ಹೊಸದಿಲ್ಲಿ: “ನೀನು ಟ್ಯೂಷನ್ ಸೆಂಟರ್‌ನ ಕಸ ಗುಡಿಸಿ ನೆಲ ಸ್ವತ್ಛಗೊಳಿಸುವುದನ್ನು ಯಾರಿಗೂ ಹೇಳುವ ಅಗತ್ಯವಿಲ್ಲ. ಬೆಳಗ್ಗೆ ಬೇಗ ಬಂದು ಕೆಲಸ ಪೂರೈಸಿ ಹೋಗು. ಯಾರಿಗೂ ಇದು ತಿಳಿಯದು…’
ಹೀಗೆಂದು ತಮ್ಮ ಅಂಡರ್-16 ಪೂರ್ವದ ಪರಿಸ್ಥಿತಿಯನ್ನು ಹೇಳಿದವರು, ಕೆಕೆಆರ್ ತಂಡದ ಸಿಕ್ಸರ್ ಹೀರೋ ರಿಂಕು ಸಿಂಗ್. ಇದು ರಿಂಕು ತಂದೆ ಖಾನ್‌ಚಂದ್ ಸಿಂಗ್ ಮಗನಿಗೆ ಅಂದು ಹೇಳಿದ ದುಡಿಮೆಯ ಮಾರ್ಗೋಪಾಯ.
ಅವರದು 7 ಮಕ್ಕಳ ದೊಡ್ಡ ಕುಟುಂಬ. ಕಿತ್ತು ತಿನ್ನುವ ಬಡತನ. ಖಾನ್‌ಚಂದ್ ಅವರದು ಮನೆ ಮನೆಗೆ ಗ್ಯಾಸ್ ಸಿಲಿಂಡರ್ ವಿತರಿಸುವ ಉದ್ಯೋಗ. ತಿಂಗಳ ಆದಾಯ ಸುಮಾರು 10 ಸಾವಿರ ರೂ. ತಮ್ಮ ಮುಕುಲ್ ಕೂಡ ಗ್ಯಾಸ್ ಏಜೆನ್ಸಿ ಹೊಂದಿದ್ದಾರೆ. ಹಿರಿಯಣ್ಣ ಸೋನು ಇ-ರಿಕ್ಷಾ ಓಡಿಸುತ್ತಿದ್ದಾರೆ. ಅಮ್ಮನದು ಕೃಷಿ ಚಟುವಟಿಕೆ. ಇಂದಿಗೂ ಎರಡು ಕೋಣೆಯ ಮನೆಯಲ್ಲಿ ಇಷ್ಟೂ ಮಂದಿಯ ವಾಸ.
ಉತ್ತರಪ್ರದೇಶದ ಅಲೀಗಢದಲ್ಲಿ ಜನಿಸಿದ ರಿಂಕು ಸಿಂಗ್‌ಗೆ ಕ್ರಿಕೆಟ್ ಮೇಲೆ ವಿಪರೀತ ಸೆಳೆತ. ಆದರೆ ಆರ್ಥಿಕ ಸ್ಥಿತಿ ಶೋಚನೀಯ. ಹೀಗಾಗಿಯೇ ಟ್ಯೂಷನ್ ಸೆಂಟರ್‌ನ ನೆಲ ಒರೆಸುವ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ. ಇದನ್ನು ತಿರಸ್ಕರಿಸಿದಾಗ ತಂದೆಯಿಂದ ತಿಂದ ಏಟುಗಳೆಷ್ಟೋ!
“ನಾನು ಹೆಚ್ಚು ಓದಿದವನಲ್ಲ. ನಮ್ಮದು ಕೃಷಿ ಕುಟುಂಬ. ಬದುಕಿನಲ್ಲಿ ಮುಂದೆ ಬರಬೇಕಾದರೆ ನಾನು ಕ್ರಿಕೆಟ್ ಒಂದನ್ನೇ ಅವಲಂಬಿಸಬೇಕಿತ್ತು. ಇಂದು ಸಾರ್ಥಕಭಾವ ಕಾಣುತ್ತಿದ್ದೇನೆ. ನಾನು ಬಾರಿಸಿದ ಒಂದೊಂದು ಸಿಕ್ಸರ್ ಕೂಡ ನನ್ನ ಏಳಿಗೆಗಾಗಿ ತ್ಯಾಗ ಮಾಡಿದವರಿಗೆ ಅರ್ಪಿಸುತ್ತಿದ್ದೇನೆ’ ಎನ್ನುವಾಗ ರಿಂಕು ಕಣ್ಣಲ್ಲೇನೋ ಮಿಂಚು. ಇದಕ್ಕೂ ಹಿಂದಿನ ಆರ್‌ಸಿಬಿ ಎದುರಿನ ಪಂದ್ಯದಲ್ಲಿ 33 ಎಸೆತಗಳಿಂದ 46 ರನ್ ಬಾರಿಸಿದ ರಿಂಕು ಆಗಲೇ ಅಪಾಯದ ಸೂಚನೆ ನೀಡಿದ್ದರು.
Related Articles
ಅಂಡರ್-16, ಕಾಲೇಜು ಮಟ್ಟದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರಿಂಕು ರಣಜಿಗೆ ಆಯ್ಕೆಯಾದರು. ಇಲ್ಲಿನ ಯಶಸ್ಸು ಐಪಿಎಲ್ ಬಾಗಿಲು ತೆರೆಯಿತು. 2017ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 10 ಲಕ್ಷ ರೂ.ಗೆ ಇವರನ್ನು ಖರೀದಿಸಿತು. ಮುಂದಿನ ವರ್ಷ 80 ಲಕ್ಷ ರೂ.ಗೆ ಕೆಕೆಆರ್ ಪಾಲಾದರು. ಆದರೆ ಬಳಿಕ ಬಿಡುಗಡೆ ಮಾಡಿತು. 2022ರಲ್ಲಿ ಮತ್ತೆ 55 ಲಕ್ಷ ರೂ.ಗೆ ಖರೀದಿಸಿತು. ಈಗ ಕೆಕೆಆರ್‌ನ ಕೀ ಪ್ಲೇಯರ್.
ನಿಷೇಧವೂ ಎದುರಾಗಿತ್ತು!
ಹಾಂ… 2019ರಲ್ಲೊಮ್ಮೆ ರಿಂಕು ಸಿಂಗ್ ಬಿಸಿಸಿಐನಿಂದ ನಿಷೇಧಕ್ಕೂ ಒಳಗಾಗಿದ್ದರು. ಕಾರಣ, ಬಿಸಿಸಿಐ ಅನುಮತಿ ಪಡೆಯದೆ ವಿದೇಶಿ ಟಿ20 ಲೀಗ್ ಒಂದರಲ್ಲಿ ಆಡಿದ್ದು. ಈ 3 ತಿಂಗಳ ನಿಷೇಧದ ಬಳಿಕ ರಿಂಕು ಅವರಲ್ಲಿ ಇನ್ನಷ್ಟು ಹಠ ಮನೆಮಾಡಿಕೊಂಡಿತು. ಇದು ಅಹ್ಮದಾಬಾದ್ ಅಂಗಳದಲ್ಲಿ ಸ್ಫೋಟಗೊಂಡಿತು. ಈವರೆಗೆ 18 ಐಪಿಎಲ್ ಪಂದ್ಯಗಳಿಂದ 24.93ರ ಸರಾಸರಿಯಲ್ಲಿ 349 ರನ್ ಗಳಿಸಿದ್ದಾರೆ.
ನಿಮ್ಮಿಂದಲೇ ಪ್ರೇರಣೆ ಪಡೆದೆ…
ರಿಂಕು ಸಿಂಗ್ ರಣಜಿಯಲ್ಲಿ ಉತ್ತರಪ್ರದೇಶವನ್ನು ಪ್ರತಿನಿಧಿಸು ತ್ತಾರೆ. ಅವರಿಂದ ಬೆಂಡೆತ್ತಿಕೊಂಡ ಯಶ್ ದಯಾಳ್ ಕೂಡ ಉತ್ತರಪ್ರದೇಶದವರೇ. ಸಿಕ್ಸರ್ ಸಾಹಸದ ಬಳಿಕ ದಯಾಳ್ ಅವರನ್ನು ಸಮಾಧಾನಪಡಿಸುವ ಕೆಲಸವನ್ನೂ ಮಾಡಿದ್ದಾರೆ ರಿಂಕು ಸಿಂಗ್. “ಕ್ರಿಕೆಟ್‌ನಲ್ಲಿ ಇಂಥದ್ದೆಲ್ಲ ಸಂಭವಿಸುತ್ತಲೇ ಇರುತ್ತದೆ. ಕಳೆದ ವರ್ಷ ನೀನು ಅಮೋಘ ಪ್ರದರ್ಶನ ನೀಡಿದ್ದಿ. ನಾನು ಇದರಿಂದಲೇ ಪ್ರೇರಣೆ ಪಡೆದೆ…’ ಎನ್ನುತ್ತ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.
ಎಲ್ಲರಂತೆ ರಿಂಕು ಸಿಂಗ್ ಗುರಿಯೂ ಒಂದೇ-ಟೀಮ್ ಇಂಡಿಯಾವನ್ನು ಪ್ರತಿನಿಧಿಸುವುದು.
ರಿಂಕು ಬಳಸಿದ್ದು ರಾಣಾ ಬ್ಯಾಟ್!
ಪಂದ್ಯದ ಬಳಿಕ ಕೆಕೆಆರ್ ನಾಯಕ ನಿತೀಶ್ ರಾಣಾ ಸ್ವಾರಸ್ಯಕರ ಸಂಗತಿಯೊಂದನ್ನು ಬಿಚ್ಚಿಟ್ಟರು. ರಿಂಕು ಸಿಂಗ್ ರನ್ ಚೇಸ್ ವೇಳೆ ತನ್ನ ಬ್ಯಾಟ್ ಉಪಯೋಗಿಸಿದ್ದಾಗಿ ತಿಳಿಸಿದರು.
“ಈ ಪಂದ್ಯಕ್ಕಾಗಿ ನಾನು ಬ್ಯಾಟ್ ಬದಲಿಸಿದೆ. ಹಾಗಾದರೆ ನಿಮ್ಮ ಬ್ಯಾಟ್ ನಾನು ಬಳಸುತ್ತೇನೆ ಎಂಬುದಾಗಿ ರಿಂಕು ತಿಳಿಸಿದರು. ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಬ್ಯಾಟನ್ನು ಯಾರೋ ಈಚೆ ತಂದಿದ್ದರು. ನಿಜಕ್ಕಾದರೆ ಇದು ನನ್ನ ಲಕ್ಕಿ ಬ್ಯಾಟ್. ಯಾರಿಗೂ ನೀಡಲು ಇಷ್ಟ ಇರಲಿಲ್ಲ. ಮೊದಲೆರಡು ಪಂದ್ಯಗಳಲ್ಲಿ ಇದೇ ಬ್ಯಾಟ್‌ನಿಂದ ಆಡಿದ್ದೆ. ಕಳೆದ ಸೀಸನ್‌ನ ಸಯ್ಯದ್ ಮುಷ್ತಾಕ್ ಅಲಿ ಕೂಟದ ಎಲ್ಲ ಪಂದ್ಯಗಳಲ್ಲಿ, 4-5 ಐಪಿಎಲ್ ಪಂದ್ಯಗಳಲ್ಲಿ ಇದೇ ಬ್ಯಾಟ್ ಬಳಸಿದ್ದೆ…’ ಎಂದರು ನಿತೀಶ್ ರಾಣಾ. “ಕೊನೆಗೂ ರಿಂಕು ನನ್ನ ಬ್ಯಾಟ್‌ನಲ್ಲೇ ಆಡಿ ತಂಡಕ್ಕೆ ಅಸಾಮಾನ್ಯ ಜಯವೊಂದನ್ನು ತಂದಿತ್ತಿದ್ದಾರೆ. ಬ್ಯಾಟ್ ಲೈಟ್-ವೇಟ್ ಇದ್ದ ಕಾರಣ ರಿಂಕು ಇದನ್ನು ಬಯಸಿದ್ದರು. ಈ ಬ್ಯಾಟ್ ಇನ್ನು ನನ್ನದಲ್ಲ. ಇದು ರಿಂಕುಗೆ ನನ್ನ ಗಿಫ್ಟ್’ ಎಂಬುದಾಗಿ ರಾಣಾ ಹೇಳಿದರು.
ಗುಜರಾತ್-ಕೆಕೆಆರ್
– ಕೆಕೆಆರ್ ಅಂತಿಮ ಓವರ್‌ನಲ್ಲಿ ಅತ್ಯಧಿಕ ಮೊತ್ತದ ಗುರಿಯನ್ನು (29 ರನ್) ಯಶಸ್ವಿಯಾಗಿ ಬೆನ್ನಟ್ಟಿತು. ಹಿಂದಿನ ದಾಖಲೆ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಹೆಸರಲ್ಲಿತ್ತು. 2016ರ ಪಂಜಾಬ್ ಎದುರಿನ ಪಂದ್ಯದಲ್ಲಿ ಅದು 23 ರನ್ ಗುರಿಯನ್ನು ಬೆನ್ನಟ್ಟಿತ್ತು.
– ಯಶ್ ದಯಾಳ್ ಐಪಿಎಲ್‌ನ 2ನೇ ದುಬಾರಿ ಸ್ಪೆಲ್‌ಗೆ ಸಾಕ್ಷಿಯಾದರು (69 ರನ್). ಆರ್‌ಸಿಬಿ ಎದುರಿನ 2018ರ ಪಂದ್ಯದಲ್ಲಿ ಹೈದರಾಬಾದ್‌ನ ಬಾಸಿಲ್ ಥಂಪಿ 70 ರನ್ ನೀಡಿದ್ದು ದಾಖಲೆ.
– ಗುಜರಾತ್ ಮೊದಲ ಬಾರಿಗೆ 200 ರನ್ ಪೇರಿಸಿತು. ಕಳೆದ ವರ್ಷ ಹೈದರಾಬಾದ್ ವಿರುದ್ಧ 199 ರನ್ ಗಳಿಸಿದ್ದು ಈವರೆಗಿನ ದಾಖಲೆ ಆಗಿತ್ತು. ಗುಜರಾತ್ ತವರಿನ ಅಂಗಳದಲ್ಲಿ ಮೊದಲ ಸೋಲನುಭವಿಸಿತು.