ಬೀದರ: ಉತ್ತರ ಕರ್ನಾಟಕದ ಪ್ರಮುಖ, ಪೌಷ್ಟಿಕ ಆಹಾರ ಧಾನ್ಯ ಜೋಳ. ಇದರಿಂದ ತಯಾರಿಸುವ ರೊಟ್ಟಿ ಈ ಭಾಗದ ನಿತ್ಯ ಆಹಾರ. ಆದರೆ, ಈಗ ಖಡಕ್ ರೊಟ್ಟಿಯೂ ಬಲು ತುಟ್ಟಿಯಾಗುತ್ತಿದೆ. ಗಡಿ ಜಿಲ್ಲೆ ಬೀದರನಲ್ಲಿ ಪ್ರಕೃತಿ ವಿಕೋಪ ಮತ್ತು ಬಿಳಿ ಜೋಳ ಬಿತ್ತನೆ ಕ್ಷೇತ್ರ ಕುಸಿತದ ಪರಿಣಾಮ ಮಾರುಕಟ್ಟೆಯಲ್ಲಿ ಬಿಳಿ ಜೋಳದ ಬೆಲೆ ಗಗನಕ್ಕೇರಿದೆ.
ತೊಗರಿ ಕಣಜ ಬೀದರನಲ್ಲಿ ದಿನೇದಿನೆ ಜೋಳದ ಬೆಲೆ ಹೆಚ್ಚುತ್ತಲೇ ಇದೆ. ಹಾಗಾಗಿ “ಜೋಳ ತಿಂದವ ಗಟ್ಟಿ’ ಎಂಬ ಹಳೇ ಗಾದೆ ಇದೀಗ “ಜೇಬು ಗಟ್ಟಿ ಇದ್ದವರಿಗೆ ಮಾತ್ರ ಜೋಳದ ರೊಟ್ಟಿ’ ಎಂಬಂತಾಗಿದೆ. ನವೆಂಬರ್ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಜೋಳಕ್ಕೆ 3000 ರೂ. ಇದ್ದ ದರ ಈಗ 4000ದಿಂದ 5000 ರೂ.ಗೆ ಏರಿಕೆಯಾಗಿದೆ. 4-5 ವರ್ಷಗಳ ಧಾರಣೆಗೆ ಹೋಲಿಸಿದರೆ ಈ ಬಾರಿ ಜೋಳದ ಬೆಲೆ ದಾಖಲೆ ಬರೆಯುತ್ತಿದೆ.
ಬಿಳಿ ಜೋಳದ ದರ ಏರಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದರೆ, ಮಧ್ಯಮ, ದುಡಿಯುವ ವರ್ಗದವರಿಗೆ ಹೊರೆಯಾಗಿದೆ. ಅಷ್ಟೇ ಅಲ್ಲ, ಹೊಟೇಲ್ ಉದ್ಯಮದ ಮೇಲೂ ಪರಿಣಾಮ ಬೀರಿದ್ದು, ಅನಿವಾರ್ಯವಾಗಿ ರೊಟ್ಟಿ ದರ ಹೆಚ್ಚಿಸಲಾಗಿದೆ. ಕಳೆದ ವರ್ಷ ಮಾರುಕಟ್ಟೆಗೆ ಜೋಳದ ಆವಕ ಕಡಿಮೆ ಆಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಹೀಗಾಗಿ ಹೊಸ ಜೋಳ ಬರುವವರೆಗೆ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.
ಉತ್ತರ ಕರ್ನಾಟಕ ಭಾಗದಲ್ಲೇ ಬೀದರ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚು ಜೋಳ ಬೆಳೆಯಲಾಗುತ್ತಿತ್ತು. ಆದರೆ, ಪ್ರಕೃತಿ ವಿಕೋಪ, ಮತ್ತು ಕಟಾವು ಸಮಸ್ಯೆ ಹಿನ್ನೆಲೆಯಲ್ಲಿ ರೈತರು ವಾಣಿಜ್ಯ ಬೆಳೆಗಳತ್ತ ಚಿತ್ತ ನೆಟ್ಟಿದ್ದಾರೆ. ಜಿಲ್ಲೆಯಲ್ಲೇ ಕಳೆದೊಂದು ದಶಕದಲ್ಲಿ ಶೇ. 60ರಷ್ಟು ಜೋಳ ಬಿತ್ತನೆ ಕ್ಷೇತ್ರ ಕ್ಷೀಣಿಸಿದ್ದು, ಇದರಿಂದ ಆವಕವೂ ಕಡಿಮೆಯಾಗುತ್ತಿದೆ. ಜತೆಗೆ ಜಿಲ್ಲೆಗೆ ಹೆಚ್ಚು ಜೋಳ ಆವಕ ಆಗುವ ಮಹಾರಾಷ್ಟ್ರದ ಶರ್ಮಾಳ್‌ದಲ್ಲಿ ನೆರೆಯಿಂದ ಹಾನಿ ಆಗಿದೆ. ಈ ಕಾರಣಗಳಿಂದ ಜೋಳದ ಬೆಲೆ ಏರಿಕೆ ಆಗಿದೆ.
ಬೀದರ ಮಾರುಕಟ್ಟೆಯಲ್ಲಿ ಮಾರ್ಚ್‌ನಿಂದ ಜೂನ್ ವರೆಗೆ ಜೋಳ ಆವಕ ಆಗುತ್ತದೆ. ಪ್ರತಿ ಕ್ವಿಂಟಲ್ ಜೋಳದ ದರ 2015- 16ರಲ್ಲಿ 2000-3600ರೂ., 2016-17ರಲ್ಲಿ 2800-3800 ರೂ., 2017-18ರಲ್ಲಿ 2000- 3350 ರೂ. ಹಾಗೂ 2018-19ರಲ್ಲಿ 2700-3600 ರೂ. ಇತ್ತು. ಆದರೆ, ಪ್ರಸಕ್ತ ವರ್ಷ ಕ್ವಿಂಟಲ್‌ಗೆ 5000 ರೂ. ಗಡಿ ದಾಟಿದೆ. ಇನ್ನೂ ಬೆಲೆ ಹೆಚ್ಚುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಇನ್ನೊಂದು ವಾರದ ಬಳಿಕ ಜೋಳ ರಾಶಿ ಮಾಡುವ ಕೆಲಸ ಶುರುವಾಗಲಿದೆ. ಹೊಸ ಜೋಳ ಮಾರುಕಟ್ಟೆಗೆ ಬಂದ ನಂತರ ಬೆಲೆ ಇಳಿಯಲಿದೆ ಎನ್ನುತ್ತಾರೆ ವ್ಯಾಪಾರಿಗಳು.
ಪ್ರಕೃತಿ ವಿಕೋಪದ ಜತೆಗೆ ಬಿಳಿ ಜೋಳದ ಬಿತ್ತನೆ ಪ್ರದೇಶ ಕ್ಷೀಣಿಸಿದ ಪರಿಣಾಮ ಬಿಳಿ ಜೋಳದ ಆವಕ ಕಡಿಮೆ ಆಗಿದೆ. ಹಾಗಾಗಿ ಕಳೆದ ನವೆಂಬರ್‌ನಿಂದ ಜೋಳದ ದರ 5000 ರೂ. ಆಸುಪಾಸಿಗೆ ತಲುಪಿದೆ. 15-20 ದಿನಗಳಲ್ಲಿ ಮಾರುಕಟ್ಟೆಗೆ ಹೊಸ ಜೋಳ ಬರಲಿದೆ. ನಂತರ ದರ ಇಳಿಯಲಿದೆ.
-ಶಿವಶರಣಪ್ಪ ಮಜಗೆ, ಕಾರ್ಯದರ್ಶಿ, ಎಪಿಎಂಸಿ, ಬೀದರ
* ಶಶಿಕಾಂತ ಬಂಬುಳಗೆ