Advertisement

ಕಾಂಗ್ರೆಸ್‌ ನಾಯಕತ್ವ ವಿರುದ್ಧ ಮತ್ತೂಂದು ಲೆಟರ್‌ “ಬಾಂಬ್‌:’ಪರಿವಾರದ ಮೋಹದಿಂದ ಹೊರಬನ್ನಿ

09:17 AM Sep 07, 2020 | Nagendra Trasi |

ನವದೆಹಲಿ: ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಮತ್ತೂಂದು “ಲೆಟರ್‌ ಬಾಂಬ್‌’ ಸಿಡಿಸಲಾಗಿದ್ದು, ಇದೀಗ ಉತ್ತರ ಪ್ರದೇಶದ “ಮೂಲ’ ಕಾಂಗ್ರೆಸ್‌ ನಾಯಕರು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದು, ಪಕ್ಷವನ್ನು ಉಳಿಸಿ ಎಂದು ಆಗ್ರಹಿಸಿದ್ದಾರೆ.

Advertisement

“ಪರಿವಾರದ ಮೋಹದಿಂದ ಹೊರಬನ್ನಿ. ಪಕ್ಷದಲ್ಲಿ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಮರುಸ್ಥಾಪಿಸಬೇಕು. ಉತ್ತರ ಪ್ರದೇಶದಲ್ಲಿ ಸದೃಢವಾಗಿದ್ದ ಪಕ್ಷವು ಹೀನಾಯ ಸ್ಥಿತಿಯನ್ನು ತಲುಪಿದೆ. ಇತಿಹಾಸದ ಪುಟಕ್ಕೆ ಸೇರುವ ಮುನ್ನ ಪಕ್ಷವನ್ನು ಉಳಿಸಿ’ ಎಂದು ಪತ್ರದಲ್ಲಿ ಉಲ್ಲೇಖೀಸಲಾಗಿದೆ.

ಕಳೆದ ವರ್ಷ ಪಕ್ಷದಿಂದ ಉಚ್ಚಾಟಿಸಲಾಗಿದ್ದ 9 ನಾಯಕರು ಪತ್ರ ಬರೆದಿದ್ದು, ಇದಕ್ಕೆ ಮಾಜಿ ಸಂಸದ ಸಂತೋಷ್‌ ಸಿಂಗ್‌, ಮಾಜಿ ಸಚಿವ ಸತ್ಯದೇವ್‌ ತ್ರಿಪಾಠಿ, ಮಾಜಿ ಶಾಸಕ ವಿನೋದ್‌ ಚೌಧರಿ ಸೇರಿದಂತೆ ಮತ್ತಿತರರ ನಾಯಕರು ಸಹಿ ಹಾಕಿದ್ದಾರೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಿರುದ್ಧ ಅಸಮಾಧಾನ ವ್ಯಕ್ತಪಡಿರುವ ಅವರು, ಉತ್ತರ ಪ್ರದೇಶ ರಾಜ್ಯ ಘಟಕದಲ್ಲಿ ವೇತನದ ಆಧಾರದ ಮೇಲೆ ಕೆಲಸ ಮಾಡುವವರೇ ಹುದ್ದೆಗಳನ್ನು ಹೊಂದಿದ್ದಾರೆ. ಇವರು ಕನಿಷ್ಠ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದಿಲ್ಲ. ಪಕ್ಷದ ಸಿದ್ಧಾಂತವೂ ಗೊತ್ತಿಲ್ಲ. ಪಕ್ಷಕ್ಕೆ ನಿರ್ದೇಶನ ನೀಡುವ ಕೆಲಸಗಳನ್ನಷ್ಟೇ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಕಳೆದ ಒಂದು ವರ್ಷದಿಂದ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವಂತೆ ಕೋರುತ್ತಿದ್ದರೂ ಯಾವುದೇ ಸ್ಪಂದನೆ ಇಲ್ಲ. ನಮ್ಮನ್ನು ಉಚ್ಚಾಟಿಸಿರುವುದು ಕಾನೂನು ಬಾಹಿರವಾಗಿದೆ. ಈ ಕುರಿತು ಗಮನ ಸೆಳೆದಿದ್ದರೂ ಕೇಂದ್ರೀಯ ಶಿಸ್ತು ಸಮಿತಿಯು ನಮ್ಮ ಮನವಿಯನ್ನು ಪರಿಗಣಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾಳೆ “ಭಿನ್ನ ಮತೀಯ’ ನಾಯಕರು-ಸೋನಿಯಾ ಗುಂಪಿನ ನಡುವೆ ಭೇಟಿ
ಅಂತರಿಕ ಚುನಾವಣೆ ಮೂಲಕ ಪೂರ್ಣಾವಧಿಗೆ ಕಾಂಗ್ರೆಸ್‌ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂದು ಪತ್ರ ಬರೆದಿದ್ದ 23 “ಭಿನ್ನಮತೀಯ’ ನಾಯಕರು ಮಂಗಳವಾರ ನಡೆಯಲಿರುವ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Advertisement

ಸಂಸದೀಯ ವಿಷಯಗಳ ಕುರಿತು ಚರ್ಚಿಸಲು ಕರೆದಿರುವ ಸಭೆಯಲ್ಲಿ “ಭಿನ್ನಮತೀಯ’ ನಾಯಕರ ತಂಡ ಹಾಗೂ ಮತ್ತೂಂದು ನಾಯಕರ ತಂಡ (ಸೋನಿಯಾ ಗುಂಪು) ಒಂದೆಡೆ ಸೇರಲಿವೆ.

ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಎ.ಕೆ. ಆ್ಯಂಟನಿ ವರ್ಚುವಲ್‌ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಈ ವೇಳೆ, ಭಿನ್ನಮತೀಯ ನಾಯಕರು ಎತ್ತಿರುವ ವಿಷಯಗಳು ಪ್ರಸ್ತಾಪವಾಗಲಿವೆ ಎನ್ನಲಾಗುತ್ತಿದೆ. ಸೆ.14ರಿಂದ ಸಂಸತ್‌ನ ಮುಂಗಾರು ಅಧಿವೇಶನ ನಡೆಯಲಿದ್ದು, ಕೇಂದ್ರ ಸರ್ಕಾರದ ವಿರುದ್ಧ ಮುಗಿಬೀಳಲು ಯಾವ ವಿಷಯಗಳನ್ನು ಪ್ರಸ್ತಾಪಿಸಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next