ಪಡುಬಿದ್ರಿ: ಕಾರ್ಕಳ ರಸ್ತೆಯ ಸ್ವರಾಜ್ ಪೆಟ್ರೋಲ್ ಪಂಪಿನಲ್ಲಿ ಪೆಟ್ರೋಲ್ ಹಾಕುವ ಕೆಲಸದಲ್ಲಿರುವ ನಿತೇಶ್ (32) ಅವರನ್ನು ಆ. 23ರಂದು ಗುಂಪೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹೊಡೆದಿದ್ದಲ್ಲದೆ, ಅಲ್ಲಿದ್ದ ಮಹಿಳಾ ಕೆಲಸಗಾರರನ್ನೂ ಬೆದರಿಸಿ, ಪಂಪಿಗೆ ಹಾನಿ ಮಾಡಿರುವ ಆರೋಪದಲ್ಲಿ ಕಂಚಿನಡ್ಕದ ಅಬ್ದುಲ್ ರಹೀಮ್, ಆತನ ಮಗ ಮೊಹಮ್ಮದ್ ಶಾನಿದ್, ಕನ್ನಂಗಾರಿನ ಮಸೂದ್, ಕಂಚಿನಡ್ಕದ ಸಿರಾಜ್ ಹಾಗೂ ಆಶೀರ್ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪೈಕಿ ಆಶೀರ್ ಹೊರತುಪಡಿಸಿ ಉಳಿದ ನಾಲ್ವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ರಹೀಮ್ ಸ್ಕೂಟರಿನಲ್ಲಿ ಬಂದು ಖಾಲಿ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿ ಕೊಡುವಂತೆ ಕೇಳಿದ್ದ. ಬಾಟಲಿ ಇಲ್ಲ ಎಂದಾಗ ಆರೋಪಿಯು ಡಸ್ಟ್‌ಬಿನ್‌ನಲ್ಲಿದ್ದ ಬಾಟಲಿಯೊಂದನ್ನು ಎತ್ತಿಕೊಂಡು ಬಂದು ಪೆಟ್ರೋಲ್ ತುಂಬಿಸುವಂತೆ ಹೇಳಿದ್ದಾನೆ. ಅದು ತೂತಾಗಿದ್ದು, ಅದರಲ್ಲಿ ಪೆಟ್ರೋಲ್ ತುಂಬಲು ಆಗುವುದಿಲ್ಲವೆಂದು ಹೇಳಿದ್ದಕ್ಕೆ ನಿತೇಶ್ ಮೇಲೆ ಹಲ್ಲೆ ಮಾಡಿದ್ದ.
ಬಳಿಕ ಸಂಜೆಯ ವೇಳೆ ಗುಂಪು ಕಟ್ಟಿಕೊಂಡು ಬಂದ ಆರೋಪಿಯು ಮಹಿಳಾ ಕೆಲಸಗಾರರನ್ನೂ ಅಟ್ಟಾಡಿಸಿಕೊಂಡು ಹೋಗುತ್ತಾ ಪ್ರೇಮಾ ಎಂಬವರನ್ನು ಆರೋಪಿತರು ಕೈಯಿಂದ ದೂಡಿದ್ದು, ಆಕೆ ತಪ್ಪಿಸಿಕೊಂಡು ಹಿಂಭಾಗದ ಶೌಚಾಲಯದಲ್ಲಿ ಅಡಗಿ ಕುಳಿತುಕೊಂಡಳು. ಬಳಿಕ ಸಿರಾಜ್ ಎಂಬಾತನು ಪಂಪಿನಲ್ಲಿ ಅಳವಡಿಸಲಾಗಿದ್ದ ಗಾಜಿಗೆ ಎಸೆದು ಹಾನಿ ಉಂಟು ಮಾಡಿದ್ದಾನೆ. ಇದೇ ವೇಳೆ ಸ್ಕೂಟಿಯಲ್ಲಿ ಬಂದಿದ್ದ ಮೊಹಮ್ಮದ್ ಶಾನಿದ್ ಎಂಬಾತನು ಕಚೇರಿಯ ಒಳಗೆ ನುಗ್ಗಿ ಸುಮನ್ಯ ಎಂಬಾಕೆಯನ್ನು ಹಿಡಿಯಲು ಹೋಗಿದ್ದು, ಆಕೆ ತಪ್ಪಿಸಿಕೊಂಡಳು. ಬಳಿಕ ಆರೋಪಿಗಳೆಲ್ಲರೂ ಸಿಬಂದಿಗೆ ಬೆದರಿಕೆ ಹಾಕಿದ್ದಲ್ಲದೆ, ಪಂಪಿಗೆ ಬೆಂಕಿ ಹಾಕಿ ಸುಡುವುದಾಗಿ ಬೆದರಿಸಿ ಹೋಗಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ನಿತೇಶ್ ಉಡುಪಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.