Advertisement
ನಗರದ ಖಡಕ ಗಲ್ಲಿ, ಖಂಜರ ಗಲ್ಲಿ, ಭಡಕಲ್ ಗಲ್ಲಿ, ಟೋಪಿ ಗಲ್ಲಿ ಸೇರಿದಂತೆ ಹಲವೆಡೆ ಕಲ್ಲು ತೂರಾಟ ನಡೆದಿದೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಗುಂಪು ಚದುರಿಸಲು ಪೊಲೀಸರು ಆಶ್ರುವಾಯು ಸಿಡಿಸಿದ್ದಾರೆ. ಮೊದಲು ಖಡಕ ಗಲ್ಲಿಯಲ್ಲಿ ಶುರುವಾದ ಗಲಭೆ ನಂತರ ಎಲ್ಲ ಪ್ರದೇಶಗಳಲ್ಲೂ ವ್ಯಾಪಿಸಿಕೊಂಡಿದೆ. ಶೆಟ್ಟಿ ಗಲ್ಲಿ ಕಾರ್ನರ್‌ನಲ್ಲಿ ಭಾರೀ ಪ್ರಮಾಣದ ಕಲ್ಲುಗಳು ಬಿದ್ದಿವೆ. ಸುಮಾರು 30ರಿಂದ 40 ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಗಲಾಟೆ ಉದ್ದೇಶದಿಂದ ಕಿಡಿಗೇಡಿಗಳು ಮೊದಲೇ ಕಲ್ಲುಸಂಗ್ರಹಿಸಿ ಇಟ್ಟುಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಸುಮಾರು 10ಕ್ಕೂ ಹೆಚ್ಚು ಮಂದಿ ಗಲಾಟೆಯಲ್ಲಿ ಗಾಯಗೊಂಡಿದ್ದಾರೆ. ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ.
ಗಲಭೆ ಪೀಡಿತ ಸ್ಥಳಕ್ಕೆ ಬಂದ ಮಹಾನಗರ ಪೊಲೀಸ್ ಆಯುಕ್ತ ಟಿ.ಜಿ. ಕೃಷ್ಣಭಟ್, ಮಾರ್ಕೆಟ್ ಎಸಿಪಿ ಶಂಕರ ಮಾರೀಹಾಳ ಅವರ ಮುಖಕ್ಕೆ ಕಲ್ಲು ಬಿದ್ದಿದೆ ಎನ್ನಲಾಗಿದೆ. ಆಯುಕ್ತರು ಹೆಲ್ಮೆಟ್ ಧರಿಸಿದ್ದರಿಂದ ಯಾವುದೇ ಅನಾಹುತ ಆಗಿಲ್ಲ. ಎಸಿಪಿ ಶಂಕರ ಮಾರೀಹಾಳ ಅವರ ಮುಖಕ್ಕೆ ಕಲ್ಲು ಬಿದ್ದಿದ್ದರಿಂದ ತುಟಿಯ ಭಾಗದಲ್ಲಿ ರಕ್ತ ಬಂದಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಗೆ ಕೆಲ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದೆ.