ಹುಬ್ಬಳ್ಳಿ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ರಿಯಾಬಿಟೇಶನ್ ಕ್ಯಾಂಪ್(ಆರ್.ಎಚ್.ಕ್ಯಾಂಪ್) ಗಳಲ್ಲಿ ಆತಂಕ-ದುಗುಡಕ್ಕೆ ಕಾರಣವಾಗಿದೆ. ಹೌದು. ನೆರೆಯ ದೇಶದ ವಿದ್ಯಮಾನ ಅದರಲ್ಲೂ
ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿ, ದೌರ್ಜನ್ಯ, ಹಿಂದೂಗಳ ಮನೆ-ಆಸ್ತಿ, ದೇವಸ್ಥಾನ ಧ್ವಂಸದಂತಹ ಕೃತ್ಯಗಳು ಸಿಂಧನೂರು ತಾಲೂಕಿನ ನಿರಾಶ್ರಿತ ಕ್ಯಾಂಪ್‌ಗಳಲ್ಲಿ ಸರಿ ಸುಮಾರು ನಾಲ್ಕು ದಶಕಗಳಿಂದ ಬದುಕು ಕಟ್ಟಿಕೊಂಡು ಇಲ್ಲಿಯವರೇ ಆಗಿರುವ ಮೂಲತಃ ಬಾಂಗ್ಲಾ ನಿವಾಸಿಗಳ ನೋವು ದಿನದಿಂದ ದಿನಕ್ಕೆ ಹೆಚ್ಚುವಂತೆ ಮಾಡಿದೆ.
Advertisement
1971ರಲ್ಲಿ ನಡೆದ ಬಾಂಗ್ಲಾ ದೇಶ ವಿಮೋಚನಾ ಸಂದರ್ಭ ಪಾಕಿಸ್ತಾನದ ಸೇನೆಯಿಂದ ವಿಶೇಷವಾಗಿ ಹಿಂದೂಗಳ ಮೇಲೆ ಅತ್ಯಾಚಾರ, ಆಸ್ತಿ-ಪಾಸ್ತಿ ನಷ್ಟ ಅಪಾರ ಪ್ರಮಾಣದಲ್ಲಿ ನಡೆದಿತ್ತು. ಆಗ ಬಾಂಗ್ಲಾ ತೊರೆದು ಭಾರತಕ್ಕೆ ಬಂದ ನಿರಾಶ್ರಿತ ಹಿಂದೂ ಕುಟುಂಬಗಳಿಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ನೇತೃತ್ವದ ಸರ್ಕಾರ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುಂಗಭದ್ರ ಜಲಾಶಯದ ಎಡದಂಡೆ ನಾಲೆಗೆ ಹೊಂದಿಕೊಂಡಂತೆ ಐದು ಕ್ಯಾಂಪ್ ನಿರ್ಮಿಸಿ, ಐದು ಸಾವಿರ ಎಕರೆಯಷ್ಟು ಭೂಮಿ ಹಂಚಿಕೆ ಮಾಡಿ ಆಶ್ರಯ ಕಲ್ಪಿಸಿತ್ತು. ಈ ಕ್ಯಾಂಪ್‌ಗಳಲ್ಲಿ ಪ್ರಸ್ತುತ ಸುಮಾರು 2-3 ಸಾವಿರದಷ್ಟು ಕುಟುಂಬಗಳಿದ್ದು, ಎರಡ್ಮೂರು ತಲೆಮಾರುಗಳನ್ನು ಇಲ್ಲಿಯೇ ಕಳೆದಾಗಿದೆ.
Related Articles
Advertisement
ಬಾಂಗ್ಲಾದಲ್ಲಿ 1947ರಲ್ಲಿ ಹಿಂದೂಗಳ ಜನಸಂಖ್ಯೆ ಶೇ.31ಆಗಿತ್ತು. 1961ರ ವೇಳೆಗೆ ಅದು ಶೇ.19ಕ್ಕೆ ಕುಸಿದರೆ, 1971ರ ಘಟನೆ ನಂತರ 1974 ಅವಧಿಗೆ ಶೇ.14ಕ್ಕೆ ಕುಸಿದಿತ್ತು. ಈಗ ಬಾಂಗ್ಲಾದಲ್ಲಿ ಹಿಂದೂಗಳ ಸಂಖ್ಯೆ ಶೇ.5-9ರಷ್ಟಿದೆ. ಅಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ, ದೇವಸ್ಥಾನ-ಮಂದಿರಗಳ ಮೇಲೆ ದಾಳಿಯಂತಹ ಘಟನೆಗಳು ಆಗಾಗ ನಡೆಯುತ್ತಿದ್ದರೂ ಈಗ ನಡೆದಿರುವ ಗಲಭೆ ಬಳಿಕ ಹಿಂದೂಗಳು ಅಲ್ಲಿ ಬದುಕುವುದು ಕಷ್ಟವಾಗಬಹುದು ಎಂದು ಹೇಳುತ್ತಾರೆ.
ಸಂಬಂಧಿಕರೊಂದಿಗೆ ಸಂಪರ್ಕ ಇದೆ. ಗಲಭೆ ನಂತರದಲ್ಲಿ ನೇರ ಸಂಪರ್ಕ ಇಲ್ಲ. ಫೋನ್ ಸಂಪರ್ಕವೂ ಸ್ಥಗಿತಗೊಳಿಸಲಾಗಿದೆ. ಪಶ್ಚಿಮ ಬಂಗಾಲದಲ್ಲಿರುವ ನಮ್ಮ ಸಂಬಂಧಿಯೊಬ್ಬರ ಮೂಲಕ ಮಾಹಿತಿ ಪಡೆಯುತ್ತಿದ್ದೇವೆ.
ಪ್ರದೀಪ, ಆರ್.ಎಚ್.ಕ್ಯಾಂಪ್ ನಿವಾಸಿ. ■ ಅಮರೇಗೌಡ ಗೋನವಾರ