ಜಮ್ಮು : ರಮ್ಜಾನ್ ಮುಗಿದೊಡನೆಯೇ ಜಮ್ಮು ಕಾಶ್ಮೀರದಲ್ಲಿ ಉಗ್ರರನ್ನು ಬೇಟೆಯಾಡುವ ಸೇನಾ ಕಾರ್ಯಾಚರಣೆಯನ್ನು ಪುನರಾರಂಭಿಸುವ ಕೇಂದ್ರ ಸರಕಾರದ ನಿರ್ಧಾರ ಪಿಡಿಪಿ ಮುಖ್ಯಸ್ಥೆ ಮತ್ತು ಸಿಎಂ ಮೆಹಬೂಬ ಮುಫ್ತಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ದಿಲ್ಲಿಯಲ್ಲಿನ ಪಕ್ಷದ ಪ್ರಧಾನ ಕಾರ್ಯಾಲಯದಲ್ಲಿ ಬಿಜೆಪಿ ಶಾಸಕರು ಮತ್ತು ರಾಜ್ಯ ಘಟಕದ ನಾಯಕರೊಂದಿಗೆ ಇಂದು ಸಭೆ ನಡೆಸಲಿದ್ದಾರೆ.
ವರದಿಗಳ ಪ್ರಕಾರ ಅಮಿತ್ ಶಾ ಅವರು ಸಭೆಯಲ್ಲಿ ಜಮ್ಮು ಕಾಶ್ಮೀರದ ರಾಜಕೀಯ ಮತ್ತು ಭದ್ರತಾ ಸ್ಥಿತಿಗತಿಯನ್ನು ಚರ್ಚಿಸುವವರಿದ್ದಾರೆ.
ಬಿಜೆಪಿ ರಾಜ್ಯ ಘಟಕದ ನಾಯಕ ರವೀಂದ್ರ ರೈನಾ ಮತ್ತು ಪ್ರಧಾನ ಕಾರ್ಯದರ್ಶಿ (ಸಂಘಟನೆ) ಅಶೋಕ್ ಕೌಲ್ ಅವರನ್ನು ಕೂಡ ಸಭೆಗೆ ಕರೆಸಿಕೊಳ್ಳಲಾಗಿದೆ.
ಜಮ್ಮು ಕಾಶ್ಮೀರದಲ್ಲಿನ ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳಾಗಿರುವ ಬಿಜೆಪಿ – ಪಿಡಿಪಿ ನಡುವೆ ಈಗ ಎಲ್ಲವೂ ಸರಿಯಾಗಿಲ್ಲ ಎಂಬುದೇ ಅಮಿತ್ ಶಾ ಸಭೆಯ ಮುಖ್ಯ ವಿಷಯವಾಗಿದೆ.
ಈಚೆಗೆ ಜಮ್ಮು ಕಾಶ್ಮೀರ ಸಚಿವ ಸಂಪುಟವನ್ನು ಪುನಾರಚಿಸಲಾದ ಬಳಿಕದಲ್ಲಿ ಅಮಿತ್ ಶಾ ಅವರು ರಾಜ್ಯದ ಬಿಜೆಪಿ ಶಾಸಕರನ್ನು ದಿಲ್ಲಿಗೆ ಕರೆಸಿಕೊಂಡು ಸಭೆ ನಡೆಸುತ್ತಿರುವುದು ಇದು ಎರಡನೇ ಬಾರಿಯಾಗಿದೆ.
ಇದೇ ಜೂನ್ 23ರಿಂದ ಎರಡು ದಿನಗಳ ಜಮ್ಮು ಭೇಟಿ ಕಾರ್ಯಕ್ರಮದಲ್ಲಿ ಅಮಿತ್ ಶಾ ಅಲ್ಲಿಗೆ ಹೋಗಲಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಯೋಧ ಔರಂಗಜೇಬ್ ಮತ್ತು ರೈಸಿಂಗ್ ಕಾಶ್ಮೀರ ಪತ್ರಿಕೆ ಮುಖ್ಯ ಸಂಪಾದಕ ಶುಜಾತ್ ಭುಕಾರಿ ಅವರ ಹತ್ಯೆ ನಡೆದ ಕಾರಣ ರಮ್ಜಾನ್ ಮುಗಿದ ಬೆನ್ನಿಗೇ ಕೇಂದ್ರ ಸರಕಾರ ಜಮ್ಮು ಕಾಶ್ಮೀರದಲ್ಲಿನ ಉಗ್ರ ನಿಗ್ರಹ ಸೇನಾ ಕಾರ್ಯಾಚರಣೆಯನ್ನು ಪುನಾರಂಭಿಸಲು ನಿರ್ಧರಿಸಿತ್ತು.