ಬೆಳಗಾವಿ: 33 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ನಿಷ್ಠಾವಂತಿಕೆಯ ಸೇವೆ ಸಲ್ಲಿಸಿದ ಎಎಸ್ಐ ಎಂ.ಎ. ಖಾನಾಪುರೆ ಅವರು ಸೇವಾ ನಿವೃತ್ತಿ ಹೊಂದಿದ್ದಕ್ಕೆ ಸೋಮವಾರ ಎಪಿಎಂಸಿ ಪೊಲೀಸ್ ಠಾಣೆ ಆವರಣದಲ್ಲಿ ಅವರನ್ನು ಕುದುರೆಯ ಮೇಲೆ ಕೂರಿಸಿ ವಿಶೇಷವಾಗಿ ಬೀಳ್ಕೊಡಲಾಯಿತು.
ಎಪಿಎಂಸಿ ಠಾಣೆಯ ಎಎಸ್ಐ ಆಗಿ ಸೇವೆ ಸಲ್ಲಿಸುತ್ತಿದ್ದ ಖಾನಾಪುರೆ ಅವರು ಸೋಮವಾರ ಸೇವಾ ನಿವೃತ್ತಿ ಹೊಂದಿದರು. ಆವರಣದಲ್ಲಿ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಹಾಗೂ ಸಿಬ್ಬಂದಿ ಸೇರಿ ಅವರನ್ನು ಕುದುರೆ ಮೇಲೆ ಮೆರವಣಿಗೆ ನಡೆಸಿದ್ದು ವಿಶೇಷವಾಗಿತ್ತು. ಖಾನಾಪುರೆ ಅವರ ಕುಟುಂಬ ವರ್ಗದವರೂ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಎಸ್ಐ ಖಾನಾಪುರೆ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.
ಮಹಾನಗರ ಪೊಲೀಸ್ ಆಯುಕ್ತ ಲೋಕೇಶಕುಮಾರ ಮಾತನಾಡಿ, ಎಎಸ್ಐ ಖಾನಾಪುರೆ ಅವರು ತಮ್ಮ ೩೩ ವರ್ಷಗಳ ಸೇವಾವಧಿಯಲ್ಲಿ ಒಂದೂ ದೀರ್ಘಾವಧಿ ರಜೆ ಪಡೆದುಕೊಂಡಿಲ್ಲ. ಸಿಬ್ಬಂದಿ ಹಾಗೂ ಸಾರ್ವನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಪ್ರಾಮಾಣಿಕ ಹಾಗೂ ನಿಷ್ಠಾವಂತಿಕೆಯ ಸೇವೆಯಿಂದ ಇಲಾಖೆಗೆ ಒಳ್ಳೆಯ ಹೆಸರು ತಂದು ಕೊಟ್ಟಿದ್ದಾರೆ. ಇಂಥ ಅಧಿಕಾರಿಗಳು ಇನ್ನುಳಿದ ಸಿಬ್ಬಂದಿಗಳಿಗೆ ಮಾದರಿ ಆಗಿದ್ದಾರೆ ಎಂದು ಕೊಂಡಾಡಿದರು.
ಸಾಮಾನ್ಯವಾಗಿ ನಿವೃತ್ತಿ ಹೊಂದುವ ವೇಳೆ ಬಹುತೇಕರು ಸೇವೆಗೆ ಧಕ್ಕೆ ಆಗಬಹುದೆಂಬ ಉದ್ದೇಶದಿಂದ ದೀರ್ಘಾವಧಿ ರಜೆ ಪಡೆಯುವುದು ಸಹಜ. ಆದರೆ ಖಾನಾಪುರೆ ಅವರು ದೀರ್ಘಾವಧಿ ರಜೆ ಪಡೆಯದೇ ನಿಷ್ಠಾವಂತಿಕೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಮುಂದಿನ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಹಾರೈಸಿದರು.
ಡಿಸಿಪಿ ಯಶೋಧಾ ವಂಟಗೋಡಿ, ಎಸಿಪಿ ಆರ್.ಆರ್. ಕಲ್ಯಾಣಶೆಟ್ಟರ ಸೇರಿದಂತೆ ಇತರರು ಇದ್ದರು.