Advertisement
ಸಂಸದ ನಳಿನ್ ಕುಮಾರ್ ಕಟೀಲು ಅವರ ಕಚೇರಿಯಲ್ಲಿ ಬುಧವಾರ ಈ ಯೋಜನೆಯ ರೂಪುರೇಷೆ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಲಹೆಗಾರ ಸಂಸ್ಥೆಯಿಂದ ಸಂಸದರು ಮಾಹಿತಿ ಪಡೆದುಕೊಂಡರು. ಮೂರು ಹಂತಗಳಲ್ಲಿ ಈ ಯೋಜನೆಯು ಅನುಷ್ಠಾನಗೊಳ್ಳಲಿದೆ. ಯೋಜನೆಯ ಸಲಹೆಗಾರ ಸಂಸ್ಥೆ ಸ್ತೂಪ್ ಕನ್ಸಲ್ಟೆಂಟ್ಸ್‌ನ ರಾಜೀವ್ ಮಾತನಾಡಿ, ಮೊದಲ ಹಂತ ಮೂಲ್ಕಿಯ ಪಡುಪಣಂಬೂರು ಬಳಿಯಿಂದ ಪ್ರಾರಂಭಗೊಂಡು ಕಿನ್ನಿಗೋಳಿ ಮೂಲಕವಾಗಿ ಕಟೀಲಿಗೆ ಬರಲಿದೆ. ಕಿನ್ನಿಗೋಳಿಯಲ್ಲಿ ಪೇಟೆಗೆ ತೊಂದರೆಯಾಗದಂತೆ ಸುಮಾರು 1.5 ಕಿ.ಮೀ. ಉದ್ದದ ಫ್ಲೈಓವರ್ ಬೇಕಾಗಬಹುದು. ಮೂರುಕಾವೇರಿ ಜಂಕ್ಷನ್‌ನಲ್ಲಿ ಬಲಕ್ಕೆ ಹೊರಳಿ ರಸ್ತೆ ಮುಂದುವರಿಯಲಿದೆ. ಕಟೀಲಿನಲ್ಲಿ ಪ್ರತ್ಯೇಕ ಸೇತುವೆ ನಿರ್ಮಿಸಬೇಕಿದೆ. ಬಜಪೆಯಲ್ಲಿ ಫ್ಲೈಓವರ್ ಇರಲಿದೆ. ಅಲ್ಲಿಂದ ರಸ್ತೆಯು ಕೈಕಂಬಕ್ಕೆ ಬಂದು ಸೇರಲಿದೆ. ಕೈಕಂಬದಲ್ಲಿ ಎನ್‌ಎಚ್ 169ರ ಮೇಲ್ಸೇತುವೆಯೂ ಇರಲಿದೆ ಎಂದರು.
ಎರಡನೇ ಹಂತದಲ್ಲಿ ಅಡೂರಿನಿಂದ ಪ್ರಾರಂಭಗೊಂಡು ಪೊಳಲಿ ಮೂಲಕ ಬಿ.ಸಿ.ರೋಡ್‌ನ ಹೊಸ ಸೇತುವೆಯ ಬಳಿ ಎನ್‌ಎಚ್ 66ಕ್ಕೆ ಟ್ರಂಪೆಟ್ ಇಂಟರ್‌ಚೇಂಜ್ ಶೈಲಿಯಲ್ಲಿ ಸೇರ್ಪಡೆಗೊಳ್ಳಲಿದೆ. ಈ ಹಂತದಲ್ಲಿ ರಸ್ತೆ ಎನ್‌ಎಚ್ 264ನ್ನು ಹಾಯುವಲ್ಲಿ ಅಂಡರ್ ಪಾಸ್ ನಿರ್ಮಿಸಬೇಕಾಗುತ್ತದೆ. ಮೂರನೇ ಹಂತವು ಮೆಲ್ಕಾರ್‌ನಿಂದ ಆರಂಭವಾಗಿ ಮುಡಿಪುವಿಗೆ ಬರಲಿದೆ. ಆದರೆ ಈಗಿರುವ ಮುಡಿಪು ಕ್ರಾಸ್‌ಗೆ ಮೊದಲೇ ಇರುವ ಗುಳಿಗದ್ದೆ ಅರ್ಕಾನ ಎಂಬ ಕಚ್ಚಾ ರಸ್ತೆಯನ್ನೇ ಬೈಪಾಸ್ ರಸ್ತೆಗೆ ಬಳಸಿಕೊಳ್ಳುವ ಮೂಲಕ ವೆಚ್ಚ ಇಳಿಕೆ ಮಾಡಬಹುದು, ಅಲ್ಲಿಂದ ರಸ್ತೆ ತೊಕ್ಕೊಟ್ಟು ಅಥವಾ ಕೋಟೆಕಾರಿಗೆ ಬಂದು ಸೇರಬಹುದು ಎಂದವರು ಹೇಳಿದರು.
Related Articles
ಈ ವರ್ತುಲ ರಸ್ತೆಯ ಉದ್ದ ಒಟ್ಟು 91 ಕಿ.ಮೀ. ಆದರೂ, ಅದರಲ್ಲಿ ರಾಷ್ಟ್ರೀಯ ಹೆದ್ದಾರಿ 169 ಅಗಲೀಕರಣದ ಭಾಗ, ಬಿ.ಸಿ.ರೋಡ್-ಅಡ್ಡಹೊಳೆ ಕಾಂಕ್ರೀಟ್ ಚತುಷ್ಪಥ ಭಾಗವೂ ಬರುವುದರಿಂದ ಅದನ್ನು ಬಿಟ್ಟು ಸುಮಾರು 74 ಕಿ.ಮೀ. ಮಾತ್ರವೇ ಅಭಿವೃದ್ಧಿ ಪಡಿಸಬೇಕಾಗುತ್ತದೆ. ಹಾಲಿ ಇರುವ ರಸ್ತೆಯನ್ನೇ ಆದಷ್ಟೂ ಬಳಸಿಕೊಳ್ಳಲಾಗುವುದು, ಆದರೆ ಜನದಟ್ಟಣೆ, ಜನವಸತಿ ಪ್ರದೇಶ, ವಾಣಿಜ್ಯ ಪ್ರದೇಶ ಹೆಚ್ಚಿರುವಲ್ಲಿ ಮಾತ್ರವೇ ಫ್ಲೈಓವರ್ ಅಥವಾ ಅಂಡರ್ ಪಾಸ್ ನಿರ್ಮಿಸಲಾಗುವುದು. ಕನಿಷ್ಠ ಭೂಸ್ವಾಧೀನವಾಗುವ ರೀತಿಯಲ್ಲಿ ಈ ರಸ್ತೆ ನಿರ್ಮಾಣಗೊಳ್ಳಲಿದೆ ಎಂದರು.
ಈಗಿರುವ ರಸ್ತೆ ಇಂಡಿಯನ್ ರೋಡ್ ಕಾಂಗ್ರೆಸ್‌ನ ಗುಣಮಟ್ಟದ ಮಾದರಿಯಲ್ಲಿಲ್ಲ. ಅಲ್ಲದೆ ಅದಕ್ಕೆ ಯಾವುದೇ ಜ್ಯಾಮಿಟ್ರಿಯೂ ಇಲ್ಲದ ಕಾರಣ ಹಲವೆಡೆ ಸುಧಾರಣೆಗೊಳಪಡಿಸ ಬೇಕಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಲಭ ಸಂಪರ್ಕ ಸಾಧ್ಯ ವಾಗುವ ರೀತಿಯಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ರಿಂಗ್ ರಸ್ತೆ ವಿಮಾನ ನಿಲ್ದಾಣದ ಮುಂಭಾಗ ದಲ್ಲೇ ಹಾದು ಹೋಗ ಲಿದ್ದು ಇದರಿಂದ ಆ ಭಾಗದಲ್ಲಿನ ಸಂಚಾರಿ ದಟ್ಟಣೆ ಹಗುರ ಗೊಳ್ಳುವ ನಿರೀಕ್ಷೆ ಇದೆ. ಎಲ್ಲೆಲ್ಲಿ ಆವಶ್ಯಕವೋ ಅಲ್ಲೆಲ್ಲ ಅಂಡರ್ ಪಾಸ್ ಅಥವಾ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದವರು ಹೇಳಿದರು. ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯಕ್ ಉಳಿಪಾಡಿ ಉಪಸ್ಥಿತರಿದ್ದರು.
Advertisement
2021ಕ್ಕೆ ರಾಷ್ಟ್ರೀಯ ಹೆದ್ದಾರಿ ಕಾರ್ಯ ಪೂರ್ಣ ಗುರಿಕೇಂದ್ರ ಸರಕಾರದ ನಿಯಮಾನುಸಾರ ಎಲ್ಲೆಲ್ಲಿ ಭೂಸ್ವಾಧೀನ ಬೇಕಾಗುತ್ತದೋ ಅಲ್ಲಿ ಅಗತ್ಯ ಪರಿಹಾರ ನೀಡಿ ಭೂಸ್ವಾಧೀನ ಕೈಗೊಳ್ಳಲಾಗುವುದು. 2021ರ ವೇಳೆಗೆ ಈ ಹೆದ್ದಾರಿ ಕಾರ್ಯ ಮುಗಿಯಬೇಕು ಎನ್ನುವುದು ನಮ್ಮ ಲೆಕ್ಕಾಚಾರ. ಇದಕ್ಕಾಗಿ ಎರಡೂವರೆ ವರ್ಷ ಸಮಯ ನಿಗದಿಪಡಿಸಲಾಗಿದೆ. ಇದರ ಜತೆಗೆ ಭಾರತ್ ಮಾಲಾ ಯೋಜನೆಯಡಿ ಬಿ.ಸಿ.ರೋಡ್-ಸುರತ್ಕಲ್ ಮಧ್ಯೆ ಷಟ್ಪಥ ನಿರ್ಮಾಣದ ಬಗ್ಗೆಯೂ ಡಿಪಿಆರ್ ಕೆಲಸ ನಡೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ಷಟ್ಪಥ ರಸ್ತೆ ಬಳಿಕ ಟೋಲ್‌ಗೇಟ್ ವಿಲೀನ
ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಬಿ.ಸಿ.ರೋಡ್‌ನಿಂದ ಸುರತ್ಕಲ್ ಮುಕ್ಕವರೆಗೆ ಷಟ್ಪಥ ರಸ್ತೆ ಕಾಮಗಾರಿ ಪ್ರಕ್ರಿಯೆ ಸಂಪೂರ್ಣಗೊಂಡು ಟೆಂಡರ್ ಹಂತದಲ್ಲಿದೆ. ಬಿ.ಸಿ.ರೋಡ್‌ನಿಂದ ಗುಂಡ್ಯ, ಬೆಂಗಳೂರು ತನಕ ಹೆದ್ದಾರಿ ವಿಸ್ತರಣೆ, ಕಾಂಕ್ರಿಟೀಕರಣ ನಡೆಯಲಿದ್ದು ಬಳಿಕ ಇಲ್ಲಿನ ಟೋಲ್ ಗೇಟ್‌ಗಳು ವಿಲೀನವಾಗುವ ಸಾಧ್ಯತೆಯಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು. ಬುಧವಾರ ಸುರತ್ಕಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರತ್ಕಲ್ ಟೋಲ್‌ಗೇಟ್ ಟೆಂಡರ್ ಅವಧಿ ಇನ್ನೂ ಇದ್ದು ಕಾನೂನು ಪ್ರಕಾರ ನಡೆಯುತ್ತಿದೆ ಏಕಾಏಕಿ ನಿಲ್ಲಿಸಲು ಸಾಧ್ಯವಿಲ್ಲ. ಕುಂದಾಪುರ – ತಲಪಾಡಿ ನಡುವಣ ರಸ್ತೆ ನವಯುಗ್ ಮಾಡಿರುವುದರಿಂದ ಎರಡೂ ಕಡೆ ಟೋಲ್‌ಗೇಟ್ ಗುತ್ತಿಗೆ ನಿರ್ವಹಣೆಯೂ ಬೇರೆಯಿದೆ ಎಂದರು. ಸೇತುವೆಗಳ ಪರೀಕ್ಷೆಗೆ ಎನ್‌ಐಟಿಕೆಗೆ ಮನವಿ
ಹಳೆಯ ಸೇತುವೆಗಳು ದುಃಸ್ಥಿತಿಯ ಹಂತದಲ್ಲಿದ್ದು ಇದರ ಸಾಮರ್ಥ್ಯದ ಕುರಿತಾಗಿ ಸಮರ್ಪಕ ವರದಿ ನೀಡುವಂತೆ ಸುರತ್ಕಲ್ ಎನ್‌ಐಟಿಕೆ ಸಂಸ್ಥೆಯನ್ನು ಕೇಳಿಕೊಳ್ಳಲಾಗಿದೆ. ವಿಮಾನ ನಿಲ್ದಾಣ ವ್ಯಾಪ್ತಿಯಲ್ಲೂ ಗುಡ್ಡ ಜರಿತ ಸಮಸ್ಯೆಯಾಗಿದ್ದು ಈ ಕುರಿತೂ ಗಂಭೀರವಾಗಿ ಚಿಂತಿಸಲಾಗಿದೆ. ಮಳೆಗಾಲ ಮುಗಿದ ಕೂಡಲೇ ಗುರುಪುರ ಸೇತುವೆ ಕಾಮಗಾರಿ ಆರಂಭಗೊಳ್ಳಲಿದೆ. ಅಲ್ಲಿಯವರೆಗೆ ಸಂಚಾರಕ್ಕೆ ಯೋಗ್ಯವಾಗಿಡುವ ಕೆಲಸ ನಡೆಯಲಿದೆ ಎಂದರು. ಶಾಸಕ ಡಾ| ವೈ. ಭರತ್ ಶೆಟ್ಟಿ, ಗಣೇಶ್ ಹೊಸಬೆಟ್ಟು, ಪೂಜಾ ಪೈ, ಗುಣಶೇಖರ ಶೆಟ್ಟಿ, ಸುಮಿತ್ರಾ ಕರಿಯಾ, ಅಶೋಕ ಕೃಷ್ಣಾಪುರ ಉಪಸ್ಥಿತರಿದ್ದರು.