Advertisement
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕತೆ, ಉತ್ಪಾದನಾ ಮತ್ತು ಉದ್ಯೋಗ ವಲಯ ಕೋವಿಡ್ 19 ಸೃಷ್ಟಿಸಿರುವ ಪ್ರತಿಕೂಲ ಪರಿಣಾಮದ ಬಳಿಕ ಮತ್ತೆ ಚೇತರಿಸಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಪ್ರಸ್ತುತ ಇರುವ ಉದ್ಯಮಗಳ ಚೇತರಿಕೆಗೆ ಸರಕಾರ ಘೋಷಿಸಿರುವ ಪ್ರೋತ್ಸಾಹ ಕ್ರಮಗಳು ಶೀಘ್ರ ಲಭ್ಯವಾಗುವುದರ ಜತೆ ಹೆಚ್ಚು ಬೇಡಿಕೆ ಹಾಗೂ ಮಾರುಕಟ್ಟೆ ಅವಕಾಶಗಳನ್ನು ಹೊಂದಿರುವ ಕ್ಷೇತ್ರಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಆದ್ಯತೆ ನೀಡಬೇಕಿದೆ. ಇದರಿಂದ ಆರ್ಥಿಕತೆಗೆ ಬಲ ಬರುವುದಲ್ಲದೆ, ಅಭಿವೃದ್ಧಿಗೆ ವೇಗ ಸಿಗಲಿದೆ. ಹೆಚ್ಚು ಉದ್ಯೋಗಗಳೂ ಸೃಷ್ಟಿಯಾಗಲಿವೆ.
ಜಿಲ್ಲೆಯಲ್ಲಿ ಪ್ರಸ್ತುತ ಹೊಸದಾಗಿ ಒಟ್ಟು 21,032 ಕೋ.ರೂ. ವೆಚ್ಚದ 4 ಯೋಜನೆಗಳು ಅನುಷ್ಠಾನ ಹಂತದಲ್ಲಿವೆ. 20,000 ಕೋ.ರೂ. ವೆಚ್ಚದ ಎಂಆರ್‌ಪಿಎಲ್ ವಿಸ್ತರಣ ಘಟಕಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಎಸ್‌ಇಝಡ್‌ನಲ್ಲಿ 854 ಕೋ.ರೂ. ವೆಚ್ಚದ ಸಿನೆಜೆನ್ ಇಂಟರ್‌ನ್ಯಾಶನಲ್ ಔಷಧ ತಯಾರಿ ಘಟಕ, 100 ಕೋ.ರೂ. ವೆಚ್ಚದ ಅನಿತಾ ಏರೋಮೆಟಿಕ್ಸ್ ಹಾಗೂ 78 ಕೋ.ರೂ. ವೆಚ್ಚದ ಯುಲ್ಕಾ ಎಂಟರ್‌ಪ್ರೈಸಸ್ ಪ್ರೈ.ಲಿ. ಘಟಕಗಳ ಅನುಷ್ಠಾನಕ್ಕೆ ವೇಗ ದೊರಕಿದರೆ ಆರ್ಥಿಕ ಚಟುವಟಿಕೆಯೊಂದಿಗೆ ಉದ್ಯೋಗಾವಕಾಶಗಳೂ ಹೆಚ್ಚಲಿವೆ.
Related Articles
ಬೆಲ್ಜಿಯಂನ ಟ್ರೇಡ್ ಕಮಿಷನ್ ಆಫ್ ಫ್ಲೆಂಡರ್ ಸಂಯೋಜನೆಯಲ್ಲಿ ಭಾರತೀಯ ಕೈಗಾರಿಕೆಗಳ ಮಹಾ ಒಕ್ಕೂಟ (ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ) ಮಂಗಳೂರಿನ ಉದ್ಯಮಿಗಳ ಜತೆ ಫೆಬ್ರವರಿಯಲ್ಲಿ ಆಯೋಜಿಸಿದ್ದ ಸಮಾಲೋಚನ ಸಭೆಯಲ್ಲಿ ಹೂಡಿಕೆಗೆ ಇರುವ ಕೆಲವು ಹೊಸ ಸಾಧ್ಯತೆಗಳನ್ನು ಗುರುತಿಸಲಾಗಿತ್ತು.
Advertisement
ಮಂಗಳೂರಿನಲ್ಲಿ 3 ಡಿ ಪ್ರಿಂಟಿಂಗ್, ಕೃತಕ ಬುದ್ಧಿಮತ್ತೆ, ಯಂತ್ರೋಪಕರಣಗಳ ತಯಾರಿ, ಆಸ್ಪತ್ರೆಗಳ ಅಗತ್ಯಗಳ ಪೂರೈಕೆಯ ಉತ್ಪಾದನ ಘಟಕಗಳು ಹಾಗೂ ಸರಕು ಸಾರಿಗೆ ಕ್ಷೇತ್ರ, ಘನ ತ್ಯಾಜ್ಯ ನಿರ್ವಹಣೆ ಕ್ಷೇತ್ರದಲ್ಲಿನ ಅವಕಾಶಗಳ ಬಗ್ಗೆ ಉಲ್ಲೇಖೀಸಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಕೆಲವು ಉದ್ಯಮ ಕ್ಷೇತ್ರಗಳು ಹೊಸ ಅವಕಾಶಗಳನ್ನು ಪಡೆದಿವೆ. ಇದರಲ್ಲಿ ಮುಖ್ಯವಾಗಿ ಔಷಧಗಳು ಮತ್ತು ಆಸ್ಪತ್ರೆಗಳಿಗೆ ಅಗತ್ಯವಿರುವ ಕ್ಲಿನಿಕಲ್ ಹಾಗೂ ಸ್ವತ್ಛತಾ ಸಾಮಗ್ರಿಗಳು, ಆಹಾರ ಮತ್ತು ಕೃಷಿ ಆಧಾರಿತ ಉದ್ಯಮಗಳು, ಪ್ಲಾಸ್ಟಿಕ್ ಉದ್ಯಮಗಳು ಹೆಚ್ಚು ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ.
ಮಂಗಳೂರು ದೇಶದಲ್ಲಿ ವೈದ್ಯಕೀಯ ಸೇವೆಗೆ ಗುರುತಿಸಿಕೊಂಡಿದೆ. ವೈದ್ಯಕೀಯ ಕ್ಷೇತ್ರಕ್ಕೆ ಅವಶ್ಯವಿರುವ ಸಲಕರಣೆಗಳು, ಉತ್ಪನ್ನಗಳನ್ನು ತಯಾರಿಸಲು ಅವಕಾಶವಿದೆ. ಇಲ್ಲಿಂದ ಇತರ ರಾಜ್ಯ, ದೇಶಗಳಿಗೂ ಪೂರೈಸಬಹುದು. ಕ್ಲಸ್ಟರ್ ಡೆವಲಪ್‌ಮೆಂಟ್ ಯೋಜನೆಯಡಿ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಕುರಿತು 91.32 ಕೋ.ರೂ. ವಿಸ್ತೃತ ಯೋಜನೆ ಸಿದ್ಧಪಡಿಸಿ ಅನುದಾನಕ್ಕಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಇವೆಲ್ಲವೂ ಈಗ ವೇಗ ಪಡೆಯಲು ಸಕಾಲ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಯಮಿತ (ಬಿಐಎಎಲ್) ವತಿಯಿಂದ ರಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಪನ್ನಗಳ ತಯಾರಿಕಾ ಕ್ಲಸ್ಟರ್ ಸ್ಥಾಪಿಸುವ ಪ್ರಸ್ತಾವ ಹಿಂದೆ ಮಾಡಲಾಗಿತ್ತು. ಅದನ್ನು ಜಾರಿಗೊಳಿಸುವ ಪ್ರಯತ್ನ ಆರಂಭವಾಗಬೇಕಿದೆ.
ಇವುಗಳಿಷ್ಟು ಜಿಲ್ಲೆಯ ಭವಿಷ್ಯದ ದೃಷ್ಟಿಯಿಂದ ಆಗಬೇಕಿರುವ ಯೋಜನೆಗಳು. ಇವು ಒಂದು ಭಾಗವಾದರೆ, ಮತ್ತೊಂದೆಡೆ ಕೋವಿಡ್ 19ನಿಂದ ದಿಕ್ಕೆಟ್ಟಿರುವ ಸ್ಥಳೀಯ ಆರ್ಥಿಕತೆಯನ್ನು ಸರಿದಿಶೆಗೆ ತರುವ ಹೊಣೆಗಾರಿಕೆ ಜನಪ್ರತಿನಿಧಿಗಳಿಗೆ ಹಾಗೂ ಜಿಲ್ಲಾಡಳಿತದ ಮೇಲಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಉಪಕ್ರಮಗಳಡಿ ಸಹಾಯ ಧನ, ನೆರವು ಘೋಷಿಸಿದ್ದರೂ ಅವು ಸ್ಥಳೀಯ ಉದ್ಯಮಗಳಿಗೆ, ಸ್ಥಳೀಯರಿಗೆ ಸಿಗುವಂತಾಗಲು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ.
ಆಗಬೇಕಾಗಿರುವುದು
1. ಪ್ರಸ್ತುತ ಔಷಧ ಹಾಗೂ ಕ್ಲಿನಿಕಲ್ ಸಾಮಗ್ರಿಗಳ ಉತ್ಪನ್ನ ಕ್ಷೇತ್ರ ಹೆಚ್ಚು ಬೇಡಿಕೆ ಮತ್ತು ಅವಕಾಶವನ್ನು ಹೊಂದಿರುವ ಕ್ಷೇತ್ರ. ಮಂಗಳೂರಿನಲ್ಲಿ ಔಷಧ ಪಾರ್ಕ್ ಸ್ಥಾಪಿಸುವ ಪ್ರಸ್ತಾವನೆ ಈ ಹಿಂದೆಯೇ ರೂಪಿಸಲಾಗಿತ್ತು. ಇದಕ್ಕೆ ಮರುಜೀವ ನೀಡಿ ಈ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸುವುದು.
2. ಪ್ರಸ್ತುತ ಜಿಲ್ಲೆಯಲ್ಲಿ ಅನುಷ್ಠಾನ ಹಂತದಲ್ಲಿರುವ 4 ಯೋಜನೆಗಳಲ್ಲಿ ಎಂಆರ್‌ಪಿಎಲ್ ಹೊರತುಪಡಿಸಿ ಉಳಿದ 3 ಖಾಸಗಿ ವಲಯಕ್ಕೆ ಸೇರಿದ್ದು. ಈ ಎಲ್ಲ ಯೋಜನೆಗಳು ತ್ವರಿತವಾಗಿ ಕಾರ್ಯಾರಂಭ ಮಾಡುವ ನಿಟ್ಟಿನಲ್ಲಿ ಸರಕಾರ ಮುತುವರ್ಜಿ ವಹಿಸಿ ಕಾರ್ಯ ಪ್ರವೃತ್ತವಾಗುವುದು.
3. ಹೊಸದಾಗಿ ಜಿಲ್ಲೆಗೆ ಹೂಡಿಕೆಗಳು ಬರುವ ನಿಟ್ಟಿನಲ್ಲಿ ಹೂಡಿಕೆ ಸ್ನೇಹಿ ವಾತಾವರಣ ಸೃಷ್ಟಿಸುವುದು. ಆತ್ಮನಿರ್ಭರ ಯೋಜನೆಯಲ್ಲಿ ಯಾವ ರೀತಿಯ ಉದ್ಯಮಗಳನ್ನು ಆರಂಭಿಸಬಹುದೆಂಬ ಮಾರ್ಗದರ್ಶನ ನೀಡುವುದು.
4. ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು ಆಯುರ್ವೇದ ಔಷಧಗಳು, ಖಾದಿ ಹಾಗೂ ಗ್ರಾಮೋದ್ಯೋಗ ಸೇರಿದಂತೆ ಸ್ವದೇಶಿ ಉದ್ಯಮಗಳಿಗೆ ಇರುವ ಅವಕಾಶಗಳನ್ನು ಗುರುತಿಸಿ ಮೇಕ್ ಇನ್ ಇಂಡಿಯ ಯೋಜನೆಯಲ್ಲಿ ಪ್ರೋತ್ಸಾಹ ನೀಡುವುದು.
5. ಮಲ್ಲಿಗೆಯಿಂದ ಹಿಡಿದು ಮೀನಿನವರೆಗೆ ಹಲವಾರು ರೀತಿಯ ‘ಕುಡ್ಲ’ ವೈವಿಧ್ಯಗಳಿವೆ. ಇವುಗಳನ್ನು ಪ್ರೋತ್ಸಾಹಿಸಿ ರಫ್ತಿಗೆ ಉತ್ತೇಜನ ನೀಡುವ ಯೋಜನೆಗಳನ್ನು ಜಾರಿಗೊಳಿಸುವುದು.
ಜಿಲ್ಲೆಯ ಹೂಡಿಕೆ ಚಿತ್ರಣ17,896 : ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು 1,241.74 ಕೋಟಿ ರೂ. ಹೂಡಿಕೆ 99,035 ಉದ್ಯೋಗ ಅವಕಾಶಗಳು ಬೃಹತ್ ಕೈಗಾರಿಕೆಗಳು: 22 36,088.75 ಕೋಟಿ ರೂ. ಹೂಡಿಕೆ 8,044 ಉದ್ಯೋಗ ಅವಕಾಶಗಳು ಅನುಷ್ಠಾನ ಹಂತದಲ್ಲಿರುವ ಯೋಜನೆಗಳು : 04 ಉದ್ಯಮಗಳನ್ನು ಸೆಳೆಯಲು ಸಕಾಲ
ಜಿಲ್ಲೆಯಲ್ಲಿ ಹೂಡಿಕೆಗೆ ಇರುವ ಅವಕಾಶ ಗಳ ಬಗ್ಗೆ ಪ್ರಚುರಪಡಿಸುವ ಕಾರ್ಯನಡೆಯಬೇಕಾಗಿದೆ. ಚೀನ ಬಹಿಷ್ಕರಿಸುವ ಕಂಪೆನಿಗಳನ್ನು ಸೆಳೆಯುವ ಪ್ರಯತ್ನಗಳು ನಡೆಯಬೇಕಿದೆ. ಜತೆಗೆ ಪ್ರಧಾನಿ ಘೋಷಿಸಿರುವ ಆತ್ಮನಿರ್ಭರ ಯೋಜನೆಯಡಿ ಸಣ್ಣ ಉದ್ಯಮಗಳ ಸ್ಥಾಪನೆಗೆ ಯುವಕರಿಗೆ ಮಾರ್ಗದರ್ಶನ ನೀಡುವು ದಕ್ಕೂ ಇದು ಸರಿಯಾದ ಸಮಯ. ಕೈಗಾರಿಕೆಗಳು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಒಂದೆಡೆ ಕಾರ್ಮಿಕರ ಕೊರತೆ ಎದುರಾಗಿದ್ದು ಹೊರರಾಜ್ಯ ಮತ್ತು ಹೊರಜಿಲ್ಲೆಗಳಿಂದ ಬರುವ ಕಾರ್ಮಿಕರಿಗೆ ಸರಕಾರದಿಂದ ಪೂರಕ ಕ್ರಮಗಳು ಆಗಬೇಕು. ಕಚ್ಚಾವಸ್ತುಗಳ ಕೊರತೆ, ಬೆಲೆ, ಸಾಗಾಟ ದರವೂ ದುಬಾರಿಯಾಗಿದೆ. ಇನ್ನೊಂದೆಡೆ ಮಾರುಕಟ್ಟೆಯ ಸವಾಲು ಕೂಡ ಇದೆ. ಈ ಪರಿಸ್ಥಿತಿಯಲ್ಲಿ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನಗಳು ಅಗತ್ಯವಿದೆ. ಪ್ರಸ್ತುತ ಸರಕಾರ ನೀಡಿರುವ ಸಾಲ ಕಂತು ಪಾವತಿ ವಿಸ್ತರಣೆ (ಮೊರೆಟೆರಿಯಂ) ಆಗಸ್ಟ್‌ಗೆ ಮುಗಿಯಲಿದ್ದು ಇದನ್ನು ಇನ್ನೂ ಆರು ತಿಂಗಳು ವಿಸ್ತರಿಸಬೇಕು.
– ಅಜಿತ್ ಕಾಮತ್, ಕೆನರಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ