Advertisement

Riots: ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆ ತಂದ್ರೆ ನಿರ್ದಾಕ್ಷಿಣ್ಯ ಕ್ರಮ: ಸಿಎಂ ಸಿದ್ದರಾಮಯ್ಯ

08:36 PM Sep 12, 2024 | Team Udayavani |

ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆಯ ವೇಳೆ ನಡೆದಿರುವ ಕಲ್ಲು ತೂರಾಟವು ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆ ತರುವ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯ, ಇದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

‌ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ  ಗಣೇಶ ಮೂರ್ತಿ ವಿಸರ್ಜನೆ ವೇಳೆ ಗಲಭೆಗೆ ಸಂಬಂಧಿಸಿ ಈಗಾಗಲೇ 50ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದ್ದು, ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಯಾವುದೇ ಗಲಭೆ, ಗಲಾಟೆ, ಹಿಂಸಾಚಾರಗಳು ನಡೆಯದೆ ಸರ್ವಜನಾಂಗದ ಶಾಂತಿಯ ತೋಟದಂತಿದ್ದ ನಾಡನ್ನು, ಧಾರ್ಮಿಕ ನೆಲೆಗಟ್ಟಿನಲ್ಲಿ ವಿಭಜಿಸಲು ಯತ್ನಿಸುವ ದುರುಳರು ಯಾವುದೇ ಜಾತಿ, ಧರ್ಮದವರಾಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಪ್ರಚೋದನೆಗಳಿಗೆ ಒಳಗಾಗದೆ ಶಾಂತಿ, ಸಂಯಮ ಕಾಪಾಡಿಕೊಳ್ಳುವ ಮೂಲಕ ನಮ್ಮೊಂದಿಗೆ ಸಹಕರಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಘಟನಾ ಸ್ಥಳಕ್ಕೆ ಉಸ್ತುವಾರಿ ಸಚಿವ ಭೇಟಿ, ಪರಿಶೀಲನೆ:
ನಾಗಮಂಗಲ ಘರ್ಷಣಾ ಸ್ಥಳಕ್ಕೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಘಟನೆ ಬಗ್ಗೆ ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ನಗರದ ತಾಲೂಕು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರತ್ಯಕ್ಷದರ್ಶಿಗಳು, ಅಂಗಡಿ ಮುಂಗಟ್ಟುಗಳು ಹಾಗೂ ಗ್ಯಾರೇಜ್‌ಗಳ ಮಾಲಿಕರು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರ ಬಂಧಿಸಲಾಗಿದೆ ಎಂದರು.

ಎರಡು ಗುಂಪಿನ 50ಕ್ಕೂ ಹೆಚ್ಚು ಮಂದಿ ಬಂಧನ:
ಗಣೇಶ ಮೂರ್ತಿ ವಿಸರ್ಜನೆಯ ವೇಳೆ ಗಲಭೆಗೆ ಸಂಬಂಧಪಟ್ಟಂತೆ ಎರಡು ಗುಂಪುಗಳ 50ಕ್ಕೂ ಹೆಚ್ಚು ಮಂದಿಯ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ನಾಗಮಂಗಲ ನಗರ ಪೊಲೀಸ್‌ ಠಾಣೆ ಎದುರು ಎರಡು ಗುಂಪಿನ ಬಂಧಿತರ ಕುಟುಂಬ ಸದಸ್ಯರಿಂದ ಹೈಡ್ರಾಮ ನಡೆಯಿತು. ಗಣೇಶ ವಿಸರ್ಜನೆ ವೇಳೆ ದರ್ಗಾ ಎದುರು ಎರಡು ಗುಂಪುಗಳ ನಡುವೆ ವಾಗ್ವಾದ ಉಂಟಾಗಿ ಕಲ್ಲೆಸತ ಆರಂಭಗೊಂಡು 25 ಅಂಗಡಿಗಳು ಬೆಂಕಿಗೆ ಆಹುತಿಯಾದರೆ, ಹಲವು ವಾಹನಗಳು ಹಾನಿಗೆ ಒಳಗಾಗಿವೆ ಎಂದು ವರದಿಗಳು ಹೇಳಿವೆ.

ಶಾಲೆ, ಕಾಲೇಜಿಗೆ ರಜೆ ಘೋಷಣೆ:
ನಾಗಮಂಗಲದಲ್ಲಿ ಗಲಭೆ ಉಂಟಾದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಸೆಕ್ಷನ್‌ 144 ಜಾರಿಗೊಳಿಸಿದ್ದು ಸೆ.೧೪ರವರೆಗೆ ಮುಂದುವರಿಯಲಿದೆ. ನಗರದಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.  ಎಸ್‌ಪಿ ಮಲ್ಲಿಕಾರ್ಜುನ ಬಲದಂಡಿ, ಐಜಿಪಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಕುಮಾರ್‌ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next