Advertisement
ಕಿವಿ ಮೊರೆತದ ಪರಿಣಾಮವೇನು?ಕಿವಿ ಮೊರೆತವು ರೋಗಿಯ ಒಟ್ಟಾರೆ ಆರೋಗ್ಯ ಮತ್ತು ಸಾಮಾಜಿಕ ಸೌಖ್ಯವನ್ನು ಉಡುಗಿಸಿಬಿಡುವ ಒಂದು ಅನಾರೋಗ್ಯ ಸ್ಥಿತಿಯಾಗಿದೆ. ಮಧ್ಯಮ ಪ್ರಮಾಣದ ಕಿವಿ ಮೊರೆತವು ಕೂಡ ಕೆಲಸ ಕಾರ್ಯಗಳು ಮತ್ತು ಸಾಮಾಜಿಕ ಸ್ಥಿತಿಗತಿಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದಾಗಿದೆ. ಕಿವಿ ಮೊರೆತವನ್ನು ಹೊಂದಿರುವ ರೋಗಿಗಳು ಈ ಕೆಳಗಿನವುಗಳನ್ನು ಅನುಭವಿಸುತ್ತಾರೆ:
ಖನ್ನತೆ
ಉದ್ವಿಗ್ನತೆ
ಆಗಾಗ ಮನೋಸ್ಥಿತಿ ಬದಲಾವಣೆ
ನಿದ್ದೆ ಬಾರದಿರುವುದು, ಎಚ್ಚರಾಗುವುದು
ಕಿರಿಕಿರಿಗೊಳ್ಳುವುದು, ಸಿಟ್ಟಿಗೇಳುವುದು
ಏಕಾಗ್ರತೆಯ ಕೊರತೆ
ಜೀವನಶೈಲಿ ಬದಲಾವಣೆ ಕಿವಿ ಮೊರೆತವನ್ನು ಹೊಂದಿರುವ ರೋಗಿಗಳು ಅದನ್ನು ಅನುಭವಿಸದವರಿಗಿಂತ ಕಳಪೆ ಜೀವನ ಗುಣಮಟ್ಟವನ್ನು ಅನುಭವಿಸುತ್ತಾರೆ ಎಂಬುದಾಗಿ ಇತ್ತೀಚೆಗಿನ ಅಧ್ಯಯನಗಳು ತೋರಿಸಿಕೊಟ್ಟಿವೆ. ಕಿವಿ ಮೊರೆತವು ರೋಗಿಯ ದೈನಂದಿನ ಕಾರ್ಯಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ- ಅವರ ಉದ್ಯೋಗ, ನಿದ್ದೆ, ಕುಟುಂಬ ಮತ್ತು ಗೆಳೆಯ-ಗೆಳತಿಯರ ಜತೆಗೆ ಉಲ್ಲಸಿತರಾಗಿರುವುದಕ್ಕೆ ಅಡ್ಡಿಯಾಗಿ ಪರಿಣಮಿಸುತ್ತದೆ. ಜೀವನದಲ್ಲಿ ನಿಶಬ್ಧತೆಯ ಕೊರತೆಯಿಂದಾಗಿ (ಸದಾ ಕಿವಿಯಲ್ಲಿ ಶಬ್ಧ ಇರುವ ಕಾರಣ) ಅವರು ಖನ್ನತೆ ಮತ್ತು ಉದ್ವಿಗ್ನತೆಗೆ ಒಳಗಾಗುತ್ತಾರೆ. ಜತೆಗೆ, ಜತೆಗಿರುವವರಿಗೆ/ ಸುತ್ತಮುತ್ತಲಿನ ಜನರಿಗೆ ಇದು ಕಾಣಿಸದ ಮತ್ತು ಅನುಭವಕ್ಕೆ ಬಾರದ ಸ್ಥಿತಿಯಾದ್ದರಿಂದ ಕಿವಿ ಮೊರೆತವನ್ನು ಅನುಭವಿಸುತ್ತಿರುವವರು ತನ್ನ ಸಮಸ್ಯೆ ಯಾರಿಗೂ ಅರ್ಥವಾಗುತ್ತಿಲ್ಲ, ತನ್ನನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ, ತನ್ನಲ್ಲೇ ಏನೋ ಸಮಸ್ಯೆ ಇದೆ ಎಂಬುದಾಗಿ ತಪ್ಪು ತಿಳಿದುಕೊಳ್ಳುವ ಸಾಧ್ಯತೆಯಿದೆ. ಈ ಅಪಕಲ್ಪನೆಯು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದಾಗಿದ್ದು, ರೋಗಿಯ ದೈಹಿಕ ಮತ್ತು ಮಾನಸಿಕ ಸ್ವಾಸ್ಥ éದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ.
Related Articles
ಕಿವಿ ಮೊರೆತಕ್ಕೆ ಅತ್ಯುತ್ತಮವಾದ ಏಕೈಕ ಚಿಕಿತ್ಸೆ ಎಂಬುದು ಇಲ್ಲ. ಕಿವಿ ಮೊರೆತ ಹೊಂದಿರುವ ಯಾವುದೇ ಇಬ್ಬರು ಏಕಪ್ರಕಾರದವರಾಗಿರುವುದಿಲ್ಲ. ಹೀಗಾಗಿ ಚಿಕಿತ್ಸೆಯೂ ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ, ಕಿವಿ ಮೊರೆತಕ್ಕೆ ಕಾರಣವನ್ನು ಆಧರಿಸಿಯೂ ಬದಲಾಗುತ್ತದೆ.
Advertisement
ಕಿವಿ ಮೊರೆತಕ್ಕೆ ವೈದ್ಯಕೀಯೇತರ ನಿರ್ವಹಣೆಯನ್ನು ಆಡಿಯಾಲಜಿಸ್ಟ್ ಮುಖಾಂತರ ಒದಗಿಸಲಾಗುತ್ತದೆ. ಕಿವಿ ಮೊರೆತ ಉಂಟಾಗುವುದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ ಬಹುತೇಕ ಸಂದರ್ಭಗಳಲ್ಲಿ ಇದು ಪ್ರತ್ಯಕ್ಷವಾದ ಅಥವಾ ಪರೋಕ್ಷವಾದ ಶ್ರವಣ ಶಕ್ತಿ ನಷ್ಟದ ಜತೆಗೆ ಸಂಬಂಧವನ್ನು ಹೊಂದಿರುತ್ತದೆ. ಆದ್ದರಿಂದ ಹತ್ತಿರದ ಆಸ್ಪತ್ರೆಯಲ್ಲಿ ನುರಿತ ಆಡಿಯಾಲಜಿಸ್ಟ್ ಬಳಿ ನಿಮ್ಮ ಶ್ರವಣ ಶಕ್ತಿ ಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಒಳಿತು. ಸಮರ್ಪಕವಾದ ಚಿಕಿತ್ಸೆಯಿಂದ ಕಿವಿ ಮೊರೆತವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು (ಅಂದರೆ ಇನ್ನಷ್ಟು ಉಲ್ಬಣಿಸುವುದನ್ನು ತಡೆಯಬಹುದು) ಅಥವಾ ಕೆಲವೊಮ್ಮೆ ಕಾರಣವನ್ನು ಸರಿಯಾಗಿ ನಿಭಾಯಿಸಿದರೆ ಅದರಿಂದ ಮುಕ್ತಿಯನ್ನೂ ಪಡೆಯಬಹುದು. ಕಿವಿ ಮೊರೆತಕ್ಕೆ ಸದ್ಯ ಲಭ್ಯವಿರುವ ಎಲ್ಲ ಚಿಕಿತ್ಸಾ ವಿಧಾನಗಳೂ ಅದರ ಅನುಭವಕ್ಕೆ ಬರುವ ಹೊರೆಯನ್ನು ತಗ್ಗಿಸುವ ಮೂಲಕ ರೋಗಿಯು ಹಿತಕರವಾದ, ಬಾಧೆಯಿಲ್ಲದ ಮತ್ತು ಸಂತೃಪ್ತ ಜೀವನವನ್ನು ನಡೆಸುವ ಗುರಿಯನ್ನು ಹೊಂದಿವೆ.
ಕಿವಿ ಮೊರೆತಕ್ಕೆ ನಿಖರವಾದ ಉಪಶಮನವನ್ನು ಕಂಡುಹಿಡಿಯುವ ಕಾರ್ಯ ಪ್ರಗತಿಯಲ್ಲಿದ್ದು, ಸಾಕಷು³ ಪ್ರಗತಿಯನ್ನು ಸಾಧಿಸಲಾಗಿದೆ. ಆದರೆ ಕಿವಿ ಮೊರೆತದ ಅನುಭವವನ್ನು ನೂರಕ್ಕೆ ನೂರು ನಿವಾರಿಸುವ ಚಿಕಿತ್ಸೆ ಸದ್ಯಕ್ಕೆ ಲಭ್ಯವಿಲ್ಲ.
ಕಿವಿ ಮೊರೆತಕ್ಕೆ ತುತ್ತಾಗಿರುವ ರೋಗಿಗಳು ಅದನ್ನು ಯಶಸ್ವಿಯಾಗಿ ನಿಭಾಯಿಸುವುದಕ್ಕೆ ಸಹಾಯ ಮಾಡುವ, ಅದರ ಅನುಭವಕ್ಕೆ ಬರುವ ತೀಕ್ಷ್ಣತೆಯನ್ನು ಕಡಿಮೆ ಮಾಡುವ ಮತ್ತು ಕಿವಿ ಮೊರೆತ ಬಾಧೆಯನ್ನು ತಗ್ಗಿಸುವ ಅನೇಕ ಪರಿಣಾಮಕಾರಿ ವಿಧಾನಗಳು ಲಭ್ಯವಿವೆ. ಪ್ರಸ್ತುತ ಲಭ್ಯವಿರುವ ಚಿಕಿತ್ಸೆಗಳು ಕಿವಿ ಮೊರೆತಕ್ಕೆ ಅಂತರ್ನಿಹಿತ ಕಾರಣಗಳನ್ನು ಸರಿಪಡಿಸುವುದಿಲ್ಲ ಮತ್ತು ಮಿದುಳಿನಲ್ಲಿ ಕಿವಿ ಮೊರೆತದ ಸಂಕೇತಗಳನ್ನು ನಿವಾರಿಸುವುದಿಲ್ಲವಾದ್ದರಿಂದ ಅವುಗಳು ಸಮಸ್ಯೆಯನ್ನು “ಗುಣಪಡಿಸುವುದಿಲ್ಲ’. ಇದರ ಬದಲು ಅವು ಕಿವಿ ಮೊರೆತದಿಂದ ಏಕಾಗ್ರತೆಗೆ, ಭಾವನಾತ್ಮಕತೆಗೆ ಮತ್ತು ಗ್ರಹಣ ಶಕ್ತಿಯ ಮೇಲೆ ಉಂಟಾಗುವ ಪರಿಣಾಮಗಳನ್ನು ತಗ್ಗಿಸುತ್ತವೆ. ಇದರಿಂದ ಕಿವಿ ಮೊರೆತದ ಅನುಭವ ಇದ್ದರೂ ರೋಗಿಗಳು ಹೆಚ್ಚು ಉತ್ತಮವಾಗಿ ಬದುಕಲು, ಹೆಚ್ಚು ಸಂತೃಪ್ತರಾಗಿರಲು ಸಾಧ್ಯವಾಗುತ್ತದೆ.
ಪ್ರತಿ ರೋಗಿಗೂ ಭಿನ್ನವಾಗಿರುವ ಕಿವಿ ಮೊರೆತದ ಅಂಶಗಳನ್ನು ಆಧರಿಸಿ ಆಯಾ ರೋಗಿಗೆ ಅತ್ಯುತ್ತಮವಾದ ಚಿಕಿತ್ಸೆಯನ್ನು ಆಯ್ದುಕೊಳ್ಳಲಾಗುತ್ತದೆ. ಆದ್ದರಿಂದ ವೈಯಕ್ತಿಕ ಅಗತ್ಯಗಳನ್ನು ಆಧರಿಸಿ ಉತ್ತಮ ಚಿಕಿತ್ಸಾ ವಿಧಾನವನ್ನು ಸಂಯೋಜಿಸಲು ರೋಗಿಯು ತನ್ನ ಆರೋಗ್ಯ ಸೇವಾ ಪೂರೈಕೆದಾರರ ಜತೆಗೆ ಕೂಡಿ ಕೆಲಸ ಮಾಡಬೇಕಾಗುತ್ತದೆ.
ಬಹುತೇಕ ಪ್ರಕರಣಗಳಲ್ಲಿ ತನಗಿರುವ ಅನಾರೋಗ್ಯ ಸ್ಥಿತಿಯ ಬಗ್ಗೆ ರೋಗಿ ಅರಿವನ್ನು ಬೆಳೆಸಿಕೊಳ್ಳುವುದು ಸಾಕಷ್ಟು ನೆರವಾಗುತ್ತದೆ. ಜನಸಾಮಾನ್ಯರಲ್ಲಿ ಕಿವಿ ಮೊರೆತದ ಬಗ್ಗೆ ಅರಿವು ಮೂಡಿಸಿ ಮಾಹಿತಿ ಒದಗಿಸುವುದು ಈ ಲೇಖನದ ಉದ್ದೇಶವಾಗಿದೆ.
ಕೆಎಂಸಿಯಲ್ಲಿ ಉಚಿತ ತಪಾಸಣ ಶಿಬಿರಫೆಬ್ರವರಿ 3ರಿಂದ 9ರ ತನಕ ಒಂದು ವಾರವನ್ನು “ಅಂತಾರಾಷ್ಟ್ರೀಯ ಕಿವಿ ಮೊರೆತ ಸಪ್ತಾಹ’ವನ್ನಾಗಿ ಆಚರಿಸಲಾಗುತ್ತಿದೆ. ಈ ಆಚರಣೆಯ ಹಿನ್ನೆಲೆಯಲ್ಲಿ ಕೆಎಂಸಿ ಆಸ್ಪತ್ರೆಯ ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗದಲ್ಲಿ ಉಚಿತ ಶ್ರವಣ ಶಕ್ತಿ ಮತ್ತು ಕಿವಿ ಮೊರೆತ ತಪಾಸಣ ಶಿಬಿರವನ್ನು ಫೆಬ್ರವರಿ 3ರಿಂದ 8ರ ವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಅಪರಾಹ್ನ 4ರ ವರೆಗೆ ಏರ್ಪಡಿಸಲಾಗಿದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಿಟಿಸಿ ಕಟ್ಟಡ (ಮಹಿಳೆಯರು ಮತ್ತು ಮಕ್ಕಳ ವಿಭಾಗದ ಬಳಿ)ದ ಮೂರನೇ ಮಹಡಿಯಲ್ಲಿರುವ ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗವನ್ನು ಸಂಪರ್ಕಿಸಿ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಡಾ| ಹರಿಪ್ರಕಾಶ್ ಪಿ.,
ಹರಿಣಿ ವಾಸುದೇವನ್ ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ