ಬಾಲಿವುಡ್‌ನ ಗತಕಾಲದ ನಾಯಕಿಯರೆಲ್ಲ ಒಬ್ಬೊಬ್ಬರಾಗಿ ಮರಳಿ ಬರುತ್ತಿದ್ದಾರೆ. ರಾಣಿ ಮುಖರ್ಜಿ, ಮನೀಷಾ ಕೊಯಿರಾಲ, ತಬೂ ಸಾಲಿಗೆ ಹೊಸ ಸೇರ್ಪಡೆಯಾಗಿ ಈಗ ರೈಮಾ ಸೇನ್ ಹೆಸರು ಕೇಳಿ ಬರುತ್ತಿದೆ. ಉಳಿದ ಹಳೆ ನಾಯಕಿಯರೆಲ್ಲ ಒಂದೊಂದು ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸುತ್ತಿದ್ದರೆ ರೈಮಾ ಮಾತ್ರ ಒಂದೇಟಿಗೆ ಐದು ಚಿತ್ರಗಳಲ್ಲಿ ನಟಿಸಿದ್ದಾಳೆ. ಎಲ್ಲ ಚಿತ್ರಗಳ ಶೂಟಿಂಗ್ ಮುಗಿದಿದೆ.
ಐದೂ ಚಿತ್ರಗಳು ಈ ವರ್ಷವೇ ಬಿಡುಗಡೆಯಾಗಲಿವೆ. ಈ ಪೈಕಿ ಒಂದು ಲವ್‌ಸ್ಟೋರಿಯಾಗಿದ್ದು, ಇದಕ್ಕೆ ಪ್ರತೀಕ್ ಬಬ್ಬರ್ ನಾಯಕ. ಇನ್ನೊಂದು ಕುನ್ಹಾಲ್ ರಾಯ್ ಕಪೂರ್ ಜತೆಗೆ ನಟಿಸಿರುವ ಕಾಮೆಡಿ ಚಿತ್ರ. ಮತ್ತೂಂದು ಚಿತ್ರದಲ್ಲಿ ಸಂಶಯಿತ ಉಗ್ರನ ಹೆಂಡತಿಯಾಗಿ ಗ್ಲಾಮರ್ ರಹಿತ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಉಳಿದೆರಡು ಚಿತ್ರಗಳ ಪೈಕಿ ಒಂದು ಥ್ರಿಲ್ಲರ್ ಮತ್ತು ಇನ್ನೊಂದು ಸೋಷಿಯಲ್ ಎಂದು ರೈಮಾಳೇ ವಿವರಿಸಿದ್ದಾಳೆ.
ಇಷ್ಟಕ್ಕೂ ರೈಮಾ ಬಾಲಿವುಡ್‌ನಿಂದ ದೂರವಾಗಿ ಹೆಚ್ಚು ಸಮಯವೇನೂ ಆಗಿಲ್ಲ. ಮೂರು ವರ್ಷದ ಹಿಂದೆ ಚಿಲ್ಡ್ರನ್ ಆಫ್ ವಾರ್ ಎಂಬ ಚಿತ್ರದಲ್ಲಿ ನಟಿಸಿದ್ದಳು. ಮರುವರ್ಷ ಬಾಲಿವುಡ್ ಡೈರೀಸ್ ಚಿತ್ರದಲ್ಲಿ ಚಿಕ್ಕದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಉಳಿದಂತೆ ಅವಳು ಹುಟ್ಟೂರಾದ ಕೊಲ್ಕತಾದಲ್ಲಿದ್ದಳು. ಬಂಗಾಲಿ ಚಿತ್ರಗಳಲ್ಲಿ ಆರಾಳ ಅವಕಾಶ ಇದ್ದ ಕಾರಣ ಬಾಲಿವುಡ್‌ನಲ್ಲಿ ಅವಕಾಶ ಇಲ್ಲದಿದ್ದರೂ ಅದೊಂದು ಕೊರತೆಯಾಗಿ ಕಾಣಿಸಿಲಿಲ್ಲವಂತೆ. ಇದೀಗ ಉತ್ತಮ ಸ್ಕ್ರಿಪ್ಟ್ಗಳು ಸಿಕ್ಕಿದ ಕಾರಣ ಏಕಕಾಲಕ್ಕೆ ಐದು ಚಿತ್ರಗಳಲ್ಲಿ ನಟಿಸಿದ್ದಾಳೆ. ಮಾಜಿ ನಾಯಕಿ, ಹಾಲಿ ರಾಜಕಾರಣಿ ಮೂನ್‌ಮೂನ್ ಸೇನ್‌ಳ ಇಬ್ಬರು ಪುತ್ರಿಯರಲ್ಲಿ ಹೆಚ್ಚು ಸಿನೆಮಾಗಳಲ್ಲಿ ನಟಿಸಿದವಳು ರೈಮಾ ಸೇನ್.
ಸಹೋದರಿ ರಿಯಾ ಸೇನ್ ಗ್ಲಾಮರ್ ನಟಿಯಾಗಿದ್ದ ಕಾರಣ ಬಹುಬೇಗ ಮರೆಗೆ ಸರಿದಿದ್ದಳು. ರೈಮಾ ಸೇನ್ ಎಲ್ಲ ರೀತಿಯ ಪಾತ್ರಗಳಲ್ಲಿ ಸೈ ಎನಿಸಿದ ಕಾರಣ ಬಾಲಿವುಡ್ ಮತ್ತು ಬಂಗಾಲಿಯಲ್ಲಿ ಬ್ಯುಸಿ ನಟಿಯಾಗಿದ್ದಳು. ಎರಡೂ ಭಾಷೆಗಳಲ್ಲಿ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಪ್ರತಿಭಾವಂತೆ ಆಕೆ. ಸಿನೆಮಾ ಕುಟುಂಬದಿಂದಲೇ ಬಂದ ಕಾರಣ ಅಭಿನಯ ರೈಮಾಳಿಗೆ ಲೀಲಾಜಾಲವಾಗಿತ್ತು. ಹೀಗಾಗಿ, ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಲು ಸಾಧ್ಯವಾಯಿತು. ಈಗ ನಡುಹರೆಯ ದಾಟಿರುವುದರಿಂದ ಹಿಂದಿನಂತೆ ಗ್ಲಾಮರ್ ಪಾತ್ರಗಳನ್ನು ಮಾಡಲು ಸಾಧ್ಯವಿಲ್ಲ ಎನ್ನುವ ಅರಿವಿದೆ. ಹೀಗಾಗಿ, ರೈಮಾ ಪಾತ್ರಗಳ ಆಯ್ಕೆಯಲ್ಲಿ ಬಹಳ ಚೂಸಿಯಂತೆ. ಐದೂ ಚಿತ್ರಗಳು ಬಿಡುಗಡೆಯಾದ ಬಳಿಕ ಇನ್ನಷ್ಟು ಸಿನೆಮಾಗಳಿಗೆ ಸಹಿ ಹಾಕಲು ತಯಾರಾಗಿದ್ದಾಳೆ. ಈಗಲೇ ಒಂದಷ್ಟು ಸ್ಕ್ರಿಪ್ಟ್ ಗಳು ಅವಳ ಬಳಿಗೆ ಬಂದಿವೆಯಂತೆ. ಯಾವುದಕ್ಕೂ ಸೆಕೆಂಡ್ ಇನ್ನಿಂಗ್ಸ್‌ನ ಓಪನಿಂಗ್ ಹೇಗಿದೆ ಎಂದು ನೋಡಿಕೊಂಡು ಮುಂದುವರಿಯಲು ನಿರ್ಧರಿಸಿದ್ದಾಳೆ.