ರಾಯಚೂರು: ಜನರಲ್ಲಿ ಕಾಲಕ್ರಮೇಣ ಕೋವಿಡ್ ಸೋಂಕಿನ ಬಗೆಗಿನ ಗಂಭೀರತೆ ಕುಗ್ಗುತ್ತಿದ್ದರೂ, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಕ್ರಮಗಳು ಹೆಚ್ಚಾಗುತ್ತಿವೆ. ಈಗ ಇಲ್ಲಿನ ರಾಯಚೂರು ವೈದ್ಯಕೀಯ ವಿಜ್ಞಾನ ಕೇಂದ್ರ (ರಿಮ್ಸ್) ಕೊರೊನಾ ಪರೀಕ್ಷೆ ಸಾಮರ್ಥ್ಯವನ್ನು ಎರಡು ಪಟ್ಟು ಹೆಚ್ಚಿಸಿಕೊಂಡಿದೆ.
ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಸೋಂಕಿತರ ಸಂಖ್ಯೆ ನಿತ್ಯ 100ರ ಗಡಿ ದಾಟುತ್ತಲೇ ಬಂದಿದೆ. ಕೆಲವೊಮ್ಮೆ ಆ ಸಂಖ್ಯೆ 200ರ ಗಡಿ ದಾಟಿದೆ. ಇಂಥ ವೇಳೆ ಸೋಂಕಿನ ಪತ್ತೆ ಹಚ್ಚುವ ಸಾಮರ್ಥ್ಯ ಕೂಡ ಹೆಚ್ಚಿಸುವ ಅನಿವಾರ್ಯತೆ ಇತ್ತು. ಇದಕ್ಕೆ ಪೂರಕ ಎನ್ನುವಂತೆ ಅಜೀಂ ಪ್ರೇಮ್‌ಜಿ ಫೌಂಡೇಶನ್ ರಿಮ್ಸ್‌ಗೆ ಮತ್ತೂಂದು ಅಟೋಮ್ಯಾಟಿಕ್ ಆರ್‌ಎನ್ ಎಕ್ಸಾಕ್ಟರ್ ಹಾಗೂ ಪಿಸಿಆರ್ ಯಂತ್ರಗಳನ್ನು ದೇಣಿಗೆ ನೀಡಿದೆ.
ಇದರಿಂದ ಪರೀಕ್ಷಾ ಸಾಮರ್ಥ್ಯ ಈಗ ದುಪ್ಪಟ್ಟಾಗಿದೆ. ಈ ಯಂತ್ರಗಳು ಅಂದಾಜು 35-40 ಲಕ್ಷ ರೂ. ಮೌಲ್ಯದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.
180 ಮಾದರಿ ಪರೀಕ್ಷೆ: ರಿಮ್ಸ್‌ನಲ್ಲಿ ಈವರೆಗೆ 35,068 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಕೆಲವೊಂದನ್ನು ಬಳ್ಳಾರಿ, ಇನ್ನೂ ಕೆಲ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಆರೋಗ್ಯ ಇಲಾಖೆ ರ್ಯಾಪಿಡ್ ಆಂಟಿಜನ್ ಪರೀಕ್ಷೆ ಮಾಡುತ್ತಿದ್ದರೂ ನಿತ್ಯ ನೂರಾರು ಮಾದರಿಗಳನ್ನು ಪರೀಕ್ಷೆ ಮಾಡಬೇಕಾದ ಅನಿವಾರ್ಯತೆ ಇದೆ. ಸೋಂಕು ಸಂಪರ್ಕದಿಂದ ಹರಡುವುದರಿಂದ ಆದಷ್ಟು ತ್ವರಿತಗತಿಯಲ್ಲಿ ವೈರಸ್ ಪತ್ತೆ ಹಚ್ಚುವುದು ಜಿಲ್ಲಾಡಳಿತದ ಮುಂದಿದ್ದ ಸವಾಲಾಗಿತ್ತು. ಈ ಮುಂಚೆ ಏಕಕಾಲಕ್ಕೆ 90-100 ಮಾದರಿಗಳನ್ನು ಮಾತ್ರ ಪರೀಕ್ಷೆ ಮಾಡಲಾಗುತ್ತಿತ್ತು. ಇಡೀ ದಿನ ನಿರಂತರ ಪರೀಕ್ಷೆ ಮಾಡಿದರೂ 300-350 ಮಾದರಿಗಳನ್ನು ಪರೀಕ್ಷಿಸಬಹುದಿತ್ತು.
ಆದರೆ, ಕಳೆದ 10 ದಿನಗಳಿಂದ ರಿಮ್ಸ್‌ನಲ್ಲಿ ಏಕಕಾಲಕ್ಕೆ 180 ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. ಈಗ 950 ಗುರಿ ನೀಡಿದ್ದು, ಎರಡು ಯಂತ್ರಗಳು ಇರುವ ಕಾರಣ ಮಾಡಬಹುದು ಎನ್ನುತ್ತಾರೆ ರಿಮ್ಸ್ ವೈದ್ಯಕೀಯ ಸಿಬ್ಬಂದಿ.
ಪರೀಕ್ಷೆ ಹೆಚ್ಚಿಸಲು ಡಿಸಿ ಸೂಚನೆ: ಈಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂವಾದ ನಡೆಸಿ ಮುಂದಿನ ಮೂರು ತಿಂಗಳು ಕೊರೊನಾ ವಿಚಾರದಲ್ಲಿ ಕಟ್ಟೆಚ್ಚರ ವಹಿಸಬೇಕಿದೆ. ಆಯಾ ಜಿಲ್ಲಾಡಳಿತಗಳು ಹೆಚ್ಚು ಜಾಗೃತಿ ವಹಿಸಬೇಕು ಎಂದು ಸೂಚಿಸಿದ್ದರು. ಇದೇ ವಿಚಾರವಾಗಿ ಜಿಲ್ಲೆಯ ಎಲ್ಲ ಅ ಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದ ಡಿಸಿ ಆರ್. ವೆಂಕಟೇಶಕುಮಾರ, ಕೊರೊನಾ ಮಾದರಿಗಳ ಪರೀಕ್ಷೆ ಮೂರು ಪಟ್ಟು ಹೆಚ್ಚಿಸುವಂತೆ ತಿಳಿಸಿದ್ದರು. ಪ್ರಾಥಮಿಕ ಪತ್ತೆ ಕಾರ್ಯ ಚುರುಕುಗೊಳ್ಳಬೇಕು. ಶಂಕಿತರ ಪರೀಕ್ಷೆ ಹೆಚ್ಚಾದಾಗ ಮಾತ್ರ ಸೋಂಕಿನ ನಿಯಂತ್ರಣ ಸಾಧ್ಯ ಎಂದು ತಿಳಿಸಿದ್ದರು. ಅದರಂತೆ ಈಗ ರಿಮ್ಸ್‌ನಲ್ಲಿ ಪರೀಕ್ಷೆ ಪ್ರಮಾಣ ಹೆಚ್ಚಾಗಿದೆ.