Advertisement

ಕೆರೆ ಹೂಳೆತ್ತಲು ಗ್ರಾಮಸ್ಥರ ಪಣ

12:03 PM Jun 05, 2019 | Naveen |

ರಿಪ್ಪನ್‌ಪೇಟೆ: ಸಾಮಾನ್ಯವಾಗಿ ಸರಕಾರಿ ಸ್ವಾಮ್ಯಕ್ಕೊಳಪಟ್ಟಿರುವ ಯಾವುದೇ ಅಭಿವೃದ್ಧಿ ಕಾಮಗಾರಿ ನಿರ್ವಹಿಸಬೇಕಾದರೆ ಸರಕಾರದ ಅನುದಾನಕ್ಕಾಗಿ ಬೇಡಿಕೆ ಇಟ್ಟು, ಹಣ ಮಂಜೂರಾಗುವ ಖಾತ್ರಿಯಿದ್ದರೆ ಮಾತ್ರ ಜನಪ್ರತಿನಿಧಿಗಳ ಸಹಕಾರದಿಂದ ಗುತ್ತಿಗೆದಾರರು ಕಾಮಗಾರಿ ಕೈಗೊಂಡು ಜನ ಮೆಚ್ಚದಿದ್ದರೂ ಆಡಳಿತಗಾರರನ್ನು ಮೆಚ್ಚಿಸುವ ಅನುಷ್ಠಾನ ಕಾರ್ಯ ನಡೆಯುತ್ತದೆ. ಆದರೆ ಈ ವ್ಯವಸ್ಥೆಗೆ ವ್ಯತಿರಿಕ್ತವೆಂಬಂತೆ ವಡಗೆರೆಯ ರೈತ ಕುಟುಂಬದ ಗ್ರಾಮಸ್ಥರು ತಮ್ಮೂರಿನ ಕೆರೆಯ ಹೂಳನ್ನು ಸ್ವತಃ ತಾವೇ ತೆಗೆಯುವ ಮೂಲಕ ನೈಜ ಅಭಿವೃದ್ಧಿಗೆ ಮುಂದಾಗಿದ್ದಾರೆ.

Advertisement

ರಿಪ್ಪನ್‌ಪೇಟೆ- ಸಾಗರ ಮುಖ್ಯರಸ್ತೆಯ ಪಕ್ಕದಲ್ಲಿಯೇ ಇರುವ ಮಳೆಗಾಲದಲ್ಲಿ ಮೈದುಂಬಿಕೊಂಡು ಕೆಂದಾವರೆಯಿಂದ ಶೃಂಗರಿಸಿಕೊಂಡು ದಾರಿಹೋಕರಿಗೆ ಮುದ ನೀಡುವ ವಡಗೆರೆ ಕೆರೆ ಈ ಭಾರಿಯ ಬಿಸಿಲಿನ ತಾಪಕ್ಕೆ ಜರ್ಜರಿತಗೊಂಡಿದೆ. ಸುಮಾರು 5-37 ಎಕರೆ ವಿಸ್ತೀರ್ಣದ ಕೆರೆಯ ನೀರುಬತ್ತಿ ಕೆರೆಯಂಗಳ ಬಿರುಕು ಬಿಟ್ಟಿದೆ. ಕಳೆದ ಏಳೆಂಟು ವರ್ಷಗಳಿಂದ ಈ ಕೆರೆಯಲ್ಲಿ ನೀರು ಸಂಪೂರ್ಣವಾಗಿ ಬತ್ತಿ ಹೋಗಿರುವ ನಿದರ್ಶನಗಳಿಲ್ಲ. ಆದರೆ ಈ ಸಲ ಸಂಪೂರ್ಣ ನೀರು ಬತ್ತಿ ಹೋಗಿ ಜನ- ಜಾನುವಾರುಗಳಿಗೆ ಸಂಕಷ್ಟ ಉಂಟಾಗಿದೆ. ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 100 ಎಕರೆ ಕೃಷಿ ಜಮೀನಿಗೆ ನೀರುಣಿಸುತ್ತಿದ್ದ ಕೆರೆ ಸತತ ಹೂಳು ತುಂಬಿ ನೀರು ಶೇಖರಣೆಯ ಪ್ರಮಾಣ ಅಲ್ಪಮಟ್ಟಕ್ಕೆ ಇಳಿದಿದೆ. ಇದನ್ನರಿತ ಗ್ರಾಮಸ್ಥರು ಹೂಳೆತ್ತಲು ಇದೇ ಸರಿಯಾದ ಸಮಯವೆಂದರಿತು ಹೂಳು ತುಂಬಿದ ಕೆರೆಯನ್ನು ಸ್ವಚ್ಛಗೊಳಿಸುವ ಯೋಜನೆಗೆ ಕೈ ಹಾಕಿದ್ದಾರೆ.

ಒಂದು ಕಾರ್ಯದಲ್ಲಿ ಎರಡು ಉಪಯೋಗ: ಕೆರೆಯ ಹೂಳೆತ್ತಲು ಬಾಳೂರು ಗ್ರಾಪಂ ಎಂಎನ್‌ಆರ್‌ಇಜಿ ಯೋಜನೆಯಲ್ಲಿ 2.70 ಲಕ್ಷ ರೂ. ಅನುದಾನ ಮೀಸಲಿಟ್ಟಿದೆ. ಪ್ರಸ್ತುತ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಆದರೆ ಈ ಕಾಮಗಾರಿ ಮುಕ್ತಾಯಗೊಳ್ಳಬೇಕಾದರೆ ಹಲವು ವರ್ಷಗಳೇ ಬೇಕಾಗಬಹುದು ಎಂದು ಚರ್ಚಿಸಿದ ಗ್ರಾಮಸ್ಥರು ಕೆರೆಯಲ್ಲಿ ತುಂಬಿದ ಹೂಳನ್ನು ತಮ್ಮ ಹೊಲಗದ್ದೆಗಳಿಗೆ ಹಾಕಿಕೊಳ್ಳುವುದು ಹಾಗೂ ನೀರು ಹೆಚ್ಚು ಶೇಖರಣೆಗೊಳ್ಳುವಂತಹ ಆಳದವರೆಗೆ ಹೂಳು ತೆಗೆದು ಕಾಮಗಾರಿ ನಿರ್ವಹಿಸುವುದು ಎಂಬ ಸಂಕಲ್ಪದಂತೆ ರೈತರು ಸ್ವಂತ ಖರ್ಚಿನಲ್ಲಿಯೇ ಜೆಸಿಬಿ ಟ್ರ್ಯಾಕ್ಟರ್‌ಗಳನ್ನು ಬಳಸಿಕೊಂಡು ಎರಡು- ಮೂರು ದಿನಗಳಿಂದ ಫಲವತ್ತಾದ ಕೆರೆಯ ಹೂಳನ್ನು ತಮ್ಮ ಹೊಲಗದ್ದೆಗಳಲ್ಲಿ ಹಾಕುತ್ತಿದ್ದಾರೆ. ಇದರಿಂದ ಕೆರೆಯ ಆಳವನ್ನು ಹೆಚ್ಚಿಸುವ ಜೊತೆಗೆ ತಮ್ಮ ಜಮೀನನ್ನು ಫಲವತ್ತತೆಗೊಳಿಸುವ ಎರಡು ಉಪಯೋಗಗಳ ಉದ್ದೇಶ ಹೊಂದಿದ್ದಾರೆ.

ಗ್ರಾಮಸ್ಥರ ಸಹಭಾಗಿತ್ವ ಅಭಿವೃದ್ಧಿಗೆ ಪೂರಕ: ಹಲವು ವರ್ಷಗಳಿಂದ ಸರಕಾರಗಳು ಕೆರೆಯ ಅಭಿವೃದ್ಧಿಗೊಳಿಸಲು ಈಗಾಗಲೇ ಹಲವು ಕೋಟಿ ರೂ.ಗಳ ಅನುದಾನ ಬಳಸಲಾಗಿದ್ದರೂ ನಿರೀಕ್ಷಿತ ಅಭಿವೃದ್ಧಿಯಲ್ಲಿ ವಿಫಲವಾಗಿದೆ. ಕೆರೆಗಳ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಕೆರೆ ಅಭಿವೃದ್ಧಿಯಲ್ಲಿ ವಡಗೆರೆ ರೈತರಂತೆ ಸಹಭಾಗಿತ್ವದ ಜಾಗೃತಿ ಮೂಡಿಸಿದರೆ ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಕಾಮಗಾರಿಯೊಂದಿಗೆ ಕೆರೆಗಳ ಸಮಗ್ರ ಅಭಿವೃದ್ಧಿ ಸಾಧಿಸಬಹುದು ಎಂಬುದಕ್ಕೆ ಇಲ್ಲಿಯ ರೈತರೇ ಪ್ರೇರಣೆಯಾಗುತ್ತಾರೆ.

ಯಂತ್ರದ ವೆಚ್ಚವನ್ನು ಆಡಳಿತ ವ್ಯವಸ್ಥೆಯವರು ಭರಿಸಿದರೆ ಕೂಲಿ ಇನ್ನಿತರ ಸಣ್ಣಪುಟ್ಟ ಖರ್ಚನ್ನು ರೈತರು ಭರಿಸಿಕೊಳ್ಳಬಹುದು. ಹೀಗಾದರೆ ಕೆರೆಯ ಸ್ವಚ್ಛತೆಯ ಜೊತೆಗೆ ರೈತರಿಗೂ ಕೆರೆಯಗೋಡು ಸಿಕ್ಕಂತಾಗುತ್ತದೆ. ಸರಕಾರಗಳು ಈ ಬಗ್ಗೆ ಗಮನ ಹರಿಸಬೇಕು.
ಗಣೇಶ ಸಿಂಗ್‌, ರೈತ.

Advertisement

ಸರಕಾರದ ಯೋಜನೆಗಳ ಜೊತೆ ಗ್ರಾಮಸ್ಥರು ಕೈಜೋಡಿಸಿದರೆ ಉತ್ತಮ ಪ್ರಗತಿ ಸಾಧಿಸಬಹುದು. ವಡಗೆರೆ ಕೆರೆಯಲ್ಲಿ ಉದ್ಯೋಗ ಖಾತರಿಯಲ್ಲದೆ ಪ್ರತ್ಯೇಕವಾಗಿ ರೈತರು ಸ್ವಯಂ ಪ್ರೇರಿತರಾಗಿ ಹೂಳು ತೆಗೆಯುತ್ತಿರುವುದು ಒಳ್ಳೆಯ ಬೆಳವಣಿಗೆ.
ಭರತ್‌, ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next