ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದುರುಪ ಯೋಗ ಮಾಡಿಕೊಂಡಿರುವ ಕಾಂಗ್ರೆಸ್, ರಾಜಕೀಯ ಕಾರಣ ಕ್ಕಾಗಿ ಮುಸ್ಲಿಮರನ್ನು ಬೀದಿಗೆ ಇಳಿಸಿ, ರಾಜ್ಯದಲ್ಲಿ ಗಲಭೆ ಸೃಷ್ಟಿಸಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸಿಗರು ಹಿಂದುಗಳನ್ನು, ಮುಸ್ಲಿಮರನ್ನು ಬೇರೆ ಮಾಡುವುದಕ್ಕಾಗಿ ಈ ಕಾಯ್ದೆಯನ್ನು ಉಪಯೋಗಿಸಿ ಕೊಳ್ಳುತ್ತಿದ್ದಾರೆ. ಮುಸ್ಲಿಮರನ್ನು ದಾರಿತಪ್ಪಿಸು ತ್ತಿದ್ದಾರೆ. ಯಾವ ವಿಚಾರ ಮುಸ್ಲಿ ಮರಿಗೆ ಸಮಸ್ಯೆ ಆಗುವುದೇ ಇಲ್ಲವೋ, ಅದರಿಂದ ನಿಮಗೆ ಸಮಸ್ಯೆ ಆಗುತ್ತದೆ ಎಂದು ಹೇಳಿ ಅವರನ್ನು ಬೀದಿಗೆ ಇಳಿಸುತ್ತಿದ್ದಾರೆ.
ಮುಸ್ಲಿಮರನ್ನು ಬೀದಿಗೆ ಇಳಿಸಿ ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಕಾಂಗ್ರೆಸ್ ನೇರ ಕಾರಣವಾಗಿದೆ ಎಂದು ಕಿಡಿಕಾರಿದರು. ದೇಶ ವಿಭಜನೆ ಮಾಡಿ ಬ್ರಿಟಿಷರು ಯಶಸ್ವಿಯಾಗಿರಬಹುದು. ಆದರೆ, ಕಾಂಗ್ರೆಸಿಗರು ಈ ಕಾಯ್ದೆಯನ್ನು ಬಳಸಿಕೊಂಡು ಹಿಂದೂ, ಮುಸ್ಲಿಮರನ್ನು ದೂರ ಮಾಡಬೇಕು ಎಂಬ ಪ್ರಯತ್ನದಲ್ಲಿ ಸಂಪೂರ್ಣ ವಿಫಲರಾಗಲಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಯಾವೊಬ್ಬ ಮುಸ್ಲಿ ಮರಿಗೂ ತೊಂದರೆ ಆಗುವುದಿಲ್ಲ.
ಈ ಕಾಯ್ದೆ ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದಲ್ಲಿ ಧಾರ್ಮಿಕ ಕಾರಣಕ್ಕೆ ನೊಂದು, ಬೆಂದು, ಕಷ್ಟ ಅನುಭವಿಸಿ ವಾಪಸ್ ಭಾರತಕ್ಕೆ ಬಂದಿರುವ ಹಿಂದೂ, ಕ್ರಿಶ್ಚಿಯನ್, ಸಿಖ್, ಪಾರ್ಸಿ ಮೊದಲಾದವರಿಗೆ ಪೌರತ್ವ ನೀಡುತ್ತದೆ ಎಂದರು. ಈ ಕಾಯ್ದೆ ಬಗ್ಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಕೂಡ ಯೋಚಿ ಸಿದ್ದರು. ರಾಜಕೀಯಕ್ಕಾಗಿ ಈ ದೇಶ ಹಾಗೂ ರಾಜ್ಯದ ಮುಸ್ಲಿಮರನ್ನು ಎತ್ತಿಕಟ್ಟುವುದಕ್ಕೆ ಕಾಂಗ್ರೆಸ್ ಮಾಡುತ್ತಿರುವ ಕುತಂತ್ರವಿದು. ಈ ಕುತಂತ್ರ ಎಷ್ಟರ ಮಟ್ಟಿಗೆ ಕಾಂಗ್ರೆಸ್‌ಗೆ ಹೊಡತ ಬೀಳು ತ್ತದೆ ಎನ್ನುವುದು ಬರುವಂತಹ ದಿನಗಳಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.
ಅಡ್ರೆಸ್ ಇಲ್ಲದಂತಾಗುತ್ತದೆ: ಬಿಜೆಪಿಗೆ ಜಾರ್ಖಂಡ್ ಚುನಾವಣೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಫಲ ಬರಲಿಲ್ಲ. ದೇಶದಲ್ಲಿ ಬಿಜೆಪಿ ನಶಿಸುತ್ತಿದೆ ಎಂದು ಹೇಳಲಿಕ್ಕಾದರೂ ಕಾಂಗ್ರೆಸ್‌ಗೆ ಸ್ವಲ್ಪ ಧ್ವನಿ ಇದೆಯಲ್ಲವೇ, ಅದೇ ಆಶ್ಚರ್ಯ. ಇಡೀ ದೇಶದಲ್ಲಿ ಎಲ್ಲೂ ಕಾಂಗ್ರೆಸ್ ಇಲ್ಲ. ಎಲ್ಲೆಡೆ ನಿರ್ನಾಮವಾಗಿ ಹೋಗಿದ್ದಾರೆ. ನಶಿಸಿಹೋಗುತ್ತಿರುವ ಕಾಂಗ್ರೆಸ್ ಇನ್ನು ಮುಂದೆ ಅಡ್ರೆಸ್ ಇಲ್ಲದಂತಾಗಲಿದೆ ಎಂದು ಸಚಿವ ಈಶ್ವರಪ್ಪ ಲೇವಡಿ ಮಾಡಿದರು.
ತುಮಕೂರಿನಲ್ಲಿ ಅಪ್ಪನನ್ನು(ಎಚ್.ಡಿ. ದೇವೇಗೌಡ), ಮಂಡ್ಯದಲ್ಲಿ ಮಗನನ್ನು(ನಿಖೀಲ್ ಕುಮಾರಸ್ವಾಮಿ) ಗೆಲ್ಲಿಸಿಕೊಳ್ಳಲು ಆಗದಿದ್ದ ಕುಮಾರಸ್ವಾಮಿಯವರಿಗೆ ಇನ್ನೂ ಬುದ್ಧಿ ಬಂದಿಲ್ಲ ಎಂದರೆ ಏನು ಮಾಡುವುದು? ಅಡ್ರೆಸ್ ಎಲ್ಲಿದೆ ಎಂಬುದನ್ನು ಹುಡುಕಬೇಕು ಅಷ್ಟೆ, ಹುಡುಕೋಣ!
-ಕೆ.ಎಸ್.ಈಶ್ವರಪ್ಪ, ಸಚಿವ