Advertisement

ಆರೋಗ್ಯ-ಜೀವಿತದ ಹಕ್ಕು: ಸುಪ್ರೀಂ ನಿಲುವು ಸಮತೋಲಿತ

11:05 PM Oct 16, 2023 | Team Udayavani |

ಗರ್ಭಪಾತದ ವಿಚಾರದಲ್ಲಿ ಬಹು ಹಿಂದಿನಿಂದಲೂ ಸಾಕಷ್ಟು ಚರ್ಚೆಯಾಗುತ್ತಲೇ ಇದ್ದು, ಕಾಲಕ್ಕೆ ತಕ್ಕಂತೆ ಪ್ರಕರಣಗಳ ಸ್ವರೂಪವೂ ಬದಲಾಗುತ್ತಾ ಬಂದಿದೆ. ಈಗಿನ ಪ್ರಕರಣದಲ್ಲಿ 27 ವರ್ಷದ ಮಹಿಳೆಯೊಬ್ಬರು, 26 ವಾರದ ಬಳಿಕ ಗರ್ಭಪಾತಕ್ಕೆ ಅವಕಾಶ ಕೇಳಿದ್ದು ಸುಪ್ರೀಂ ಕೋರ್ಟ್‌ ಅವಕಾಶ ಮಾಡಿಕೊಟ್ಟಿಲ್ಲ. ಈ ಕುರಿತಂತೆ ಅ.9ರಿಂದಲೂ ಸಾಕಷ್ಟು ಚರ್ಚೆ ನಡೆದಿದ್ದು, ಇಲ್ಲಿ ತಾಯಿಯ ಆಯ್ಕೆ ಸ್ವಾತಂತ್ರ್ಯ ಮತ್ತು ಮಗುವಿನ ಜೀವಿತ ಹಕ್ಕಿನ ಬಗ್ಗೆಯೂ ಸಾಕಷ್ಟು ಅಂಶಗಳು ಉಲ್ಲೇಖವಾಗಿರುವುದನ್ನು ನೋಡಬಹುದು.

Advertisement

ಅ.9ರ ಆದೇಶದಲ್ಲಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು, ಈ ಮಹಿಳೆಯ 26 ವಾರದ ಭ್ರೂಣ ತೆಗೆಸಲು ಒಪ್ಪಿಗೆ ನೀಡಿದ್ದು, ಅನಂತರ ಇದೇ ಪೀಠವು ವ್ಯತಿರಿಕ್ತ ತೀರ್ಪು ನೀಡಿತ್ತು. ಅಂದರೆ ನ್ಯಾ| ನಾಗರತ್ನ ಮತ್ತು ನ್ಯಾ| ಹಿಮಾ ಕೊಹ್ಲಿ ಅವರ ಪೀಠವು ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗದೇ, ವಿಸ್ತೃತ ಪೀಠಕ್ಕೆ ವರ್ಗಾಯಿಸಿತ್ತು. ಈ ಪೀಠವು, ಮಹಿಳೆಯ ಆಯ್ಕೆ ಸ್ವಾತಂತ್ರ್ಯ ಮತ್ತು 26 ವಾರದ ಅನಂತರ ಮಗು ತೆಗೆಸಲು ಒಪ್ಪಿಗೆ ನೀಡಬೇಕೇ ಎಂಬ ವಿಚಾರದಲ್ಲಿ ವ್ಯತಿರಿಕ್ತ ಅಭಿಪ್ರಾಯ ಹೊಂದಿತ್ತು.

ಈಗ ಮುಖ್ಯ ನ್ಯಾ| ಡಿ.ವೈ.ಚಂದ್ರಚೂಡ್‌ ಅವರ ನೇತೃತ್ವದ ತ್ರಿಸದಸ್ಯ ಪೀಠವು, ಸಾಕಷ್ಟು ವಿಚಾರ ನಡೆಸಿ, ಏಮ್ಸ್‌ ವೈದ್ಯರ ವರದಿ ಬಳಿಕ ಗರ್ಭಪಾತಕ್ಕೆ ಅನುಮತಿ ನೀಡಲಿಲ್ಲ. ಈ ಸಂದರ್ಭದಲ್ಲಿ ಪೀಠವು, ಮಗುವಿನ ಉಸಿರು ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಮಗುವಿನ ಜೀವದ ಹಕ್ಕನ್ನೂ ಎತ್ತಿಹಿಡಿದಿದೆ. ಒಂದು ರೀತಿಯಲ್ಲಿ ಈ ಪ್ರಕರಣವು ಬೇರೊಂದು ರೀತಿಯ ಚರ್ಚೆಗೂ ಕಾರಣವಾಗಿದೆ ಎಂದು ಹೇಳುವುದಕ್ಕೆ ಅಡ್ಡಿ ಇಲ್ಲ. ಈ ಪ್ರಕರಣದಲ್ಲಿ ಸಿಜೆಐ ನೇತೃತ್ವದ ಪೀಠವು ಕೆಲವೊಂದು ಅಂಶಗಳನ್ನು ಪ್ರಸ್ತಾಪಿವಿಸಿದೆ. ಅಂದರೆ 27 ವರ್ಷದ ಮಹಿಳೆಗೆ ಈಗಾಗಲೇ 2 ಮಕ್ಕಳಿದ್ದು, ಮೂರನೇ ಮಗುವನ್ನು ಹೇರಲು ಯಾವುದೇ ಸಮಸ್ಯೆ ಇಲ್ಲ. ಈ ಮಹಿಳೆಯರು ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಯನ್ನೂ ಅರ್ಜಿಯಲ್ಲಿ ಉಲ್ಲೇಖೀಸಿದ್ದು ಈ ಬಗ್ಗೆ ಕೋರ್ಟ್‌ ಪರಿಗಣನೆಗೆ ತೆಗೆದುಕೊಂಡಿಲ್ಲ. ಅಲ್ಲದೆ ಮಗು ಬೇಡ ಎಂದಾದರೆ, ಮೊದಲೇ ಬರಬಹುದಿತ್ತು. 26 ವಾರಗಳ ವರೆಗೆ ಕಾಯುವ ಅಗತ್ಯವಿರಲಿಲ್ಲ. ಒಂದು ವೇಳೆ ಈಗ ಗರ್ಭಪಾತ ಅಥವಾ ಅವಧಿಗೆ ಮುನ್ನ ಹೆರಿಗೆಗೆ ಅವಕಾಶ ಮಾಡಿಕೊಟ್ಟರೆ, ಮಗು ಅಸಹಜವಾಗಿ ಹುಟ್ಟಿದರೆ ಅದರ ಭವಿಷ್ಯವೇನು ಎಂಬ ಪ್ರಶ್ನೆಯನ್ನೂ ಕೋರ್ಟ್‌ ಎತ್ತಿದೆ.

ಪ್ರಮುಖವಾಗಿ ಅರ್ಜಿದಾರ ಮಹಿಳೆ ತೀರಾ ತಡವಾಗಿ ಅರ್ಜಿ ಸಲ್ಲಿಸಿದ್ದನ್ನು ಪ್ರಶ್ನಿಸಿರುವ ಕೋರ್ಟ್‌, ಗರ್ಭಪಾತಕ್ಕೆ ಒಪ್ಪಿಗೆ ಕೊಡುವಂಥ ಪೂರಕ ವಿಚಾರಗಳಿಲ್ಲ ಎಂದಿದೆ. ಏಮ್ಸ್‌ ವೈದ್ಯರೂ ಮಗು ಚೆನ್ನಾಗಿದೆ ಎಂಬುದನ್ನು ದೃಢೀಕರಿಸಿದ್ದಾರೆ. ಹೀಗಾಗಿ ಇಂಥ ಸಮಯದಲ್ಲಿ ಗರ್ಭಪಾತಕ್ಕೆ ಒಪ್ಪಿಗೆ ಕೊಟ್ಟರೆ ಮಗುವಿನ ಉಸಿರು ನಿಲ್ಲಿಸಿದಂತೆ ಆಗುತ್ತದೆ ಎಂದೂ ಹೇಳಿದೆ.

ಸುಪ್ರೀಂ ಕೋರ್ಟ್‌ ಎತ್ತಿರುವ ಪ್ರಶ್ನೆಗಳಲ್ಲಿ ಚರ್ಚಾರ್ಹ ಸಂಗತಿಗಳು ಇರುವುದನ್ನು ನೋಡಬಹುದು. ಗರ್ಭಿಣಿಯೊಬ್ಬರು ಮಗು ಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ಕೈಗೊಳ್ಳುವ ವಿಚಾರದಲ್ಲಿ ಸ್ವತಂತ್ರರಾಗಿದ್ದರೂ, ಯಾವ ಸಮಯದಲ್ಲಿ ಗರ್ಭಪಾತಕ್ಕೆ ಅವಕಾಶ ಮಾಡಿಕೊಡಬಹುದು ಎಂಬುದನ್ನು ಸ್ಪಷ್ಟವಾಗಿ ಕೋರ್ಟ್‌ ಹೇಳಿದಂತೆ ಆಗಿದೆ. ಸಾಮಾನ್ಯ ಪ್ರಕರಣಗಳಲ್ಲಿ 26 ವಾರದ ಅನಂತರ ಗರ್ಭಪಾತಕ್ಕೆ ಅವಕಾಶ ಮಾಡಿಕೊಡದೆ, ತಾಯಿಯ ಆರೋಗ್ಯ ಮತ್ತು ಮಗುವಿನ ಜೀವದ ಬಗ್ಗೆಯೂ ಸಮತೋಲಿತ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಬಹುದು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next