Advertisement

ಶಾಂತಿಯುತ ರಾಜ್ಯದಲ್ಲಿ ಗಲಭೆ ನಿರ್ಮಾಣದ ಷಡ್ಯಂತ್ರ ನಡೆಯುತ್ತಿದೆ: ಈಶ್ವರಪ್ಪ

10:54 AM Apr 20, 2022 | Team Udayavani |

ಶಿವಮೊಗ್ಗ: ಶಾಂತಿಯಲ್ಲಿದ್ದ ರಾಜ್ಯವನ್ನು ಕೊಲೆ, ದೊಂಬಿ ಮೂಲಕ ಗಲಭೆ ನಿರ್ಮಾಣದ ಷಡ್ಯಂತ್ರ ನಡೆಯುತ್ತಿದೆ, ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಒಬ್ಬ ಮೌಲ್ವಿ ಪೊಲೀಸ್ ಜೀಪ್ ಮೇಲೆ ನಿಂತು ಪ್ರಚೋದನೆ ಕೊಡುತ್ತಾನೆ. ತಲೆಗಳನ್ನು ಕತ್ತರಿಸಿ, ರುಂಡಗಳನ್ನು ಬೇರೆ ಮಾಡಿ ಎಂದು ಪ್ರಚೋದಿಸುವ ಹೇಳಿಕೆ‌ ಕೊಡುತ್ತಾರೆ. ಕಾಂಗ್ರೆಸ್ ನಗರ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಮೌಲ್ವಿ ಪಕ್ಕದಲ್ಲಿ ನಿಂತು ಕಲ್ಲು ಹೊಡಿಯೋದು ನೋಡುತ್ತಿದ್ದಾರೆ. ಆಸ್ಪತ್ರೆ, ದೇವಾಲಯ, ಪೊಲೀಸ್ ತಲೆಗಳನ್ನು ಹುಡುಕಿ ಕಲ್ಲು ಹೊಡೆಯುತ್ತಾರೆ. ಅಲ್ಲಾ ಹು ಅಕ್ಬರ್ ಜೊತೆಗೆ ಆರ್ ಎಸ್ಎಸ್ ಮುರ್ದಾಬಾದ್ ಘೋಷಣೆಗಳನ್ನು ಕೂಗಿದ್ದಾರೆ. ಈ ರೀತಿಯ ಕಲ್ಲು ತೂರಾಟ ಮಾಡುವ ಪುಂಡರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕಿಡಿಕಾರಿದ್ದಾರೆ.

ಇಂತಹ ಘಟನೆಗಳನ್ನು ನೇರವಾಗಿ ಎದುರಿಸುವ ಶಕ್ತಿ ಹಿಂದೂ ಸಂಘಟನೆಗಳಿಗಿದೆ. ಅದರೆ, ನಾವು ಕಾನೂನು ಕೈಗೆ ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಇವರ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.

ಪ್ರಚೋದನೆ ನಂತರ ಮೌಲ್ವಿ ಹೇಡಿಯ ರೀತಿ ಓಡಿ ಹೋಗಿದ್ದಾನೆ. ಗುಂಡಾಗಿರಿಗೆ ಪ್ರಚೋದನೆ ಕೊಟ್ಟು ಓಡಿಹೋದ ರಾಷ್ಟ್ರದ್ರೋಹಿ ಮೌಲ್ವಿ ಬಂಧನಕ್ಕೆ ಒತ್ತಾಯಿಸುತ್ತೇನೆ ಎಂದರು.

ಇದನ್ನೂ ಓದಿ:ಹೆಣ್ಮಕ್ಕಳು ಸುಶಿಕ್ಷಿತರಾದರೆ ಕುಟುಂಬ ಚಿತ್ರಣವೇ ಬದಲು

Advertisement

ಕೆಜಿ ಹಳ್ಳಿ, ಡಿಜಿ ಹಳ್ಳಿ, ಶಿವಮೊಗ್ಗದ ಹರ್ಷ, ಚಂದ್ರು ಕೊಲೆಯಾಯಿತು. ಇದೀಗ ಹುಬ್ಬಳಿ ಘಟನೆ. ಈ ರೀತಿ ಕೊಲೆ, ದೊಂಬಿ ಮಾಡುವ ವ್ಯಕ್ತಿಗಳನ್ನು ಬಿಡಬಾರದು. ಸಿಸಿ ಟಿವಿ ಆಧರಿಸಿ, ಈಗಾಗಲೇ ಬಂಧನ ಮಾಡಲಾಗುತ್ತಿದೆ. ಗುಂಡಾ ಕಾಯ್ದೆ ಅಡಿ ಅವರನ್ನು ಬಂಧನ ಮಾಡಿ, ಗಡಿಪಾರು ಮಾಡಬೇಕು. ಕೊಲೆ, ದೊಂಬಿ ಮಾಡುವುದು, ಬೇಲ್ ಪಡೆದು ವಾಪಸ್ ಬರುವುದು ಅವರಿಗೆ ಅಭ್ಯಾಸ ಅಗಿದೆ. ಘಟನೆಗಳಿಗೆ ಕಾರಣರಾದ ವ್ಯಕ್ತಿ, ಸಂಘಟನೆ, ಪಕ್ಷದ ಬಗ್ಗೆ ಗಮನ ಹರಸಬೇಕು ಎಂದು ಹೇಳಿದರು.

ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಆಯ್ತು, ಇನ್ನೆಲ್ಲಿ ಗಲಭೆ ಮಾಡುತ್ತಾರೋ ಗೊತ್ತಾತ್ತಿಲ್ಲ, ಗಮನ ಹರಿಸಬೇಕು. ಇಷ್ಟೆಲ್ಲಾ ಘಟನೆ ನಡೆದರೂ ಕಾಂಗ್ರೆಸ್ ಖಂಡಿಸುವ ಕೆಲಸ ಮಾಡಿಲ್ಲ. ಕಲ್ಲಂಗಡಿ ಒಡೆದಾಗ ಎಲ್ಲರೂ ಬೊಬ್ಬೆ ಹಾಕಿದರು. ಪೊಲೀಸರ ತಲೆ ಒಡೆದರೂ ಇಂದು ಮಾತನಾಡುತ್ತಿಲ್ಲ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕುಮಾರಸ್ವಾಮಿ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಾ ಮುಸಲ್ಮಾನರು ರಾಷ್ಟ್ರದ್ರೋಹಿಗಳು ಎಂದು ನಾನು ಹೇಳುವುದಿಲ್ಲ. ಇಂತಹ ಕೃತ್ಯದಲ್ಲಿ ಭಾಗವಹಿಸಿದವರು ರಾಷ್ಟ್ರದ್ರೋಹಿಗಳು. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಮುಸಲ್ಮಾನರ ಓಲೈಕೆ ಮಾಡುವ ಕೆಲಸ ಮಾಡುತ್ತಿದೆ. ಇದನ್ನು ಇಡೀ ಹಿಂದೂ ಸಮಾಜ, ರಾಷ್ಟ್ರ ಭಕ್ತರು ಗಮನಿಸುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಅಧಿಕಾರದ ದಾಹಕ್ಕೆ ಕೊಲೆ, ದೊಂಬಿಗಳಾಗುತ್ತಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಸಿಎಂ ಈ ಬಗ್ಗೆ ಗಮನ ಹರಿಸಬೇಕು ಎಂದರು.

ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ, ದಿಂಗಾಲೇಶ್ವರ ಶ್ರೀಗಳು ಈಶ್ವರಪ್ಪ ನಿರಪರಾಧಿ ಎಂದು ಹೇಳಿದ್ದಾರೆ. ಮುಕ್ತರಾಗಿ ಹೊರಗೆ ಬರ್ತಾರೆ ಎಂದಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕಮಿಷನ್ ಆರೋಪದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ.10, 20, 40% ಎಂದು ಬಾಯಿಗೆ ಬಂದಂತೆ ಕಮಿಷನ್ ಬಗ್ಗೆ ಮಾತನಾಡುತ್ತಾರೆ. ಸಂತೋಷ್ ಪಾಟೀಲ್ ಸತ್ತ. ಅದಕ್ಕೆ ಯಾರು ಕಾರಣ. ಈಗ ತನಿಖೆ ನಡೆಯುತ್ತಿದೆ. ತನಿಖೆಯಾಗಿ ಸತ್ಯ ಹೊರಬರಲಿ. ನಾನು ಅದರ ಬಗ್ಗೆ ಮಾತನಾಡಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಬೇರೆ ಉದ್ಯೋಗವೇ ಇಲ್ಲ. ಒಂದು ಮುಸಲ್ಮಾನರ ತೃಪ್ತಿ ಪಡಿಸೋದು. ಇನ್ನೊಂದು ಕಮಿಷನ್ ಬಗ್ಗೆ ಮಾತನಾಡೋದು. ಬೆಳಿಗ್ಗೆಯಿಂದ ರಾತ್ರಿವರೆಗೂ ಇದೇ ಕೆಲಸ ಅವರು ಮಾಡೋದು. ಸೋತರೂ ಅವರಿಗೆ ಬುದ್ಧಿ ಬಂದಿಲ್ಲ. ಮುಂದಿನ ಚುನಾವಣೆಯಲ್ಲಿ ಅವರು ವಿರೋಧ ಪಕ್ಷದ ಸ್ಥಾನದಲ್ಲೂ ಇರಲ್ಲ ಎಂದ ಎಂದು ವ್ಯಂಗ್ಯವಾಡಿದ್ದಾರೆ.

ಜನಪರವಾದ ಕೆಲಸ ಮಾಡಿ, ಜನ ಒಪ್ಪಿಕೊಳ್ಳುತ್ತಾರೆ. ಅದನ್ನು ಬಿಟ್ಟು ಕೋಮುಗಲಭೆ ಸೃಷ್ಟಿಸಿ, ಅಧಿಕಾರ ಪಡೆಯುವ ಹವಣಿಕೆ ಬೇಡ. ಕೋಮುಗಲಭೆ ಉಂಟು ಮಾಡಿ, ಎಷ್ಟು ಜನ ಸಾಯೋಕೆ ಅವಕಾಶ ಮಾಡಿ ಕೊಡುತ್ತಿರಾ? ಇನ್ನೂ ಎಷ್ಟು ಜನ ಸಾಯಬೇಕು ಎಂದು ಪ್ರಶ್ನಿಸಿದ್ದಾರೆ.

ಗುತ್ತಿಗೆದಾರ ಕನಕಪುರದ ಕೆಂಪಣ್ಣ ಕಾಂಗ್ರೆಸ್ ಏಜೆಂಟ್. ಬೀದಿಯಲ್ಲಿ ಹೋಗೋ ದಾಸಯ್ಯ ಹೇಳಿದಕ್ಕೆಲ್ಲಾ ಸರ್ಕಾರ ಉತ್ತರ ಕೋಡೊಕೆ ಅಗುತ್ತಾ? ಕೋಮು ಗಲಭೆ ಸೃಷ್ಟಿಸುವುದು, ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಇಷ್ಟೇ ಅಗಿದೆ. ಇದನ್ನು ಕಂಟ್ರೋಲ್ ಮಾಡುವ ತಾಕತ್ತು ಸರ್ಕಾರಕ್ಕೆ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next