Advertisement

ಚಿಂದಿ ಆಯುವವರ ಆರೋಗ್ಯ ರಕ್ಷಣೆ ಮುಖ್ಯ

09:00 AM May 22, 2019 | Team Udayavani |

ಚಿತ್ರದುರ್ಗ: ಹಾದಿ ಬೀದಿಯಲ್ಲಿನ ಚಿಂದಿ, ಪ್ಲಾಸ್ಟಿಕ್‌ ಮತ್ತಿತರ ಘನ ತ್ಯಾಜ್ಯ ವಸ್ತುಗಳನ್ನು ಆಯುವ ಮೂಲಕ ಪರಿಸರಕ್ಕೆ ತಮಗೆ ಅರಿವಿಲ್ಲದಂತೆ ಅಪಾರ ಕೊಡುಗೆ ನೀಡುತ್ತಿರುವುದು ಮಹತ್ವದ ಕೆಲಸವಾಗಿದೆ ಎಂದು ರೋಟರಿ ಕ್ಲಬ್‌ ಚಿತ್ರದುರ್ಗ ಫೋರ್ಟ್‌ ಅಧ್ಯಕ್ಷ ಜೆ.ವಿ. ಮಂಜುನಾಥ್‌ ಹೇಳಿದರು.

Advertisement

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ವೃತ್ತ ಸಮೀಪದ ಭಗತ್‌ ಸಿಂಗ್‌ ಉದ್ಯಾನವನದಲ್ಲಿ ರೋಟರಿ ಕ್ಲಬ್‌ ಚಿತ್ರದುರ್ಗ ಫೋರ್ಟ್‌ ಹಾಗೂ ಇನ್ನರ್‌ವ್ಹೀಲ್ ಕ್ಲಬ್‌ ಚಿತ್ರದುರ್ಗ ಫೋರ್ಟ್‌ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚಿಂದಿ ಆಯುವವರಿಗೆ ಸುರಕ್ಷಾ ಸಾಧನ ವಿತರಣೆ ಮತ್ತು ಪರಿಸರ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಪರಿಕರ ವಿತರಿಸಿ ಅವರು ಮಾತನಾಡಿದರು.

ಚಿಂದಿ ಆಯುವ ಜನರು ಅಲೆಮಾರಿ ಗಳಾಗಿದ್ದು ಜೀವನೋಪಾಯಕ್ಕಾಗಿ ಚರಂಡಿ, ರಾಜಕಾಲುವೆ, ಕಸದ ಗುಂಡಿ ಸೇರಿದಂತೆ ಮತ್ತಿತರ ದುರ್ನಾಥದ ಪ್ರದೇಶಗಳಿಗೆ ತೆರಳಿ ತಮ್ಮ ಆರೋಗ್ಯವನ್ನು ಪಣಕ್ಕಿಟ್ಟು ಚಿಂದಿ ಆಯುತ್ತಾರೆ. ಇಂತಹ ಕೆಲಸ ಮಾಡುವ ಸಂದರ್ಭದಲ್ಲಿ ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಬರಿಗೈಯಲ್ಲಿ ಘನ ತ್ಯಾಜ್ಯ ಮುಟ್ಟುವುದರಿಂದ ಕೈ, ಕಾಲಿಗೆ ರಕ್ಷಣಾ ಕವಚಗಳ ಅಗತ್ಯವಿದೆ. ಇಂತಹ ರಕ್ಷಣಾ ಕವಚಗಳನ್ನು ಹಾಕಿಕೊಂಡು ಕೆಲಸ ಮಾಡುವಂತೆ ಮನವಿ ಮಾಡಿದರು.

ಇನ್ನರ್‌ವ್ಹೀಲ್ ಕ್ಲಬ್‌ ಚಿತ್ರದುರ್ಗ ಫೋರ್ಟ್‌ ಅಧ್ಯಕ್ಷೆ ರೇಖಾ ಸಂತೋಷ್‌ ಮಾತನಾಡಿ, ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ಚಿಂದಿ ಆಯುವ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಚಿಂದಿ ಆಯುವ ಜನರು ಸ್ವಚ್ಛತಾ ಕಾರ್ಯ ಮಾಡುತ್ತಾರೆ. ಆದರೆ ಈ ಕಾರ್ಯಕ್ಕಾಗಿ ಯಾರೂ ಸಂಬಳ ನೀಡುವುದಿಲ್ಲ. ಕನಿಷ್ಠ ಸೌಲಭ್ಯ ನೀಡುವಂತಹ ಕಾರ್ಯ ಆಗಬೇಕಿದೆ. ಅದಕ್ಕಾಗಿ ನಮ್ಮ ಕ್ಲಬ್‌ಗಳ ವತಿಯಿಂದ 35 ಜನ ಚಿಂದಿ ಆಯುವ ಮಹಿಳೆಯರು ಮತ್ತು ಪುರುಷರಿಗೆ ಆರೋಗ್ಯ ಸುರಕ್ಷಾ ಸಾಧನಗಳಾದ ಚಪ್ಪಲಿ, ಕೈಗವಚ, ಸೋಪು, ಉಡುಪು ವಿತರಿಸುತ್ತಿದ್ದೇವೆ ಎಂದು ತಿಳಿಸಿದರು.

ಚಿಂದಿ ಆಯುವ ಜನರು ಪರಿಸರ ರಕ್ಷಣೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅದೇ ರೀತಿ ಆರೋಗ್ಯ ರಕ್ಷಣೆಗೂ ಒತ್ತು ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಾಮಾಜಿಕ, ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.

Advertisement

ಡಿಸ್ಟ್ರಿಕ್ಟ್ ಛೇರಮನ್‌-316 ಶ್ರೀಲತಾ ದೊಂತಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಡಾ|ಎಚ್.ಕೆ.ಎಸ್‌. ಸ್ವಾಮಿ, ಇನ್ನರ್‌ವ್ಹೀಲ್ ಕ್ಲಬ್‌ ಚಿತ್ರದುರ್ಗ ಫೋರ್ಟ್‌ ಕಾರ್ಯದರ್ಶಿ ಸವಿತಾ ಶೇಖರ್‌, ಸರ್ಕಾರಿ ವಿಜ್ಞಾನ ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ| ಕೆ.ಕೆ. ಕಾಮಾನಿ, ಕಾಂಗ್ರೆಸ್‌ ಮುಖಂಡ ಮಹಡಿ ಶಿವಮೂರ್ತಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next