: ಬೆಲೆ ಏರಿಕೆ ನಡುವೆಯೂ ರಂಜಾನ್‌ ಹಬ್ಬ ಆಚರಣೆಗೆ ಸಜ್ಜಾಗುತ್ತಿದ್ದಾರೆ. ನಗರದ ಪ್ರಮುಖ ಮಸೀದಿಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸಮೋಸ, ಬೋಂಡ, ತರಹೇವಾರಿ ಹಣ್ಣುಗಳು, ತಿಂಡಿ ತಿನುಸುಗಳು ರಸ್ತೆಯ ಬದಿಯಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿದೆ. ವ್ಯಾಪಾರಿಗಳೂ ಸಹ ಹಬ್ಬಕ್ಕೆ ಭರ್ಜರಿ ಸಿದ್ಧತೆ ಕೈಗೊಂಡಿದ್ದಾರೆ.

2 ಸಾವಿರಕ್ಕೂ ಹೆಚ್ಚು ಸಮೋಸ ಮಾರಾಟ: ನಿತ್ಯ ಸಂಜೆ ಸುಮಾರು 2 ಸಾವಿರಕ್ಕೂ ಹೆಚ್ಚು ಸಮೋಸ ಮಾರಾಟವಾಗುತ್ತಿದೆ. ಬೆಲೆ ಏರಿಕೆ ಹೆಚ್ಚಾಗಿರುವುದರಿಂದ ಸಮೋಸ ಮಾಡುವುದಕ್ಕೆ ಹೆಚ್ಚಿನ ಪದಾರ್ಥಗಳನ್ನು ಮಾರುಕಟ್ಟೆಯಿಂದ ತರಬೇಕು. ಹಾಕುವ ಬಂಡವಾಳ ಕೈಗೆಟುಕುವುದಿಲ್ಲ. ಹಿಂದಿನಿಂದ ಮಾಡಿಕೊಂಡು ಬಂದಿರುವ ಸಮೋಸ ಮಾರಾಟ ಮುಂದುವರಿಸಿಕೊಂಡು ಹೋಗಿದ್ದೇವೆ ಎಂದು ವ್ಯಾಪಾರಿ ಫ‌ಯಾಜ್‌ ಹೇಳುತ್ತಾರೆ.

ರಂಜಾನ್‌ ಹಬ್ಬವನ್ನು ಎಷ್ಟೇ ಬೆಲೆ ಏರಿಕೆಯಾದರೂ ಆಚರಿಸಲಾಗುತ್ತದೆ. ಸಮೋಸ 30 ರೂ., ಆದರೂ ಸಹ ತಿನ್ನಲು ಮನ ಸೆಳೆಯುತ್ತದೆ. ಒಂದು ಸಮೋಸ ರೂ.10ಕ್ಕೆ ಸಿಗುತ್ತದೆ. ಉಪವಾಸ ಮುರಿಯುವ ಮುನ್ನಾ ಮನೆಗಳಿಗೂ ಕಟ್ಟಿಸಿಕೊಂಡು ಬರುತ್ತೇವೆ. ಜೊತೆಯಲ್ಲಿ ಹಣ್ಣು, ಖರ್ಜೂರವನ್ನು ಖರೀದಿಸುತ್ತೇವೆ. -ಹೈದರ್‌ ಸಾಬ್‌, ಗ್ರಾಹಕ

ಎಷ್ಟೇ ಬೆಲೆ ಏರಿಕೆಯಾದರೂ ಸಮೋಸ ಮಾರಾಟ ನಿಲ್ಲಿಸುವುದಿಲ್ಲ. ದಿನನಿತ್ಯ ಬಳಸುವ ವಸ್ತುಗಳು ಹೆಚ್ಚು ದುಬಾರಿಯಾಗಿದೆ. ಕಳೆದ 13 ವರ್ಷದಿಂದ ಸಮೋಸ ವ್ಯಾಪಾರ ಮಾಡುತ್ತಿದ್ದೇವೆ. ರಂಜಾನ್‌ ವೇಳೆಯಲ್ಲಿ ನಿತ್ಯ 500ರಿಂದ 600 ಸಮೋಸ ವ್ಯಾಪಾರವಾಗುತ್ತದೆ. ಮೆಣಸಿನ ಕಾಯಿ, ಹೀರೆಕಾಯಿ, ಆಲೂಗಡ್ಡೆ ಬಜ್ಜಿ, ಖರ್ಜೂರ ವ್ಯಾಪಾರ ಮಾಡಲಾಗುತ್ತದೆ. -ನಸ್ರತ್‌ ಉಲ್ಲಾ ಖಾನ್‌, ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next