ರಿಪ್ಪನ್‌ಪೇಟೆ: ಸಮೀಪದ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿ ಕಳೆದ ಮೂರ್‍ನಾಲ್ಕು ತಿಂಗಳುಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದರೂ ಕೂಡ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಹೇಮಾ ನಾಗರಾಜ್, ಗ್ರಾಪಂ ಸದಸ್ಯ ಕಲ್ಲೂರು ಮೇಘರಾಜ್ ಹಾಗೂ ಗ್ರಾಮಸ್ಥರು, ಮಹಿಳೆಯರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಖಾಲಿ ಕೊಡಗಳೊಂದಿಗೆ ಪಂಚಾಯತ್ ಎದುರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಸುಜಲಧಾರೆ ಯೋಜನೆಯನ್ವಯ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕಲ್ಲೂರಿಗೆ ಶುದ್ಧ ಕುಡಿಯುವ ಬೋರ್‌ವೆಲ್ ಬಾವಿಯನ್ನು ನೀಡಿದ್ದು ಅದು ಕೆಟ್ಟುಹೋಗಿದೆ. ಇದನ್ನು ದುರಸ್ಥಿಗೊಳಿಸಿ ಇಲ್ಲವೇ ಹೊಸ ಬೋರ್ ವೆಲ್ ಕೊರೆಸಿ ನೀರು ಕೊಡುವಂತೆ ಕಳೆದ ಎರಡು ತಿಂಗಳಿಂದ ಸಂಬಂಧಪಟ್ಟ ತಾಲೂಕು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಜಿಪಂ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ವ್ಯವಹಾರ ನಡೆಸಲಾಗಿದ್ದರೂ ಸಾರ್ವಜನಿಕರ ಮನವಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕಚೇರಿಗೆ ಹೋದ ಹೋರಾಟಗಾರ ಪಂಚಾಯತ್ ಸದಸ್ಯ ಕಲ್ಲೂರು ಮೇಘರಾಜ್‌ಗೆ ಉಡಾಫೆಯ ಉತ್ತರ ನೀಡುವುದು, ಸರ್ಕಾರದಲ್ಲಿ ಹಣವಿಲ್ಲ ಎಲ್ಲಿಂದ ಹಣ ತರುವುದು ಎಂದು ಉತ್ತರಿಸುತ್ತಾರೆ.
ನಮ್ಮ ಮೂಲ ಸೌಲಭ್ಯಕ್ಕಾಗಿ ಹೋರಾಟವೊಂದೇ ಮಾರ್ಗವೆಂದು ಅರಿತು ಇಂದು ನಮ್ಮೂರಿನ ಮಹಿಳೆಯರೊಂದಿಗೆ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಹೇಮಾ ಸೇರಿದಂತೆ ಕಾಂಗ್ರೆಸ್ ಮುಖಂಡ ಡಾ| ಅಬೂಬಕರ್, ಜೆಡಿಎಸ್ ಮುಖಂಡ ಅರ್.ಎ. ಚಾಬುಸಾಬ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್.ಎನ್. ಮಂಜುಪ್ಪ, ಬಿಜೆಪಿಯ ಸತೀಶ್ ಹೆದ್ದಾರಿಪುರ, ಕಲ್ಲೂರು ಈರಪ್ಪ, ಕೆ.ಸಿ. ತೇಜಮೂರ್ತಿ, ಜನಪರ ಹೋರಾಟ ವೇದಿಕೆ ಅಧ್ಯಕ್ಷ ಸಾಮಾಜಿಕ ಕಾರ್ಯಕರ್ತ ಟಿ.ಆರ್. ಕೃಷ್ಣಪ್ಪ ಸೇರಿದಂತೆ ಕಲ್ಲೂರಿನ ನೂರಾರು ಮಹಿಳೆಯರು ಹಾಗೂ ಗ್ರಾಮಸ್ಥರು ಖಾಲಿ ಕೊಡವನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿದ ತಾಪಂ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸಂತೋಷ ಭೇಟಿ ನೀಡಿ ಪ್ರತಿಭಟನಾ ನಿರತರ ಮನವೊಲಿಕೆಗೆ ಮುಂದಾಗಿದ್ದು ವಿಫಲವಾಯಿತು. ಸ್ಥಳಕ್ಕೆ ಬಂದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸಂತೋಷ ಅವರ ವರ್ತನೆಯಿಂದ ಬೇಸರವಾಗಿದೆ.
ತಕ್ಷಣ ಅಮಾನತು ಪಡಿಸುವಂತೆ ತಾಪಂ ಇಒಗೆ ಶಿಫಾರಸು ಮಾಡಿ ಎಂದು ಪ್ರತಿಭಟನಾ ನಿರತರ ಒಕ್ಕೊರಲ ಧಿಕ್ಕಾರದ ಕೂಗಿಗೆ ಅಧಿಕಾರಿಗಳು ತಬ್ಬಿಬ್ಟಾದರು. ತಾಪಂ ಅಧ್ಯಕ್ಷ ವೀರೇಶ್ ಆಲುವಳ್ಳಿಯವರ ಭರವಸೆಯ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.