Advertisement
ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಲು, ಒಂದೇ ತಂಡ ಎಷ್ಟು ಅಪರಾಧ ಕೃತ್ಯಗಳಲ್ಲಿ ತೊಡಗಿದೆ ಎಂಬುದನ್ನು ಪತ್ತೆಹಚ್ಚಲು ಪ್ರಮುಖ ಕಾರಣವಾಗುವುದು ಅವರ ಬೆರಳಚ್ಚು. ಇತ್ತೀಚೆಗೆ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಇವುಗಳನ್ನು ಪೊಲೀಸರು ತ್ವರಿತಗತಿಯಲ್ಲಿ ಇತ್ಯರ್ಥ ಪಡಿಸುತ್ತಿಲ್ಲ ಎಂದು ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತ್ತು. ಬಹುತೇಕ ಪ್ರಕರಣಗಳಲ್ಲಿ ಪೊಲೀಸ್ ತನಿಖೆ ನಿಧಾನಗತಿಯಲ್ಲಿ ಸಾಗಲು ಕಾರಣವೇ ಬೆರಳಚ್ಚು ಕುರಿತ ಸಮಸ್ಯೆ.
Related Articles
Advertisement
ಇದರಿಂದ ಸಕಾಲದಲ್ಲಿ ತನಿಖೆ ನಡೆಸುವುದು ಕಷ್ಟವಾಗುತ್ತಿದೆ. ಪ್ರತಿ ವಲಯಗಳಲ್ಲಿ ಒಂದು ಬೆರಳಚ್ಚು ತಂಡ ಕಾರ್ಯನಿರ್ವಹಿಸಿದರೆ ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ, ಶೀಘ್ರದಲ್ಲೇ ಸಾಕ್ಷ್ಯ ಸಂಗ್ರಹಿಸಬಹುದು. ಹೀಗಾದರೆ ಕೆಲವೇ ಗಂಟೆಗಳಲ್ಲಿ ಆರೋಪಿಯ ಹಿನ್ನೆಲೆಯನ್ನು ತನಿಖಾಧಿಕಾರಗಳಿಗೆ ನೀಡಲು ಸಾಧ್ಯವಾಗುತ್ತದೆ.
ಎಎಫ್ಐಎಸ್ ಸಾಫ್ಟ್ವೇರ್ ಅಭಿವೃದ್ಧಿ: ಪೊಲೀಸ್ ಇಲಾಖೆಯಲ್ಲಿ ಆರೋಪಿಗಳ ಬೆರಳಚ್ಚು ಸಂಗ್ರಹಿಸಲು ಜಪಾನ್ ಮೂಲದ ಕಂಪನಿಯೊಂದು ಅಭಿವೃದ್ಧಿ ಪಡಿಸಿರುವ ಎಎಫ್ಐಎಸ್ (ಆಟೋಮೇಟೆಡ್ ಫಿಂಗರ್‌ಪ್ರಿಂಟ್ ಐಡೆಂಟಿಫಿಕೇಷನ್ ಸಿಸ್ಟಂ) ಎಂಬ ಸಾಫ್ಟ್ವೇರ್ ಅನ್ನು 2002ರಿಂದ ಬಳಸಲಾಗುತ್ತಿದೆ. ಇದೇ ಆಧಾರದ ಮೇಲೆ ಪ್ರತಿ ಜಿಲ್ಲೆಯಲ್ಲಿರುವ ಬೆರಳಚ್ಚು ತಜ್ಞರ ತಂಡ ಮಾಹಿತಿ ಸಂಗ್ರಹಿಸಿ ಒಂದೇ ಸರ್ವರ್‌ನಲ್ಲಿ ದಾಖಲಿಸುತ್ತಿದೆ.
ಅಲ್ಲದೆ, ಸಂಗ್ರಹಿಸಲಾದ ಆರೋಪಿಗಳ ಬೆರಳಚ್ಚನ್ನು ಬೇರೆ ಬೇರೆ ಪ್ರಕರಣಗಳಲ್ಲಿ ಪತ್ತೆಯಾದ ಆರೋಪಿಗಳ ಬೆರಳಚ್ಚಿಗೆ ಹೊಂದಾಣಿಕೆ ಮಾಡಲು ಕಷ್ಟವಾಗುತ್ತಿತ್ತು. ದೇ ಕಾರಣದಿಂದ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಅಧಿಕವಾಗಿತ್ತು.
ಇದೀಗ ಈ ಎಎಫ್ಐಎಸ್ ಸಾಫ್ಟ್ವೇರ್ ಅನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲಾಗಿದ್ದು, ಸರ್ವರ್‌ನ ಸಾಮರ್ಥ್ಯವನ್ನೂ ಹೆಚ್ಚಿಸಲಾಗಿದೆ. ಮುಂದಿನ 20 ವರ್ಷಗಳಿಗೆ ಆಗುವಷ್ಟು ಮಾಹಿತಿ ಸಂಗ್ರಹ ಮಾಡುವ ಸಾಮರ್ಥ್ಯವ ನ್ನು ಸಾಫ್ಟ್ವೇರ್ ಹೊಂದಿದೆ. ಸದ್ಯ ಅಳವಡಿಸಿರುವ ಸಾಫ್ಟ್ವೇರ್‌ನಿಂದ ರಾಜ್ಯಾದ್ಯಂತ ನಿತ್ಯ ಕನಿಷ್ಠ 250ರಿಂದ 300 ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಅಧಿಕಾರಿ ಹೇಳಿದ್ದಾರೆ.
3.60 ಲಕ್ಷ ಆರೋಪಿಗಳ ಮಾಹಿತಿ: ಈಗ ಅಭಿವೃದ್ಧಿ ಪಡಿಸಿರುವ ಸಾಫ್ಟ್ವೇರ್‌ನಲ್ಲಿ ರಾಜ್ಯಾದ್ಯಂತ ಅಪರಾಧ ಪ್ರಕರಣಗಳಲ್ಲಿ ತೊಡಗಿರುವ 3.60 ಲಕ್ಷ ಆರೋಪಿಗಳ ಬೆರಳಚ್ಚು ಮಾಹಿತಿ ಸಂಗ್ರಹಿಸಲಾಗಿದೆ. ಈ ಮೂಲಕ ಒಮ್ಮೆ ಒಬ್ಬ ಆರೋಪಿಯ ಬೆರಳಚ್ಚು ಸಂಗ್ರಹಿಸಿ ಈ ಸಾಫ್ಟ್ವೇರ್‌ನಲ್ಲಿ ಪರಿಶೀಲಿಸಿದರೆ, ಆತನ ಇಡೀ ಅಪರಾಧ ಹಿನ್ನೆಲೆ ತೆರೆದುಕೊಳ್ಳುತ್ತದೆ. ಒಮ್ಮೆಲೇ ಒಬ್ಬ ಆರೋಪಿಯ ಬೆರಳಚ್ಚನ್ನು 10ರಿಂದ 100 ಮಂದಿಯ ಬೆರಳಚ್ಚುಗಳ ಜತೆ ಹೊಲಿಕೆ ಮಾಡಬಹುದು. ಈ ಮೂಲಕ ಪ್ರಕರಣದ ಶೇ.90ರಷ್ಟು ತನಿಖೆ ಮುಕ್ತಾಯವಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಪ್ರತ್ಯೇಕ ನೇಮಕ, ತರಬೇತಿ: ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಬೆರಳಚ್ಚು ವಿಭಾಗಕ್ಕೆ ಪ್ರತ್ಯೇಕ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ 24 ಮಂದಿ ಪಿಎಸ್‌ಐಗಳ ನೇಮಕವಾಗಿದ್ದು, ಮೈಸೂರಿನಲ್ಲಿ ಪೊಲೀಸ್ ತರಬೇತಿ ಪಡೆಯುತ್ತಿದ್ದಾರೆ.
ಬಳಿಕ ಹೈದ್ರಾಬಾದ್‌ನಲ್ಲಿರುವ ಬೆರಳಚ್ಚು ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಿ, ಬೆರಳಚ್ಚು ತಜ್ಞರನ್ನಾಗಿ ಮಾಡಿ ನೇಮಕ ಮಾಡಲಾಗುವುದು. ಈ ತರಬೇತಿ ವೇಳೆ ಅಪರಾಧ ಸ್ಥಳದಲ್ಲಿ ದೊರೆಯುವ ರಕ್ತದ ಮಾದರಿ, ಕೂದಲು, ಬೆರಳಚ್ಚು ಸೇರಿದಂತೆ ಕೆಲ ಪ್ರಮುಖ ಸಾಕ್ಷ್ಯಗಳನ್ನು ಸೂಕ್ಷ್ಮವಾಗಿ ಸಂಗ್ರಹಿಸುವ ಕುರಿತು ತರಬೇತಿ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಯಾವುದೇ ಅಪರಾಧ ಪ್ರಕರಣಗಳಲ್ಲಿ ಆರೋಪಿಯ ಬೆರಳಚ್ಚು ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಅಪರಾಧ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ನಗರದ 8 ಕಡೆ ಬೆರಳಚ್ಚು ತಂಡ ಸ್ಥಾಪಿಸಿ ಕಾರ್ಯ ವ್ಯಾಪ್ತಿ ವಿಸ್ತರಿಸಲು ತೀರ್ಮಾನಿಸಲಾಗಿದೆ.-ಡಾ.ಎಂ.ಎ.ಸಲೀಂ, ಎಡಿಜಿಪಿ (ಅಪರಾಧ ಮತ್ತು ತಾಂತ್ರಿಕ ಸೇವೆಗಳು) * ಮೋಹನ್ ಭದ್ರಾವತಿ