ಬೆಂಗಳೂರು: ರಾಜಧಾನಿ ಬೆಂಗಳೂರಿನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈಗಾಗಲೇ ವಾರ್ಡ್‌ವಾರು ಟೆಂಡರ್ ಕರೆಯಲು ಮುಂದಾಗಿರುವ ಬಿಬಿಎಂಪಿ, ಚಿಂದಿ ಆಯುವವರಿಗೆ ಒಣತ್ಯಾಜ್ಯ ವಿಲೇವಾರಿ ಜವಾಬ್ದಾರಿ ವಹಿಸಲು ನಿರ್ಧರಿಸಿದೆ.
ನಗರದಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಈಗಾಗಲೇ ಹಲವಾರು ಕ್ರಮಗಳನ್ನು ಪಾಲಿಕೆ ಕೈಗೊಂಡಿದೆ. ಮುಂದುವರಿದು ಹಸಿತ್ಯಾಜ್ಯ ಸಮಸ್ಯೆ ಪರಿಹಾರಕ್ಕೆ ವಾರ್ಡ್‌ವಾರು ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ. ಇದರಿಂದಾಗಿ ಒಣತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗುವ ಸಾಧ್ಯತೆಯಿರುವುದರಿಂದ ಒಣತ್ಯಾಜ್ಯ ವಿಲೇವಾರಿಗೆ ಚಿಂದಿ ಆಯುವವರನ್ನು ನಿಯೋಜಿಸಿಕೊಳ್ಳಲು ನಿರ್ಧರಿಸಿದೆ.
ನಗರದ ಪ್ರಮುಖ ರಸ್ತೆಗಳು, ಮೈದಾನ, ಖಾಲಿ ನಿವೇಶನ ಹಾಗೂ ತ್ಯಾಜ್ಯರಾಶಿ ಹೀಗೆ ಎಲ್ಲೆಂದರಲ್ಲಿ ಬಾಟಲ್, ಪ್ಲಾಸ್ಟಿಕ್ ವಸ್ತುಗಳ ಸಂಗ್ರಹಣೆಯಲ್ಲಿ ತೊಡಗುವ ಚಿಂದಿ ಆಯುವವರಿಗೆ ಹೊಸದೊಂದು ಕೆಲಸ ಕೊಡಲು ಪಾಲಿಕೆ ಸಜ್ಜಾಗಿದೆ. ಆ ಹಿನ್ನೆಲೆಯಲ್ಲಿ ನಗರದಲ್ಲಿನ 7 ಸಾವಿರ ಅಧಿಕೃತ ಚಿಂದಿ ಆಯುವವರ ಮಾಹಿತಿ ಕಲೆಹಾಕಿದೆ.
ಅದರಂತೆ ತ್ಯಾಜ್ಯ ವಿಲೇವಾರಿ ಗುತ್ತಿಗೆ ಪಡೆಯುವವರು ಹಸಿತ್ಯಾಜ್ಯ ಹಾಗೂ ಸ್ಯಾನಿಟರಿ ತ್ಯಾಜ್ಯ ಸಂಗ್ರಹಿಸಿದರೆ, ಚಿಂದಿ ಆಯುವ ಸಿಬ್ಬಂದಿ ವಾರದಲ್ಲಿ ಎರಡು ಅಥವಾ ಮೂರು ದಿನಗಳಿಗೆ ಒಮ್ಮೆ ವಾರ್ಡ್‌ನಲ್ಲಿರುವ ಮನೆ ಮನೆಗೆ ತೆರಳಿ ಒಣತ್ಯಾಜ್ಯವನ್ನು ಸಂಗ್ರಹಿಸಲಿದ್ದು, ಸಮೀಪದ ಒಣತ್ಯಾಜ್ಯ ಸಂಗ್ರಹ ಕೇಂದ್ರಕ್ಕೆ ನೀಡಲಿದ್ದು, ಅವರಿಗೆ ಕೇಂದ್ರದಿಂದ ಹಣ ಪಾವತಿಸಲಾಗುತ್ತದೆ. ಇದರಿಂದಾಗಿ ಒಣತ್ಯಾಜ್ಯ ವಿಲೇವಾರಿಗೆ ಮತ್ತೆ ಟೆಂಡರ್ ಕರೆಯುವುದು ತಪ್ಪಲಿದೆ.
ಒಣತ್ಯಾಜ್ಯ ಸಂಗ್ರಹ ಪಾಲಿಸಿ ತರಲು ಚಿಂತನೆ: ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿಯನ್ನು ಸರಿದಾರಿಗೆ ತರುವ ಉದ್ದೇಶದಿಂದ ಪಾಲಿಕೆಯಲ್ಲಿ ಹೊಸ ಒಣತ್ಯಾಜ್ಯ ಸಂಗ್ರಹ ಕಾಯ್ದೆ ತರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಅದರ ಸಾಧಕ-ಬಾಧಕಗಳ ಕುರಿತು ಈಗಾಗಲೇ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಶೀಘ್ರದಲ್ಲಿಯೇ ಕಾಯ್ದೆಯನ್ನು ಪಾಲಿಕೆಯ ಮುಂದೆ ಮಂಡಸಿ ಅನುಮೋದನೆ ಪಡೆಯುವ ಸಾಧ್ಯತೆಯಿದೆ. ಹೊಸ ಕಾಯ್ದೆ ಚಿಂದಿ ಆಯುವವರನ್ನು ಸೇವೆಗೆ ನಿಯೋಜಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರೋತ್ಸಾಹ ಧನ ನೀಡಲಾಗುತ್ತದೆ: ಒಣತ್ಯಾಜ್ಯ ಸಂಗ್ರಹ ಕೇಂದ್ರಗಳು ಇಲ್ಲದ ಕಡೆಗಳಲ್ಲಿ ಚಿಂದಿ ಆಯುವವರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪಾಲಿಕೆ ನಿರ್ಧರಿಸಿದೆ. ಅದರಂತೆ ಸೇವೆಗೆ ನಿಯೋಜನೆ ಮಾಡಿಕೊಳ್ಳುವವರಿಗೆ ಪಾಲಿಕೆಯಿಂದ ಅಗತ್ಯ ವಾಹನ ಸೌಲಭ್ಯ, ಸುರಕ್ಷತಾ ಪರಿಕರಗಳು ಹಾಗೂ ಪ್ರೋತ್ಸಾಹ ಧನ ಸೇರಿ ಇನ್ನಿತರ ಸಹಾಯ ಮಾಡಲಾಗುತ್ತದೆ.
ಪಾಲಿಕೆಯಿಂದ ಹಸಿತ್ಯಾಜ್ಯ ಹಾಗೂ ಸ್ಯಾನಿಟರಿ ತ್ಯಾಜ್ಯ ವಿಲೇವಾರಿಗೆ ವಾರ್ಡ್‌ವಾರು ಟೆಂಡರ್ ಕರೆಯಲಾಗುತ್ತಿದ್ದು, ಒಣತ್ಯಾಜ್ಯ ವಿಲೇವಾರಿಗೆ ಚಿಂದಿ ಆಯುವವರನ್ನು ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಆ ಹಿನ್ನೆಲೆಯಲ್ಲಿ ಅವರ ದಾಖಲೆಗಳನ್ನು ಕಲೆಹಾಕಲಾಗಿದ್ದು, ಸೇವೆ ನಿಯೋಜಿಸಿಕೊಂಡವರಿಗೆ ಪಾಲಿಕೆಯಿಂದಲೇ ಗುರುತಿನ ಚೀಟಿ ಸಹ ನೀಡಲಾಗುತ್ತದೆ. ಫೆಬ್ರುವರಿಯವರೆ ಹಳೆಯ ಪದ್ಧತಿ ಮುಂದುವರಿಲಿದ್ದು, ನಂತರದಲ್ಲಿ ಹೊಸ ಪ್ರಯತ್ನಗಳಿಗೆ ಮುಂದಾಗುತ್ತೇವೆ.
-ರಂದೀಪ್, ವಿಶೇಷ ಆಯುಕ್ತರು (ಘನತ್ಯಾಜ್ಯ ನಿರ್ವಹಣೆ)