Advertisement
ಸಾಮಾನ್ಯವಾಗಿ, ಆದರ್ಶಗಳ ಕುರಿತು ಹೇಳು ಎಂದರೆ ಸುಲಭವಾಗಿ ಏನೆಲ್ಲವನ್ನೂ ಹೇಳಿಬಿಡುತ್ತಾರೆ. ಆದರೆ ನೀ ಹೇಳಿದ್ದನ್ನೇ ಪಾಲಿಸು ಎಂದರೆ ಒಂದಿಷ್ಟು ತಡವರಿಸುತ್ತಾರೆ. ಅಲ್ಲಿ ಕಷ್ಟದ ಸತ್ಯ ದರ್ಶನವಾಗುತ್ತದೆ. ಅದಕ್ಕೇ ಹೇಳುವುದು “ಸಂಸ್ಕೃತಿಗಿಂತ ಸತ್ಯ ಶ್ರೇಷ್ಠ, ಸತ್ಯಕ್ಕಿಂತ ಆಚರಣೆ ಶ್ರೇಷ್ಠ’ ಎಂದು. ಶರಣ ಧರ್ಮದಲ್ಲಿ ದೊಡ್ಡ ದೊಡ್ಡ ತತ್ವಗಳಾಗಲೀ, ಸಿದ್ಧಾಂತಗಳಾಗಲೀ ಇಲ್ಲ.
Related Articles
Advertisement
ವಿಚಾರ ಆಚಾರ ಗಳೊಂದಾದ, ನುಡಿ ನಡೆಗಳೊಂದಾದವರ ಇಂಥ ಸದಾಚಾರದಿಂದಲೇ ತಾನೇ, ಶಿವನಾಗಿ ಪ್ರತಿಯೊಬ್ಬರಲ್ಲಿ ಶಿವನನ್ನು ಕಾಣುವಂಥ ನಡೆಯನ್ನನುಸರಿಸಿದಾಗ ಸದಾಚಾರದ ಆಚಾರ ವಾಗುತ್ತದೆ. ಶರಣರ ನಿಲುವಿನಲ್ಲಿ ತಾನೊಬ್ಬನೇ ಲಿಂಗವಂತನಾಗಿ ತನ್ನಷ್ಟಕ್ಕೆ ತಾನಿದ್ದುಬಿಡುವುದನ್ನು ಶರಣರೂ ಎಂದಿಗೂ ಇಷ್ಟಪಡುವುದಿಲ್ಲ.
ಒಪ್ಪುವುದಿಲ್ಲ. ಮತ್ತೂಬ್ಬರಿಗೆ ದಾಸೋಹಿಸುವುದರ ಮೂಲಕ ಅವರೊಳಗನ್ನೂ ಜಾಗೃತಗೊಳಿಸಲು ಪ್ರಯತ್ನಿಸುವುದು ಜಂಗ ಮಾಚಾರ. ತಾನರಿತ ಶಿವನನ್ನು ತಾನೇ ಶಿವನಾಗಿ ಉಳಿದ ಶಿವ ಸ್ವರೂಪಿಗಳನ್ನು ತನ್ನ ಸದಾಚಾರದ ನಡೆಯಿಂದ ಜಂಗಮಗೊಳಿಸುತ್ತ ತಾನೂ ಜಂಗಮವಾಗುತ್ತಲಿರುವುದೇ ಶಿವಾಚಾರ. ಸದಾಚಾರದಿಂದ ಶಿವ ತತ್ವವನ್ನು ಅಕ್ಷರಶಃ ಪಾಲಿಸುವುದೇ ಶಿವಾಚಾರ. ಪ್ರತಿಯೊಬ್ಬರೂ ಶಿವ ಸ್ವರೂಪಿಯಾಗಿರುವುದರಿಂದ ಆ ಪರಶಿವ ಮಾಡಬೇಕಾದದ್ದನ್ನು ಆತನ ಪ್ರತಿನಿಧಿಯಾಗಿ ತಾನೊಬ್ಬ ಶಿವನಾಗಿ ಪಾಲಿಸಿದಾಗ ಶಿವಾಚಾರವಾಗುತ್ತದೆ. ಅಲ್ಲಿ ಇವನಾರವ ಎನ್ನುವ ಭಾವವಳಿದು ಸದಾಚಾರದಿಂದ ಪ್ರತಿಯೊಬ್ಬರನ್ನು ಇವ ನಮ್ಮವ ಎಂದು ಅಪ್ಪಿಕೊಂಡು, ಒಪ್ಪಿಕೊಳ್ಳುವ ಮೂಲಕ ಶಿವಾಚಾರವನ್ನು ಪಾಲಿಸುವಂಥ ಧರ್ಮ ದಾಚರಣೆ ಆಗುತ್ತದೆ .
ಇನ್ನು ಗಣಾಚಾರ ಮತ್ತು ಭೃತ್ಯಾಚಾರಗಳು ಸಮಾಜಮುಖೀ ಯಾಗಿರುವಂಥವು. ಪ್ರಾಯೋಗಿಕತೆಯತ್ತ ಲಿಂಗವಂತ ಗುಣ ಗಳೊಂದಿಗೆ ಸಾಗುತ್ತಿರುವಾಗ ಅಡ್ಡಿ ಆತಂಕಗಳು, ಸವಾಲುಗಳು ಎದುರಾಗಬಹುದು. ಆಗ ನಮ್ಮ ಲಿಂಗ ಗುಣಗಳಿಗೆ ವಿಮುಖವಾಗದೇ ನಮ್ಮ ತತ್ವಗಳೇ ನಮ್ಮ ಬದ್ಧತೆಗಳೆಂದು, ನಮ್ಮ ನಿಲುವುಗಳೇ ನಮ್ಮ ಆಚಾರಗಳೆಂಬ ಧೋರಣೆಯಲ್ಲಿ ಅಂಥ ಸವಾಲುಗಳನ್ನು ಮತ್ತು ಸಮಸ್ಯೆಗಳನ್ನು ಸ್ವೀಕರಿಸಿ ನಾವು ನಂಬಿಕೊಂಡಿರುವುದು ಹೇಗೆ ನಿಜವೆಂದು ಬಿಂಬಿಸಬೇಕು. ನನ್ನ ಆಚಾರ ಹೇಗೆ ಒಳ್ಳೆಯದೆಂದು ಪ್ರತಿಪಾದಿಸಬೇಕು. ನನ್ನ ದೇವನು ನನ್ನೊಳಗಿದ್ದಾನೆಂಬುದೇ ದಿಟ ಎಂದು ಸಾಬೀತುಪಡಿಸಬೇಕು. ನಾನೊಬ್ಬ ಲಿಂಗವಂತನಾಗಿ ಲಿಂಗತತ್ವಕ್ಕೆ ಬದ್ಧನಾಗಿ ನಡೆದುಕೊಂಡಾಗ ಯಾರಿಗೂ ಹೆದರುವ ಅಗತ್ಯವಿಲ್ಲ. ಸಾತ್ವಿಕ ಪ್ರತಿಭಟನೆಯ ಮೂಲಕ ಸಹನೆ ನಮ್ಮ ದೌರ್ಬಲ್ಯವಲ್ಲವೆಂದು ಸಾಬೀತುಪಡಿಸಬೇಕು. ಇದು ಗಣಾಚಾರವಾಗುತ್ತದೆ.
ಅನವಶ್ಯಕವಾಗಿ ವಾದ ಮಾಡುವವರಿಗೆ ತಿಳಿದೂ ತಿಳಿಯದವರಂತೆ ವರ್ತಿಸುವವರ ಮುಂದೆ “ಶರಣು ಶರಣಾರ್ಥಿ’ ಎಂದು ನಮ್ಮ ಆಚಾರಗಳನ್ನು ತಿಳಿಹೇಳಿ ಅವರ ವಿಚಾರಗಳ ಒಳಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳದೇ ನಮ್ಮ ನಿಲುವಿಗೆ ಬದ್ಧರಾಗಿ ನಮ್ಮದೇ ಶರಣ ಪಥದತ್ತ ಸಾಗಿಬಿಡಬೇಕು. ಆಗ ನಮ್ಮ ಬಸವಪಥ ಅವರಿಗೆ ಅರ್ಥವಾಗುತ್ತಾ ಹೋಗುತ್ತದೆ. ಗಣಾಚಾರದಲ್ಲಿ ಶರಣ ತತ್ವವನ್ನು ಪ್ರತಿಪಾದಿಸುವಾಗ ಕೆಲವೊಮ್ಮೆ ಕಠೊರತೆಯನ್ನು ಅನುಸರಿಸಬೇಕಾಗುತ್ತದೆ. ಆ ಕಠೊರತೆ ಯಿಂದ ಅವರು ಅರಿತುಕೊಳ್ಳದಿದ್ದರೆ ಬಸವಣ್ಣ ನಮಗೆ ಕಲಿಸಿದಂತೆ ವಿಧೇಯತೆಯಿಂದಲೂ ನಮ್ಮ ವಿಚಾರಗಳೆಂಬ ಆಚಾರಗಳನ್ನು ತಿಳಿಹೇಳುವ ಮೂಲಕ ಕೇವಲ ಅಂಗ ಗುಣವುಳ್ಳವರಲ್ಲಿ ಲಿಂಗ ಗುಣಗಳನ್ನು ಬಿತ್ತಬಹುದು. ಅಂಥವರ ಎದೆಯಲ್ಲಿ ವಿಧೇಯತೆಯಿಂದ ಬಿತ್ತಿದ ಬಸವ ಬೀಜಗಳೆಂದೂ ನಿಷ್ಪ್ರಯೋಜಕವಾಗದೇ ಸತ್ಪಾತ್ರಕ್ಕೆ ಸಲ್ಲಿಕೆಯಾಗುತ್ತವೆ. ವಿಧೇಯತೆಯೇ ಭೃತ್ಯಾಚಾರದ ಅಸ್ತ್ರವಾಗಿದೆ. ಸಹನೆ, ವಿಧೇಯತೆಗಳಿಂದ ಬಿಂಬಿಸಿ ಪ್ರತಿಪಾದಿಸಿದ ನಮ್ಮ ಆಚಾರಗಳು ಮತ್ತೂಬ್ಬರಿಗೆ ಬಸವಪಥದ ವಿಚಾರಗಳಾಗಿ ಅವರಿಗೆ ಮುಂದೊಂದು ದಿನ ಅವುಗಳೇ ಆಚಾರವಾಗಲೂಬಹುದು. ಇದುವೇ ಐದನೇಯ ಮತ್ತು ಕೊನೆಯ ಆಚಾರ ಭೃತ್ಯಾಚಾರ.
ಹೀಗೆ, ಈ ಪಂಚಾಚಾರಗಳು ಕೇವಲ ಲಿಂಗಾಯತರ ಧಾರ್ಮಿಕ ಪದ್ಧತಿಗಳಲ್ಲ. ಲಿಂಗವಂತರ ವೈಚಾರಿಕ ಬದುಕಿನ ಕ್ರಮವಾಗಿವೆ. ಇವು ಕೇವಲ ಒಂದು ಧರ್ಮದ ಹಿನ್ನೆಲೆಯಲ್ಲಿ ಆಚರಿಸಬಹುದಾದ ವಿಚಾರಗಳಲ್ಲ. ಅವು ನಮ್ಮ ದೈನಂದಿನ ನಡೆಯಲ್ಲಿ ಅನುಸರಿಸ ಬಹುದಾದ ಆಚಾರ ಸಂಹಿತೆಗಳು.
– ವೆಂಕಟೇಶ ಕೆ. ಜನಾದ್ರಿ, ಕನಕಗಿರಿ